ಪತ್ನಿಯನ್ನು ಕೊಲ್ಲಲು ‘ ನಾಗ ‘ ಪ್ಪನಿಗೆ ಸುಪಾರಿ ಕೊಟ್ಟನಾ ಪತಿ ?!.

ಕೊಲ್ಲಂ: ಆಕೆಯನ್ನು ಹಾವು ಎರಡು ಬಾರಿ ಹುಡುಕಿ ಹುಡುಕಿ ಕಚ್ಚಿತ್ತು!! ಮೊದಲ ಸಲ ಹಾವು ಕಚ್ಚಿದರೂ ಆಕೆ ಬಚಾವಾಗಿದ್ದಳು. ಎರಡನೆಯ ಬಾರಿ ಕೂಡ ಹಾವು ಕಚ್ಚಿತ್ತು. ಅದರಲ್ಲಿ ಆಕೆ ತೀರಿಕೊಂಡಿದ್ದಾಳೆ.
ಆದರೆ ಎರಡನೆಯ ಬಾರಿ ಹಾವು ಕಚ್ಚಿ ಆಕೆ ಮೃತಪಟ್ಟಾಗ ಆಕೆಯ ಪೋಷಕರಿಗೆ ಅನುಮಾನ ಬಂದಿದೆ.

ಅಡೂರ್​ನ ಪರಕೋಡೆಯ ನಿವಾಸಿ ಉತ್ತರಾ (25) ಹಾವು ಕಚ್ಚಿ ಸಾವಿಗೀಡಾದವಳು. ಸೂರಜ್​ ಮತ್ತು ಉತ್ತರಾ ಅಡೂರ್​ನ ಪರಕೋಡೆಯಲ್ಲಿ ಸಂಸಾರ ನಡೆಸುತ್ತಿದ್ದರು. ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಇವರ ದಾಂಪತ್ಯಕ್ಕೆ ಓರ್ವ ಪುತ್ರನೂ ಜನಿಸಿದ್ದ.

ಮೊನ್ನೆ ಒಂದು ಬಾರಿ ಆಕೆಗೆ ವಿಷದ ಹಾವು ಕಚ್ಚಿ ಆಕೆ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾಳೆ. ಆಸ್ಪತ್ರೆಯಿಂದ ಆಕೆ ವಿಶ್ರಾಂತಿಗೆ ಎಂದು ತನ್ನ ತವರು ಮನೆಗೆ ಹೋಗಿದ್ದಳು. ಅಲ್ಲಿಗೆ ಪತಿ ಸೂರಜ್ ಕೂಡಾ ಹೋಗಿದ್ದಾನೆ. ಮೊನ್ನೆ ಮೇ 7 ರಂದು ಆಕೆಗೆ ಆಕೆಯ ತವರು ಮನೆಯ ರೂಮಿನಲ್ಲಿ ಹಾವು ಮತ್ತೆ ಕಚ್ಚಿದೆ.
ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಳು. ಆಕೆಯ ಸಾವಿಗೆ ಹಾವಿನ ಕಡಿತವೇ ಕಾರಣ ಎಂದು ವೈದ್ಯರು ಹೇಳಿದ್ದರು.

ಆದರೆ ಅದು ಎಸಿ ಕೋಣೆಯಾಗಿದ್ದು, ಕಿಟಕಿಗಳು ಮುಚ್ಚಿದ್ದರೂ ಹಾವು ಒಳ ಬಂದದ್ದು ಹೇಗೆ ಎಂಬ ಅನುಮಾನ ಮನೆಯವರಿಗೆ ಮೂಡಿತ್ತು. ಅಲ್ಲದೆ ಎರಡೆರಡು ಬಾರಿ ಹೇಗೆ ಹಾವು ಕಚ್ಚುವುದು ಎಂಬ ಈ ಹಿನ್ನೆಲೆಯಲ್ಲಿ ಉತ್ತರಾಳ ಪಾಲಕರು ಪೊಲೀಸರಿಗೆ ದೂರು ನೀಡಿದ್ದರು. ಆಗ ಪೊಲೀಸರು ತನಿಖೆ ಶುರುಮಾಡಿದ್ದಾರೆ. ಆಗ ಅಸಲಿ ಸಂಗತಿ ಬಿಚ್ಚಿಕೊಂಡಿದೆ.

ಆದರೆ, ಸೂರಜ್​ ಇತ್ತೀಚೆಗೆ ಮತ್ತೊಬ್ಬಾಕೆಯಲ್ಲಿ ಅನುರಕ್ತನಾಗಿದ್ದ. ಆಕೆಯನ್ನು ಮದುವೆಯಾಗಬೇಕು ಎಂದು ನಿರ್ಧರಿಸಿದ್ದ ಆತ, ಉತ್ತರಾಳನ್ನು ಕೊಲೆ ಮಾಡಲು ನಿರ್ಧರಿಸಿದ್ದ. ಆದರೆ, ತಾನೇ ಕೊಲೆ ಮಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ. ಹೇಗಾದರೂ, ಸಹಜ ಸಾವು ಆಗುವಂತೆ ನೋಡಿಕೊಳ್ಳಬೇಕೆಂದು ಆತ ಪ್ಲಾನ್ ಹೊಸೆದು ಮನಸ್ಸಿನಲ್ಲೇ ಸ್ಕ್ರಿಪ್ಟ್ ಬರೆದಿದ್ದ.

