ಮಂಗಳೂರು ವಿಮಾನ ದುರಂತಕ್ಕೆ ನಿನ್ನೆಗೆ 10 ವರ್ಷ | ಹೇಗಾಯಿತು ಗೊತ್ತಾ ಆಕ್ಸಿಡೆಂಟ್ ?!
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22 ರ ಮುಂಜಾನೆ ಏರ್ ಇಂಡಿಯಾ ವಿಮಾನ ರನ್ ವೇ ಯಿಂದ ಹೊರಕ್ಕೆ ಬಂದು ಕಮರಿಗೆ ಬಿದ್ದು ಸಂಭವಿಸಿದ ಮಹಾ ದುರಂತಕ್ಕೆ ಇಂದಿಗೆ 10 ವರ್ಷ ಕಳೆದಿದೆ. ದುರಂತದಲ್ಲಿ ಪೈಲಟ್, ಸಿಬ್ಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. 8 ಮಂದಿ ಪವಾಡ ಸದೃಶವಾಗಿ ಪಾರಾಗಿ ಬಂದಿದ್ದಾರೆ.
ದುಬೈಯಿಂದ ಹೊರಟ ವಿಮಾನ ಎಲ್ಲ ಸುರಕ್ಷಾ ಸಂಕೇತಗಳ ವಿನಿಮಯದೊಂದಿಗೆ ಇಳಿದಿತ್ತು. ಸುತ್ತಲ ವಾತಾವರಣ ಮೂರೂವರೆ ಕಿಲೋಮೀಟರ್ ಗಳಷ್ಟು ದೂರ ನೋಡುವಷ್ಟು ತಿಳಿಯಾಗಿತ್ತು. ಆದರೂ ದುರಂತ ನಡೆದು ಹೋಗಿತ್ತು. ಘಟನೆಗೆ ಕಾರಣವನ್ನು ಕೆದಕುತ್ತಾ ಹೋದ ಹಲವು ತನಿಖಾ ತಂಡಗಳು ಕೊನೆಗೊಂದು ನಿರ್ಧಾರಕ್ಕೆ ಬಂದಿದ್ದವು.
ವಿಮಾನದ ಮುಖ್ಯ ಪೈಲೆಟ್ ಆಗಿದ್ದ ಗ್ಲುಸಿಕಾ ನು ತನ್ನ ಸಹ ಪೈಲೆಟ್ ಅಹ್ಲುವಾಲಿಯಾ ನೀಡಿದ ಎಚ್ಚರಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಮುಂದುವರಿದಿದ್ದ. ದುಬೈನಿಂದ ಮಂಗಳೂರಿಗೆ ಮುಂಜಾನೆ ಹೊರಟ ಬೋಯಿಂಗ್ 737 ವಿಮಾನ ಇನ್ನೇನು ರನ್ ವೇ ನಲ್ಲಿ ಇಳಿದು, ಪ್ರಯಾಣಿಕರು ಇನ್ನೇನು ತಮ್ಮ ಮನೆಗೆ ಸುರಕ್ಷಿತವಾಗಿ ಹೋಗಿಬಿಡಬೇಕು ಅನ್ನುವಷ್ಟರಲ್ಲಿ ಎಡವಟ್ಟು ಮಾಡಿಕೊಂಡಿತ್ತು. ಅದು ಒಟ್ಟು 158 ಜೀವಗಳನ್ನು ಬಲಿ ಪಡೆದಿತ್ತು.
ಆ ದಿನ ಮಂಗಳೂರಿನಲ್ಲಿ ಇಳಿಯಬೇಕಾಗಿದ್ದ ರನ್ ವೇ ಬರೊಬ್ಬರಿ 2.6 ಕಿಲೋಮೀಟರ್ ಗಳ ಉದ್ದದ ರನ್ ವೆ. ಯಾವುದೇ ವಿಮಾನ ರನ್ ವೇ ನಲ್ಲಿ ಇಳಿಯುವ ಮೊದಲು ಅತ್ಯಂತ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹವಾಮಾನ ಸರಿಯಾಗಿರಬೇಕು. ರನ್ ವೇಯಲ್ಲಿ ಮಂಜು ಕವಿದಿರಬಾರದು. ಸರಿಯಾಗಿ ಕಾಣಿಸುತ್ತಿರಬೇಕು. ಅಲ್ಲಿ ಬೇರಾವುದೇ ವಿಮಾನ ಇರಬಾರದು. ಹಾಗಿದ್ದರೆ ಮಾತ್ರ ವಿಮಾನ ಇಳಿಸಲು ಅನುಮತಿ ದೊರೆಯುತ್ತದೆ.
