ಕಾಂತಾವರದ ಕನ್ನಡದ ಕಣ್ಮಣಿ ಡಾ.ನಾ.ಮೊಗಸಾಲೆ ಎಂಬ ಮುಗ್ಧ ಮನದ ಸಾಧಕ

ನಮಸ್ಕಾರ. ನಾನು ಓದುತ್ತಾ ಇರೋದು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ. ಸಾಹಿತ್ಯಾಭಿರುಚಿಯನ್ನು ಹೆಚ್ಚಿಸಿಕೊಳ್ಳಲು ಖಂಡಿತವಾಗಲು ಈ ಶಿಕ್ಷಣಾ ಸಂಸ್ಥೆ ನನಗೆ ಸಹಕಾರಿಯಾಗುತ್ತಾ ಇದೆ ಎಂದರೆ ಬಹುಶಃ ತಪ್ಪಾಗ್ಲಿಕ್ಕಿಲ್ಲ.
ಹೀಗೆ ಸಾಹಿತ್ಯದತ್ತ ಹೊರಟಾಗ ಒಮ್ಮೆ ನಮ್ಮ ಕಾಲೇಜಿನಲ್ಲಿ ಒಂದು ಸಾಹಿತ್ಯದ ಕುರಿತಾದ ಕಾರ್ಯಕ್ರಮ ನಡೆಯುತ್ತದೆ. ಅವತ್ತಿನ ದಿನ ಮುಖ್ಯ ಅತಿಥಿಯಾಗಿದ್ದಂತಹ ಸಾಹಿತಿಯ ಬಗ್ಗೆ ನಾನು ನಿಮಗೆ ತಿಳಿಸಲೇಬೇಕು.

‘ಸಾರಸ್ವತ ಲೋಕದ ಸ್ನೇಹದ ಬೆಟ್ಟ’, ‘ಸ್ನೇಹ ಪರಿಷತ್ತಿನ ಶಾಶ್ವತ ಸದಸ್ಯ’, ಕಾಂತಾವರದ ಕಣ್ಮಣಿ ಡಾ.ನಾ.ಮೊಗಸಾಲೆಯವರು.
ನನಗೆ ಕುತೂಹಲ ಹೆಚ್ಚಿದ್ದು ನಾ.ಮೊಗಸಾಲೆಯವರ ‘ಪ್ರತಿ ಕ್ಷಣವೂ ನಿಮ್ಮದೇ’ ಎಂಬ ಪುಸ್ತಕದ ಮುಖಪುಟದಲ್ಲಿರುವ ಮೊಗಸಾಲೆಯವರ ಹಾಗೂ ಅವರ ಶ್ರೀಮತಿ ಪ್ರೇಮಾರವರ ಸಾಧುತ್ವದಿಂದ ಕೂಡಿದ ಮುಗ್ಧ ಮುಖಗಳನ್ನು ನೋಡಿ! ಅವರ ಮುಖದಂತೆಯೇ ಅವರ ಮನಸ್ಸು ಕೂಡ ಮುಗ್ಧವಾಗಿದೆ ಎಂದರೇ ಪ್ರಾಯಶಃ ತಪ್ಪಾಗುವುದಿಲ್ಲ.

೨೫ ಆಗಸ್ಟ್ ೨೦೧೯ರ ವಿಜಯವಾಣಿ ಪತ್ರಿಕೆಯ ವಿಜಯವಿಹಾರ ಎಂಬ ಪತ್ರಿಕೆಯಲ್ಲಿ ಮೊಗಸಾಲೆಯವರ ಕುರಿತು ಅವರ ಸ್ನೇಹಿತರು ಸುಬ್ರಾಯ ಚೊಕ್ಕಾಡಿಯವರು ಬರೆದಂತಹ “ಸಾರಸ್ವತ ಲೋಕದ ಸ್ನೇಹದ ಬೆಟ್ಟ” ಎಂಬ ಲೇಖನವನ್ನು ಓದಿದಾಗ ಅವರನ್ನು ಕಾಣಲು ನನ್ನಲ್ಲಿದ್ದ ಉತ್ಸುಕತೆ ಇನ್ನೂ ಹೆಚ್ಚಾಯಿತು. ಆದರೆ ಆ ಕಾಲ ಬಹಳ ಹತ್ತಿರದಲ್ಲಿತ್ತು.

