ವಾರಂಗಲ್: ಬಾವಿಗೆ ಹಾರಿ 9 ಜನ ಆತ್ಮಹತ್ಯೆ ಪ್ರಕರಣಕ್ಕೆ ಭಯಾನಕ ತಿರುವು | ಇದು ಆತ್ಮಹತ್ಯೆಯಲ್ಲ ಕೊಲೆ…!

ವಾರಂಗಲ್‌: ಕಳೆದೊಂದು ವಾರದ ಹಿಂದೆ ತೆಲಂಗಾಣದ ವಾರಂಗಲ್ ಸಮೀಪದಲ್ಲಿ ಬಾವಿಯೊಂದರಲ್ಲಿ ಎರಡು ಮೂರು ದಿನಗಳ ಅಂತರದಲ್ಲಿ 9 ಕಾರ್ಮಿಕ ಕುಟುಂಬದ ಜನರ ಶವಗಳು ಪತ್ತೆಯಾಗಿದ್ದವು. ಇಡೀ ರಾಜ್ಯವನ್ನೆ ನಡುಗಿಸಿದ್ದ ಪ್ರಕರಣವನ್ನು ಆತ್ಮಹತ್ಯೆ ಎಂದು ನಂಬಲಾಗಿತ್ತು. ಲಾಕ್ಡೌನ್ ಸಂದರ್ಭ ಕೆಲಸವಿಲ್ಲದೆ ಆಹಾರದ ಕೊರತೆಯಿಂದ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಹೇಳಲಾಗಿತ್ತು. ಇದೀಗ ಈ ಪ್ರಕರಣಕ್ಕೆ ರೋಚಕ ತಿರುವು ಲಭಿಸಿದೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂಬ ರೋಚಕ ಸತ್ಯವನ್ನು ಪೋಲೀಸರು ಬಯಲಿಗೆಳೆದಿದ್ದಾರೆ.

ಒಂದು ಕೊಲೆಯನ್ನು ಮುಚ್ಚಿಡುವ ಯತ್ನದಲ್ಲಿ ವಲಸೆ ಕಾರ್ಮಿಕನೊಬ್ಬ ಒಂಬತ್ತು ಕೊಲೆ ಮಾಡಿರುವುದಾಗಿ ತೆಲಂಗಾಣ ಪೊಲೀಸರು ಹೇಳಿದ್ದಾರೆ.

ಮೊಹಮ್ಮದ್‌ ಮಕ್ಸೂದ್‌ ಎಂಬ ವ್ಯಕ್ತಿಯ ಕುಟುಂಬದ ಎಲ್ಲ ಸದಸ್ಯರು ಕೊಲೆಯಾಗಿದ್ದಾರೆ. ಪಶ್ಚಿಮ ಬಂಗಾಳದಿಂದ ವಲಸೆ ಬಂದಿದ್ದ ಅವರು 20 ವರ್ಷಗಳ ಹಿಂದೆ ತೆಲಂಗಾಣದಲ್ಲಿ ನೆಲೆಯೂರಿದ್ದರು. ಕೊಲೆ ಆರೋಪಿ ಸಂಜಯ್‌ ಕುಮಾರ್‌ ಯಾದವ್‌ (24), ಬಿಹಾರದಿಂದ ಆರು ವರ್ಷಗಳ ಹಿಂದೆ ವಾರಂಗಲ್‌ಗೆ ಬಂದು ನೆಲೆಸಿದ್ದ. ಕೊಲೆಯಾಗಿರುವ ಒಂಬತ್ತು ಜನರಲ್ಲಿ ಆರು ಮಂದಿ ಮಕ್ಸೂದ್‌ ಕುಟುಂಬದವರು.