ಎಲ್ಲ ಸರಿಯಿದೆ ಎಂದು ಖಚಿತವಾದ ನಂತರ ವಿಮಾನದ ಪೈಲಟ್ ವಿಮಾನವನ್ನು ಕೆಳಕ್ಕೆ ಇಳಿಸಿ ರನ್ ವೇೆಗೆ ಹತ್ತಿರ ತಂದ. ಆದರೆ ಆತನ ಅಂದಾಜು ಸರಿಯಾಗಿರಲಿಲ್ಲ. ನಿರ್ದಿಷ್ಟ ಪ್ರದೇಶದಲ್ಲಿ, ಮಾರ್ಕ್ ಮಾಡಲಾದ ಜಾಗದಲ್ಲಿ ವಿಮಾನ ತನ್ನ ವೇಗವನ್ನು ಕಳೆದುಕೊಂಡು ಟೈರ್ ಗಳು ಓಪನ್ ಆಗಿ ನೆಲಕ್ಕೆ ಊರಬೇಕು. ಆ ನಂತರ ಇನ್ನೂ ಸುಮಾರು 200 – 250 ಕಿಲೋಮೀಟರ್ ಗಳ ವೇಗದಲ್ಲಿರುವ ವಿಮಾನ ಕ್ಷಣ ಕ್ಷಣ ತನ್ನ ವೇಗವನ್ನು ಕಳೆದುಕೊಂಡು ಕೊನೆಗೆ ನಿರ್ದಿಷ್ಠ ಝೋನ್ ನಲ್ಲಿ ಹಾಲ್ಟ್ ಗೆ ಬಂದು ನಿಲ್ಲಬೇಕು. ಇದು ಪ್ರತಿ ವಿಮಾನ ಲ್ಯಾಂಡಿಂಗ್ ಆಗುವಾಗಿನ ಚಟುವಟಿಕೆ. ಆದರೆ ಅಲ್ಲಿ 2.4 ಕಿಲೋಮೀಟರ್ ಉದ್ದದ ರನ್ ವೇ ಯಲ್ಲಿ ಅದಾಗಲೇ 1.6 ಕಿಲೋಮೀಟರ್ ನ ನಂತರವಷ್ಟೆ ವಿಮಾನ ತನ್ನ ಚಕ್ರಗಳನ್ನು ನೆಲದ ಮೇಲೆ ಇಟ್ಟಿತ್ತು. ಅಷ್ಟು ಉದ್ದದ ರನ್ ವೆ ನಲ್ಲಿ 300 ಮೀಟರ್ ನಲ್ಲಿ ವಿಮಾನ ನೆಲಸ್ಪರ್ಷ ಮಾಡಬೇಕು. ಆಗ ವಿಮಾನಕ್ಕೆ ವೇಗ ಕಮ್ಮಿಮಾಡಿ ಕೊಂಡು ನಿಲ್ಲಲು ಸಾಕಷ್ಟು ಸಮಯಾವಕಾಶ ದೊರೆಯುತ್ತದೆ. ಆದರೆ ಅಲ್ಲಿ 300 ಮೀಟರ್ ಗಳ ಬದಲು, 1600 ಮೀಟರ್ ಮುಂದಕ್ಕೆ ರನ್ ವೆ ನಲ್ಲಿ ವಿಮಾನದ ಚಕ್ರಗಳು ಭೂ ಸ್ಪರ್ಶ ಮಾಡಿದ್ದವು. ಮುಂದೆ ಇದ್ದದ್ದು ಕೇವಲ 800 ಮೀಟರ್ ಗಳ ದೂರ. ಅಷ್ಟರಲ್ಲಿ ವಿಮಾನ ತನ್ನ ಪೂರ್ತಿ ವೇಗ ಕಳೆದುಕೊಳ್ಳಬೇಕು. ಅದು ಕಷ್ಟ ಸಾಧ್ಯ.