ಅಂದು ಸೆಪ್ಟೆಂಬರ್ ೩, ೨೦೧೯ ಮಂಗಳವಾರ, ಮಧ್ಯಾಹ್ನ ೧:೪೦ಕ್ಕೆ ಸರಿಯಾಗಿ ಕಾಲೇಜಿನ ಎಸ್.ಆರ್. ಹಾಲಿನಲ್ಲಿ ಎಲ್ಲಾ ವಿಧ್ಯಾರ್ಥಿಗಳು ಹಾಜರಿದ್ದರು, ವೇದಿಕೆಯ ಮುಂಭಾಗದಲ್ಲಿ ಗಣ್ಯರೆಲ್ಲಾ ನೆರೆದಿದ್ದರು. ಅಂದು ಅಲ್ಲಿ ನಡೆದಿದ್ದು “ಮೊಗಸಾಲೆ ಸಾಹಿತ್ಯ ವಿಹಾರ ಸರಣಿ ಕಾರ್ಯಕ್ರಮ” ಭಟ್ಟರ ನಿರೂಪಣೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮವು ಮೊಗಸಾಲೆಯವರ ಜೀವನದೆಡೆಗೆ ಸಾಗಿತ್ತು.

೧೯೪೪ ಆಗಸ್ಟ್ ೨೭ ರಂದು ಕಾಸರಗೋಡಿನ ಮೊಗಸಾಲೆ ಮನೆಯಲ್ಲಿ ಜನಿಸಿದ್ದ ಡಾ.ನಾರಾಯಣ ಭಟ್ಟ ಮೊಗಸಾಲೆಯವರು ಉಡುಪಿಯ ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದಿಕ್ ಡಿಪ್ಲೊಮಾ ಮಾಡಿದ್ದಾರೆ. ಪೇಜಾವರ ಮಠ, ಗ್ರಂಥಾಲಯಗಳೇ ಇವರ ಸಾಹಿತ್ಯ ಶ್ರೀಮಂತಿಕೆಗೆ ಪ್ರೇರಣೆಯಾಗಿದ್ದು, ಕಾಂತಾವರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಇವರು ೨೦೦೭ರಲ್ಲಿ ನಿವೃತ್ತಿ ಹೊಂದುತ್ತಾರೆ.

‘ಬಯಲಬೆಟ್ಟ’ ಮತ್ತು ‘ಉಲ್ಲಂಘನೆ’ ಎಂಬ ಬೃಹತ್ ಕಾದಂಬರಿಗಳ ಒಡೆಯರಾದ ಮೊಗಸಾಲೆಯವರ ಕೃತಿಗಳು ಸ್ಥಳೀಯ ಸಂಸ್ಕೃತಿ, ಬದುಕಿನ ಬಗ್ಗೆ ತಿಳಿಸುತ್ತವೆ.
೧೫ ವರ್ಷಗಳ ಹಿಂದೆ ತಮಗೆ ಅರವತ್ತಾದಾಗ ಜೀವನವನ್ನು ಹಿಂದಿರುಗಿ ನೋಡಬೇಕೆನಿಸಿದಾಗ, ಅವರು ಬರೆಯಲು ಪ್ರಾರಂಭಿಸಿದ್ದೇ ‘ಬಯಲಬೆಟ್ಟ’. ಇದರಲ್ಲಿ ಮೊಗಸಾಲೆಯವರು ನೆನಪಾದ ಸಂಗತಿಗಳ ಜೊತೆಗೆ ನೆನಪಾಗದೇ ಇದ್ದುದನ್ನು ತಿಳಿಸಿದ್ದಾರೆ. ಈ ಕೃತಿಯು ಘಟನೆಗಳ ವಿಮರ್ಶಣೆ, ನಿರೂಪಣೆಗಳನ್ನೊಳಗೊಂಡಿದೆ. ಆದರೆ ಇವರು ಈ ಕೃತಿಯನ್ನು ಆತ್ಮಕಥೆ ಎಂದು ಪ್ರಸ್ತಾಪಿಸದೇ ವೃತ್ತಾಂತ ಎಂದು ಪ್ರಕಟಿಸಿದ್ದಾರೆ. ಪ್ರಾಮಾಣಿಕ ಮತ್ತು ಐತಿಹಾಸಿಕ ಬರವಣಿಗೆ ಇವರದ್ದಾಗಿತ್ತು.

ಮೊಗಸಾಲೆಯವರ ತಂದೆ ವಿಠ್ಠಲಭಟ್ರು ಮಗಳ ಮದುವೆಯ ಸಾಲ ತೀರಿಸವ ಸಲುವಾಗಿ ಘಟ್ಟಕ್ಕೆ ಹೋಗಿ ಏಲಕ್ಕಿ ವ್ಯವಸಾಯ ಮಾಡುವಾಗ ಅಲ್ಲಿ ಒಂದು ರೋಗಕ್ಕೆ ತುತ್ತಾಗಿ ಸಾವಿಗೀಡಾದ ಸಂಗತಿಯು ೫ ವರ್ಷದ ಬಾಲಕ ಮೊಗಸಾಲೆಯವರ ಮೇಲೆ ಬಹುವಾದ ಪರಿಣಾಮ ಬೀರುತ್ತದೆ. ಈ ಘಟನೆಯನ್ನು ಮೊಗಸಾಲೆಯವರು ತಮ್ಮ ವೃತ್ತಾಂತದಲ್ಲಿ ಅಂದು ಅವರು ಮಗುವಾಗಿ ಕಂಡ ರೀತಿಯಲ್ಲಿಯೇ ಬರೆದಿದ್ದಾರೆ.