ಮಕ್ಸೂದ್‌ (55), ಆತನ ಪತ್ನಿ ನಿಶಾ (48), ಇಬ್ಬರು ಗಂಡು ಮಕ್ಕಳು ಶಬಾಜ್‌ (21) ಮತ್ತು ಸೊಹೈಲ್‌ (18), ಮಗಳು ಬುಶ್ರಾ (22) ಹಾಗೂ ಆಕೆಯ ಮೂರು ವರ್ಷದ ಮಗ ಎಲ್ಲರೂ ವಾರಂಗಲ್‌ ಸಮೀಪದ ಗೊರ್ರೆಕುಂಟಾ ಗ್ರಾಮದ ಗೋಣಿಚೀಲ ಘಟಕದಲ್ಲಿ ಕಲಸ ಮಾಡಿಕೊಂಡು ಸ್ಥಳೀಯ ಪ್ರದೇಶದಲ್ಲಿ ವಾಸವಿದ್ದರು. ಹಾಗು ಇದೇ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿಹಾರ ಮೂಲದ ಶ್ರೀರಾಮ್‌ (21) ಮತ್ತು ಶ್ಯಾಮ್‌(22), ಮಕ್ಸೂದ್‌ ಕುಟುಂದ ಸ್ನೇಹಿತನಾಗಿದ್ದ ಶಕೀಲ್‌ (30) ಕೊಲೆಯಾದವರು.

ಸಾಮೂಹಿಕ ಸಾವಿನ ಜಾಡು ಹಿಡಿದು ತನಿಖೆ ನಡೆಸಿದ ಪೋಲೀಸರ ಆರು ತಂಡ 72 ಗಂಟೆಗಳಲ್ಲಿ ಭಯಾನಕ ಕೊಲೆಯ ರಹಸ್ಯವನ್ನು ಹೊರತಂದಿತು.

‘ಆರೋಪಿ ಸಂಜಯ್,‌ ರಫೀಕಾ (36) ಜೊತೆಗೆ ಅನೈತಿಕ ಸಂಭಂದ ಹೊಂದಿದ್ದ. ಕೊಲೆಯಾಗಿರುವ ನಿಶಾಳ ಹಿರಿಯ ಅಕ್ಕನ ಮಗಳು ರಫೀಕಾಳನ್ನು ಸಂಜಯ್‌ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದನು. ಆದರೆ, ಸಂಜಯ್‌ ರಫೀಕಾಳ ಹದಿಹರೆಯದ ವಯಸ್ಸಿನ ಮಗಳೊಂದಿಗೆ ಆಪ್ತವಾಗಿರುವುದನ್ನು ಗಮನಿಸಿ ವಿರೋಧಿಸಿರುತ್ತಾಳೆ. ರಫೀಕಾ, ಸಂಜಯ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿರುತ್ತಾಳೆ. ಸಂಜಯ್‌ ಆಕೆಯನ್ನು ಕೊಲ್ಲಲು ನಿರ್ಧರಿಸುತ್ತಾನೆ. ಮದುವೆಗೆ ಸಂಬಂಧಿಸಿದಂತೆ ಮನೆಯಲ್ಲಿರುವ ಹಿರಿಯರೊಂದಿಗೆ ಮಾತುಕತೆ ನಡೆಸಬೇಕೆಂದು ಹೇಳಿ, ಮಾರ್ಚ್‌ 6ರಂದು ರಫೀಕಾಳನ್ನು ಸಂಜಯ್‌ ಗರೀಬ್‌ ರಥ್‌ ರೈಲಿನ ಮೂಲಕ ವೈಝಾಗ್‌ಗೆ ಕರೆದುಕೊಂಡು ಹೋಗಿರುತ್ತಾನೆ,’ ಎಂದು ವಾರಂಗಲ್‌ ಪೊಲೀಸ್‌ ಕಮಿಷನರ್‌ ಡಾ.ವಿ.ರವೀಂದರ್‌ ಪ್ರಕರಣದ ಕುರಿತು ವಿವರಿಸಿದ್ದಾರೆ.