ಅದರಂತೆಯೇ ಆಕಸ್ಮಿಕವೆಂಬಂತೆ ಕಾಣಲು 5 ತಿಂಗಳಿಂದ ಸಂಚು ರೂಪಿಸಿದ್ದ. ಇದಕ್ಕಾಗಿ ಹಾವಾಡಿಗರನ್ನು ಸಂಪರ್ಕಿಸಿ ವಿಷವಿರುವ ಹಾವನ್ನು ಕೊಡುವಂತೆ ಕೇಳಿದ್ದ. ಅದರಂತೆ ಹಾವಾಡಿಗರು ಮಂಡಲದ ಹಾವನ್ನು ಕೊಟ್ಟಿದ್ದರು. ಈ ಹಾವನ್ನು ಮಾರ್ಚ್​ 2 ರಂದು ಮನೆಗೆ ತೆಗೆದುಕೊಂಡು ಹೋಗಿದ್ದ ಸೂರಜ್​, ಅದರಿಂದ ಪತ್ನಿಯನ್ನು ಕಚ್ಚಿಸಿದ್ದ. ಆದರೆ, ಆ ಹಾವಿನಲ್ಲಿ ಹೆಚ್ಚು ವಿಷ ಇರದಿದ್ದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಉತ್ತರಾ ಬದುಕುಳಿದಿದ್ದಳು. ಬಳಿಕ ವಿಶ್ರಾಂತಿ ಪಡೆಯಲೆಂದು ಆಂಚಲ್​ನ ಇರಂನಲ್ಲಿರುವ ತವರಿಗೆ ಬಂದಿದ್ದಳು.

ಮೊದಲ ಪ್ರಯತ್ನ ವಿಫಲವಾಗಿದ್ದರಿಂದ ಹತಾಶನಾಗಿದ್ದ ಸೂರಜ್​ ಈ ಬಾರಿ ಹೆಚ್ಚು ವಿಷವಿರುವ ಹಾವನ್ನು ಕೊಡುವಂತೆ ಹಾವಾಡಿಗರಿಗೆ ದುಂಬಾಲು ಬಿದ್ದಿದ್ದ. ಆತ 10 ಸಾವಿರ ರೂಪಾಯಿ ನೀಡಿದ್ದ. ಅದರಂತೆ ಹಾವಾಡಿಗರು ಈ ಬಾರಿ,  ನಾಗರಹಾವನ್ನೇ ತಂದುಕೊಟ್ಟಿದ್ದರು.
ಚೀಲದಲ್ಲಿ ಹಾವನ್ನು ಹಾಕಿಕೊಂಡು ಯಾರಿಗೂ ಗೊತ್ತಾಗದಂತೆ ಅತ್ತೆ ಮನೆಗೆ ಕೊಂಡೊಯ್ದಿದ್ದ ಸೂರಜ್​. ಮೇ 7 ರ ರಾತ್ರಿ ಅದನ್ನು ಪತ್ನಿಯ ಮೇಲೆ ಬಿಟ್ಟು, ಕಚ್ಚುವಂತೆ ಮಾಡಿದ್ದ. ಮರುದಿನ ಬೆಳಗ್ಗೆ ಉತ್ತರಾ ಎಷ್ಟೊತ್ತಾದರೂ ಕೋಣೆಯಿಂದ ಹೊರ ಬರದಿದ್ದಾಗ ಅನುಮಾನಗೊಂಡ ಆಕೆಯ ಪಾಲಕರು ಹೋಗಿ ನೋಡಿದಾಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಳು.

ಅನುಮಾನಗೊಂಡು ಸೂರಜ್​ನನ್ನು ವಿಚಾರಿಸಿದಾಗ, ಹಾವಿನ ಕಡಿತದ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ನಾಟಕವಾಡಿದ್ದ. ಪೊಲೀಸರ ವಿಚಾರಣೆ ವೇಳೆ ಆಸ್ತಿಯನ್ನು ಲಪಟಾಯಿಸುವ ಉದ್ದೇಶದಿಂದ ಉತ್ತರಾಳ ಸಹೋದರನೇ ಹಾವನ್ನು ತಂದು, ಆಕೆಗೆ ಕಚ್ಚಿಸಿ ಸಾಯಿಸಿರಬಹುದು ಎಂಬ ಸೂರಜ್​ ಹೇಳಿಕೆ ನೀಡಿದ್ದ. ಈತನ ಈ ಮಾತಿನಿಂದ ಪೊಲೀಸರಿಗೆ ಅವಮಾನ ಬಲವಾಯಿತು. ನಂತರ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಆಗ ಉತ್ತರಾಳನ್ನು ಕೊಲ್ಲಲು ನಾಗರಹಾವನ್ನು ತಾನೇ ತಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೆ, ಆಕೆಯನ್ನು ಕೊಂದು ತಾನು ಪ್ರೀತಿಸುತ್ತಿರುವ ಬೇರೊಂದು ಹುಡುಗಿಯನ್ನು ಮದುವೆಯಾಗುವ ಇರಾದೆ ಹೊಂದಿದ್ದ ಎಂದು ತನಿಖೆಯಿಂದ ಬಯಲಾಗಿದೆ.

Leave A Reply

Your email address will not be published.