ಪಾಕಿಸ್ತಾನದಲ್ಲಿ ಇಂದು 107 ಜನರ ಬಲಿ ಪಡೆದ ವಿಮಾನ ಅಪಘಾತ | ಮೇ 22 ರಂದು ಮಂಗಳೂರಿನಲ್ಲೂ ನಡೆದಿತ್ತು 158 ಬಲಿ ಪಡೆದ ದುರಂತ

ಕರಾಚಿ: 2010 ಮೇ 22ರಂದು ಮಂಗಳೂರಿನಲ್ಲಿ ಜಗತ್ತೆ ಬೆಚ್ಚಿ ಬೀಳುವಂತೆ ನಡೆದಿದ್ದ ವಿಮಾನ ದುರಂತದ ಕಹಿ ನೆನಪುಗಳನ್ನು ಜನತೆ ನೆನಪಿಸಿಕೊಳ್ಳುತ್ತಿದ್ದಂತೆ ಅಂತಹದೇ ಭಯಾನಕ ವಿಮಾನ ದುರಂತವೊಂದು ನಡೆದು ಹೋಗಿದೆ.

ಆ ಘಟನೆಗೆ ಹತ್ತು ವರ್ಷ ತುಂಬುತ್ತಿದ್ದಂತೆಯೇ ಅದೇ ದಿನಾಂಕದಂದು ಪಾಕಿಸ್ತಾನದ ಕರಾಚಿಯಲ್ಲಿ ಇಂದು ನಡೆದ ವಿಮಾನ ದುರಂತದಲ್ಲಿ ಸಿಬ್ಬಂದಿಯೂ ಸೇರಿ ಎಲ್ಲಾ 107 ಪ್ರಯಾಣಿಕರ ದುರ್ಮರಣ ಹೊಂದಿದ್ದಾರೆ.

ಸರಿಯಾಗಿ ಇಂದಿಗೆ 10 ವರ್ಷಗಳ ಹಿಂದೆ (22 ಮೇರ, 2010) ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಅಂತಾರಾಷ್ಟ್ರೀಯ ವಿಮಾನ ದುರಂತ ಅಂತ್ಯ ಕಂಡಿತ್ತು.

ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಘಾತಕ್ಕೀಡಾಗಿ ಸಿಬ್ಬಂದಿಯೂ ಸೇರಿ ವಿಮಾನದಲ್ಲಿದ್ದ 158 ಪ್ರಯಾಣಿಕರು ಸಾವನ್ನಪ್ಪಿದ್ದರು.
ವಿಮಾನ ರನ್‌ವೇಯಲ್ಲಿ ಇಳಿಯುತ್ತಿದ್ದಂತೇ ನಿಯಂತ್ರಣ ತಪ್ಪಿ ಸಂಭವಿಸಿದ್ದ ಈ ಭೀಕರ ಅಪಘಾತದಲ್ಲಿ ಕೇವಲ 8 ಜನ ಮಾತ್ರ ಬದುಕುಳಿದಿದ್ದರು.

ಇಂದಿನ ಕರಾಚಿ ವಿಮಾನ ಅಪಘಾತಕ್ಕೂ 10 ವರ್ಷಗಳ ಹಿಂದೆ ಬಜ್ಪೆ ವಿಮಾನ ನಿಲ್ದಾಣದಲ್ಲಿಸಂಭವಿಸಿದ ವಿಮಾನ ಅಪಘಾತಕ್ಕೂ ದಿನಾಂಕದ ಸಾಮ್ಯತೆ ಇರುವುದು ಕಾಕತಾಳೀಯ.

ಲಾಹೋರ್‌ನಿಂದ ಕರಾಚಿಗೆ ಬರುತ್ತಿದ್ದ PIAನ PK-8303 ವಿಮಾನ, ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಕೇವಲ ಐದು ನಿಮಿಷಗಳು ಬಾಕಿ ಇರುವಾಗ ಅಪಘಾತಕ್ಕೀಡಾಗಿದೆ.

PIAನ PK-8303 ವಿಮಾನದಲ್ಲಿ 99 ಪ್ರಯಾಣಿಕರು ಹಾಗೂ 8 ಸಿಬ್ಬಂದಿ ಪ್ರಯಾಣಿಸುತ್ತಿದ್ದು, ಎಲ್ಲರೂ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.

ಈ ಎರಡೂ ವಿಮಾನ ದುರಂತಗಳು ಒಂದೇ ದಿನ(ಮೇ 22) ಸಂಭವಿಸಿದ್ದು, ಎರಡೂ ಅಪಘಾತಗಳ ನಡುವೆ 10 ವರ್ಷಗಳ ಅಂತರವಿದೆ. ಎರಡೂ ವಿಮಾನಗಳು ವಿಮಾನ ನಿಲ್ದಾಣದ ಅತ್ಯಂತ ಹತ್ತಿರದಲ್ಲಿ ಇದ್ದಾಗಲೇ ಅಪಘಾತಕ್ಕೀಡಾಗಿವೆ.

ಆದರೆ 10 ವರ್ಷಗಳ ಹಿಂದೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಅಪಘಾತದಲ್ಲಿ ಏರ್ ಇಂಡಿಯಾದ ಬೋಯಿಂಗ್ 737-800 ವಿಮಾನ ರನ್‌ವೇಯಲ್ಲಿ ಇಳಿದ ಮೇಲೆ ಅಪಘಾತಕ್ಕೀಡಾಗಿದ್ದರೆ, PIAನ PK-8303 ವಿಮಾನ ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವುದಕ್ಕೂ ಮೊದಲೇ ಅಪಘಾತಕ್ಕೀಡಾಗಿದೆ.

PIAನ PK-8303 ವಿಮಾನ ಕರಾಚಿ ಬಳಿಯ ಮಾಲಿರ್‌ನ ಮಾಡೆಲ್ ಕಾಲೋನಿ ಬಳಿಯ ಜಿನ್ನಾ ಗಾರ್ಡ್‌ನ್ ವಸತಿ ಪ್ರದೇಶದಲ್ಲಿ ವಿಮಾನ ಅಪಘಾತವಾಗಿರುವುದರಿಂದ ಸಾವು-ನೋವಿನ ಸಂಖ್ಯೆ ಮತ್ತಷ್ಟು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

Leave A Reply

Your email address will not be published.