‘ನಿದ್ರೆ ಬರಿಸುವ ಮಾತ್ರೆಗಳನ್ನು ಮಜ್ಜಿಗೆಯಲ್ಲಿ ಹಾಕಿದ್ದ ಸಂಜಯ್‌, ಅದನ್ನು ರಫೀಕಾಳಿಗೆ ಕುಡಿಸಿರುತ್ತಾನೆ. ಆಕೆ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಆಂಧ್ರ ಪ್ರದೇಶದ ನಿಡದವೊಲು ಸಮೀಪ ಚಲಿಸುವ ರೈಲಿನಿಂದ ತಳ್ಳುತ್ತಾನೆ. ಆಕೆಯನ್ನು ಸಾಯಿಸಿದ ನಂತರ ಸಂಜಯ್‌ ಗೀಸುಕೊಂಡಾಗೆ ಮರಳಿರುತ್ತಾನೆ. ರೈಲ್ವೆ ಪೊಲೀಸರು ಮೃತ ಮಹಿಳೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.’

‘ನಂತರದಲ್ಲಿ ನಿಶಾ ರಫೀಕಾಳ ಬಗ್ಗೆ ವಿಚಾರಿಸಿರುತ್ತಾಳೆ ಹಾಗೂ ಸಂಶಯ ವ್ಯಕ್ತವಾಗಿ ಪೊಲೀಸರಿಗೆ ದೂರು ದಾಖಲಿಸುವುದಾಗಿ ಬೆದರಿಸಿರುತ್ತಾಳೆ. ಆಗ ಸಂಜಯ್‌ ಮಕ್ಸೂದ್‌ ಕುಟುಂಬವನ್ನು ಕೊಲೆ ಮಾಡಲು ನಿರ್ಧರಿಸುತ್ತಾನೆ. ಗೋಣಿಚೀಲ ಘಟಕದಲ್ಲಿ 5 ದಿನಗಳ ವರೆಗೂ ಅವರ ಕುಟುಂಬದ ಆಗುಹೋಗುಗಳನ್ನು ಗಮನಿಸುವ ಆತ, ಮಕ್ಸೂದ್‌ ಮಗ ಶಬಾಜ್‌ನ ಹುಟ್ಟಿದ ದಿನ ಮೇ 20ರಂದು ತನ್ನ ಯೋಜನೆ ಕಾರ್ಯಗತಗೊಳಿಸಲು ನಿರ್ಧರಿಸುತ್ತಾನೆ. ಅವರ ಊಟದಲ್ಲಿ ನಿದ್ರೆ ಮಾತ್ರೆಗಳನ್ನು ಮೆರೆಸುತ್ತಾನೆ ಹಾಗೂ ಅವರೆಲ್ಲ ನಿದ್ರೆಗೆ ಜಾರುತ್ತಿದ್ದಂತೆ, ಎಲ್ಲರನ್ನೂ ಗೋಣಿ ಚೀಲದಲ್ಲಿ ತುಂಬಿ ಎಳೆದು ಬಾವಿಯೊಳಗೆ ಹಾಕುತ್ತಾನೆ. ರಾತ್ರಿ 12:30ರಿಂದ ಬೆಳಗಿನ ಜಾವ 5ರೊಳಗೆ ಈ ಕಾರ್ಯ ಪೂರ್ಣಗೊಳಿಸುತ್ತಾನೆ,’ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಬಿಹಾರದ ಇತರೆ ವಲಸೆ ಕಾರ್ಮಿಕರು, ಇವನು ನಡೆಸಿದ ಕೃತ್ಯವನ್ನು ಬಹಿರಂಗ ಪಡಿಸಬಹುದು ಎಂಬ ಭಯದಲ್ಲಿ ಇಬ್ಬರು ಯುವಕರನ್ನೂ ಕೊಲೆ ಮಾಡುತ್ತಾನೆ. ಸಿಸಿಟಿವಿ ದೃಶ್ಯಗಳಲ್ಲಿ ಸಂಜಯ್‌ನ ಚಲನವಲನಗಳು ಸೆರೆಯಾಗಿದ್ದು, ಪ್ರಕರಣದ ಪ್ರಮುಖ ಸಾಕ್ಷಿಯಾಗಿವೆ. ಪೊಲೀಸರು ಸಂಜಯ್‌ನನ್ನು ವಶಕ್ಕೆ ಪಡೆದಿದ್ದು, ಆರೋಪ ಪಟ್ಟಿ ದಾಖಲಿಸುತ್ತಿದ್ದಾರೆ.

Leave A Reply

Your email address will not be published.