ಮೊಗಸಾಲೆಯವರ ಚಿಕ್ಕಪ್ಪ ಮತ್ತು ಪೊರ್ಬು ಸುರುಳಿ ಸುತ್ತಿಕೊಂಡಿದ್ದ ನಾಯಿಬಾಲವನ್ನು ಮರದ ತುಂಡಿನ ಮೇಲಿಟ್ಟು ತುಂಡರಿಸಿದ್ದು, ನಂತರ ಅದಕ್ಕೆ ಗೆರಟೆಯಲ್ಲಿ ಬೂದಿ ಹಾಕಿದ್ದು, ಆಮೇಲೆ ಅದು ಎದ್ದು ಬಿದ್ದು ಓಡಿ ಹೋಗಿದ್ದು, ಇದನ್ನು ಕಂಡ ಆ ಮಗು ಮೊಗಸಾಲೆಯ ಮನದಲ್ಲಾದ ಭಾವನೆಗಳ ಪ್ರಸ್ತಾಪನೆ ಈ ವೃತ್ತಾಂತದಲ್ಲಿದೆ. ಇವರು ಜನರ ವಿಶ್ವಾಸ ಗಳಿಸುವಾಗ ಪಟ್ಟ ಪ್ರಯತ್ನ, ವಾಹನವಿಲ್ಲದೇ ೪ ಕಿಲೋಮೀಟರ್ ನಡೆದ ಅನೇಕ ನಡಿಗೆಗಳು, ಸಾಹಿತ್ಯ ಕ್ಷೇತ್ರದಲ್ಲಿ ಎದುರಾದ ತೊಡಕುಗಳ ಬಗ್ಗೆಯೂ ತಿಳಿಸಲಾಗಿದೆ.

ಕಾಂತಾವರದ ಸ್ಥಿರ ವಿಷಯಗಳಲ್ಲಿ ಮೊಗಸಾಲೆಯವರೂ ಕೂಡ ಒಬ್ಬರು. ಉಡುಪಿಯ ರಥಬೀದಿ ಇವರ ಬರವಣಿಗೆ ಪ್ರೇರೇಪಿಸುವ ಪುಣ್ಯ ಭೂಮಿಯಾಗಿತ್ತು.

ಆ ವೇದಿಕೆಯಲ್ಲಿ ಕುಳಿತಾಗ ಅವರ ಸರಳ ಸಜ್ಜನಿಕೆ ಎಲ್ಲರ ಗಮನ ಸೆಳೆದಿತ್ತು. ಕೊನೆಗೇ ಅವರ ಮಾತುಗಳನ್ನು ಕೇಳಿದ ನಾವೇ ಪುಣ್ಯವಂತರು! ಕಾರ್ಯಕ್ರಮದ ಅಂತ್ಯವಾಗಿತ್ತು.
ನಂತರ ಕಾಲೇಜಿನ ಕಾರಿಡಾರಿನಲ್ಲಿ ಹೋಗುತ್ತಿರುವಾಗ ನನ್ನ ಎದುರಿಗೆ ನಡೆದು ಮೊಗಸಾಲೆಯವರಿಗೆ ನನ್ನ ಹೃದಯಪೂರ್ವಕವಾದ ಭಾವದಿಂದ ಒಂದೇ ಕೈಯಲ್ಲಿ ಎದೆಮುಟ್ಟಿ ನಮಸ್ಕರಿಸಿದೆ, ಆದರೇ ಮೊಗಸಾಲೆಯವರು ಎರಡೂ ಕೈಮುಗಿದು, ವಯಸ್ಸಿನಲ್ಲಿ ನಾನು ಅವರಿಗಿಂತ ಚಿಕ್ಕವಳು ಎಂದೂ ಕೂಡ ಪರಿಗಣಿಸದೇ ನಮಸ್ಕಾರ ಮಾಡಿದರು. ಆಗ ನನಗನ್ನಿಸಿದ್ದು, ಅಬ್ಬಬ್ಬಾ! ಎಂತಾ ದೊಡ್ಡ ಗುಣ ಇವರದ್ದು.

ಶ್ವೇತಾ ಪಿ.ಜೈನ್
Leave A Reply

Your email address will not be published.