ಸಹ ಪೈಲಟ್ ಅಹ್ಲುವಾಲಿಯಾ ಮುಖ್ಯ ಪೈಲಟ್ ಗ್ಲುಸಿಕಾನನ್ನು ವಿಮಾನ ರನ್ ವೇಯ ಮೇಲೆ ಬರುವ ಮೊದಲೇ ಎಚ್ಚರಿಸಿದ್ದ. ‘ ರನ್ ಅರೌಂಡ್ ‘ ಅಂತ ಕೂಗಿಕೊಳ್ಳುತ್ತಾನೆ ಆತ. ಅಂದರೆ ಮತ್ತೆ ಹಾರು ಮೇಲಕ್ಕೆ ಅಂತ ಅರ್ಥ. ಆದರೆ ಆತ್ಮವಿಶ್ವಾಸದ ಮೂಟೆ ಗ್ಲುಸಿಕಾ ಅದನ್ನು ನಿರ್ಲಕ್ಷಿಸುತ್ತಾನೆ. ‘ ವಿಮಾನ ನನಗೇನು ಹೊಸದಾ ? ಹೇಗಾದರೂ, ಆಟಿಕೆ ಥರ ಆಡಿಸಿ ಕಂಟ್ರೋಲ್ ಮಾಡ್ತೇನೆ ‘ ಎಂಬ ಹಮ್ಮು ಆತನದು.
ಆದರೆ, ಕೆಲವೇ ಕ್ಷಣದಲ್ಲಿ ರನ್ ವೇಯ ಕೊನೆ ಇನ್ನೇನು ಕೆಲ ನೂರು ಮೀಟರ್ ಗಳ (240 ಮೀ) ದೂರದಲ್ಲಿದೆ, ವಿಮಾನ ರನ್ ವೇ ಒಳಗೆ ನಿಲ್ಲುವುದಿಲ್ಲ ಈಗ ಅಂತ ಪೈಲೆಟ್ ಗ್ಲುಸಿಕಾನಿಗೆ ಖಚಿತವಾಗಿದೆ. ಆಗ ಆತ ಮತ್ತೆ ವಿಮಾನವನ್ನು ಏರಿಸಲು ಅಕ್ಸೆಲರೆಟರ್ ತುಳಿದಿದ್ದಾನೆ. ವಿಮಾನವನ್ನು ಮೇಲಿರಿಸಿಬಿಡುವ ಪ್ರಯತ್ನ ಆತನದು. ಆದರೆ ಕಾಲ ಮಿಂಚಿತ್ತು. ಅದು ಆತ ಮಾಡಿದ ಎರಡನೆಯ ದೊಡ್ಡ ತಪ್ಪು. ವಿಮಾನ ಮೇಲಕ್ಕೆ ಹಾರಲು ಇನ್ನೂ ಹೆಚ್ಚಿನ ಸಮಯ ಬೇಕಿತ್ತು. ಮತ್ತೆ ಕೊಟ್ಟ ಅಕ್ಸೆಲರೆಟರ್ ನಿಂದ ಮತ್ತಷ್ಟು ವೇಗ ಪಡೆದ ವಿಮಾನ ರನ್ ವೇಯ ಕೊನೆಗೆ ಇದ್ದ ಮರಳ ರಸ್ತೆಗೆ ಹೋಗಿ, ಮುಂದಕ್ಕೆ ಚಲಿಸುತ್ತಲೇ ಸೂಚನಾ ಗೋಪುರದ ಕಂಬಗಳಿಗೆ ಢಿಕ್ಕಿಯಾಗಿ ಅಲ್ಲಿಂದ ನೇರ ಕಾಡಿನ ಕಮರಿಗೆ ನುಗ್ಗಿದೆ. ಕೆಲ ಕ್ಷಣಗಳಲ್ಲೆ ಬೆಂಕಿ ಆವರಿಸಿಕೊಂಡಿದೆ. ಹೆಚ್ಚಿನವರು ಕ್ರಾಶ್ ನ ಗಾಯಕ್ಕಿಂತಲೂ, ಬೆಂಕಿಯ ಸುಟ್ಟ ಗಾಯಗಳಿಂದಲೇ ಸತ್ತು ಹೋಗಿದ್ದಾರೆ. ಅಂದರೆ, ಮತ್ತೆ ವಿಮಾನವನ್ನು ಮೇಲಕ್ಕೆ ಏರಿಸಲು ನೋಡದೆ ಇದ್ದಿದ್ದರೆ, ವಿಮಾನ ಕ್ರಾಶ್ ಆಗುತ್ತಿದ್ದರೂ, ಬಹುಪಾಲು ಮಂದಿ ಬದುಕುತ್ತಿದ್ದರು. ಪೈಲಟ್ ನ ಈ ಒಂದು ನಿರ್ಧಾರ ಮತ್ತೆ ರಾಂಗ್ ಹೊಡೆದಿತ್ತು. ಈಗ ಒಟ್ಟು 158 ಜನರು ಮರಣಿಸಿ, ಕೇವಲ 8 ಜನ ಗಟ್ಟಿ ಆಯುಷ್ಯದ ಜನರು ಮಾತ್ರ ಬದುಕಿ ಉಳಿದಿದ್ದಾರೆ.
