ಮೂರು ತಿಂಗಳು ಮತ್ತೆ ಇಎಂಐ ಪಾವತಿ ವಿಸ್ತರಣೆ’ – ಆರ್ಬಿಐ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್
ಮುಂಬೈ: 40 ಬೇಸಿಸ್ ಪಾಯಿಂಟ್ ರೆಪೋ ದರ ಶೇ. 4ಕ್ಕೆ ಇಳಿಕೆ ಮಾಡಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್(ಆರ್ಬಿಐ)ಶಕ್ತಿಕಾಂತ್ ದಾಸ್ ಅವರು ತಿಳಿಸಿದ್ದಾರೆ.
ಮುಂಬೈನಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗೃಹಸಾಲ, ವೈಯಕ್ತಿಕ ಸಾಲ, ವಾಹನ ಸಾಲದ ಬಡ್ಡಿ ದರ ಕಡಿತ ಮಾಡಲಾಗುವುದು. ಶೇ.3.75ರಷ್ಟಿದ್ದ ರಿವರ್ಸ್ ರೆಪೋ ದರ ಶೇ.3.35ಕ್ಕೆ ಇಳಿಕೆ ಕೂಡ ಮಾಡಲಾಗುವುದು ಎಂದು ಅವರ ಹೇಳಿದ್ದಾರೆ.
ಇನ್ನು ಕೈಗಾರಿಕಾ ವಲಯದ ಉತ್ಪಾದನೆ ಶೇ.17ರಷ್ಟು ಕಡಿಮೆಯಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಬೇಡಿಕೆ ಮತ್ತು ಪೂರೈಕೆ ಕುಸಿದಿದ್ದು, ಕೈಗಾರಿಕಾ ವಲಯಗಳ ಉತ್ಪಾದನೆ ಶೇ.6.5ರಷ್ಟು ಕುಸಿತ ಕಂಡಿದೆ ಎಂದು ಅವರು ತಿಳಿಸಿದರು.
ಸದ್ಯ ಮಾರ್ಚ್ ತಿಂಗಳಲ್ಲಿ ಸಿಮೆಂಟ್ ಉತ್ಪಾದನೆ ಶೇ.19ರಷ್ಟು ಕಡಿಮೆ ಆಗಿದೆ. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಶೇ.3.7ರಷ್ಟು ಏರಿಕೆ ಆಗಿದೆ. ಆಹಾರ ಹಣದುಬ್ಬರ ಏಪ್ರಿಲ್ನಲ್ಲಿ ಶೇ.8.7ರಷ್ಟು ಏರಿಕೆ ಕಂಡಿದೆ ಎಂದರು.
ಕಳೆದ 30 ವರ್ಷಗಳಲ್ಲೇ ರಫ್ತು ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ. ಗ್ರಾಹಕ ಬಳಕೆಯ ವಸ್ತುಗಳ ಉತ್ಪಾದನೆ ಶೇ.33ರಷ್ಟು ಇಳಿಕೆ ಆಗಿದ್ದು, ಸಾಲದ ಮೇಲಿನ ಇಎಂಐ (ಸಮನಾದ ಮಾಸಿಕ ಕಂತು) ಯನ್ನು ಇನ್ನೂ ಮೂರು ತಿಂಗಳು ಅಂದ್ರೆ ಜೂನ್, ಜುಲೈ ಹಾಗೂ ಆಗಸ್ಟ್ 31ರ ವರೆಗೆ ವಿಸ್ತರಣೆ ಮಾಡಲಾಗುವುದು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ನುಡಿದರು.