ಪೈಲಟ್ ಝಡ್ ಗ್ಲುಸಿಕಾ ಅನುಭವಿ ಹಾರಾಟಗಾರ. ಒಟ್ಟು 10000 ಗಂಟೆಗಳ ಕಾಲ ಆಕಾಶದಲ್ಲಿ ವಿಮಾನ ಓಡಿಸಿದ ಅನುಭವ ಉಳ್ಳ ವ್ಯಕ್ತಿಯಾಗಿದ್ದ. ತಪ್ಪು ನಿರ್ಧಾರ ಮಾಡಿದರೆ, ಮತ್ತು ಸೂಚನೆಗಳನ್ನು ಪಾಲಿಸದ ಯಾವುದೇ ವ್ಯಕ್ತಿಯನ್ನು ಕೂಡ ಅಪಘಾತವು ಆತನ ಅನುಭವವನ್ನು ಗಣನೆಗೆ ತೆಗೆದುಕೊಂಡು ಕ್ಷಮಿಸಿ ಬಿಟ್ಟು ಬಿಡಲ್ಲವಲ್ಲ. ಇಲ್ಲಿ ಕೂಡಾ ಅದೇ ಆಗಿದೆ.
ಒಟ್ಟಾರೆ ಪೈಲಟ್ ನ ನಿರ್ಲಕ್ಷ್ಯ 158 ಜನ ಪ್ರಯಾಣಿಕರನ್ನು ಸಾಯಿಸಿತ್ತು. ಅಷ್ಟೆ ಅಲ್ಲ, ಅದ ಪೈಲೆಟ್ ಗ್ಲುಸಿಕಾ ಎಂತವನೆಂದರೆ, ದುಬೈನಿಂದ ಮಂಗಳೂರಿಗೆ ಒಟ್ಟು ಇರುವುದು 3.45 ಗಂಟೆಯ ಪ್ರಯಾಣ. ಆದರೆ ಅಷ್ಟರೊಳಗೆ ಆತ ಬರೋಬ್ಬರಿ 1 ಗಂಟೆ 30 ನಿಮಿಷಗಳ ಕಾಲ ಫ್ಲೈಟ್ ಅನ್ನು ಆಟೋ ಮೋಡ್ ಗೆ ಹಾಕಿ ನಿದ್ರಿಸಿದ್ದ. ಅಷ್ಟೇ ಅಲ್ಲ, ಆತ ನಿದ್ರಿಸುವಾಗ ಹೊಡೆದ ಗೊರಕೆ ಕೂಡಾ ಇನ್ವೆಸ್ಟಿಗೇಷನ್ ನ ಸಂದರ್ಭ ಬೆಳಕಿಗೆ ಬಂದಿತ್ತು.
ಇನ್ನೊಂದು ಭೀಕರ ವಿಮಾನ ದುರಂತ ಇವತ್ತು ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ. ಈ ವಿಮಾನ ದುರಂತದಲ್ಲಿ 107 ಜನರು ಮರಣಿಸಿದ್ದಾರೆ. ಸರಿಯಾಗಿ 10 ವರ್ಷಗಳ ನಂತರ, ಸರಿಯಾಗಿ ದಿನ ಲೆಕ್ಕ ಮಾಡಿಕೊಂಡು ಆದ ಹಾಗೆ ಮೇ 22 ರಂದೇ ಈ ದುರ್ಘಟನೆ ನಡೆದಿದೆ !!