ವಿಶ್ವ ಮಾನವ | 20 ನೇ ಶತಮಾನ ಕಂಡ ದೈತ್ಯ ಪ್ರತಿಭೆ ರಾಷ್ಟ್ರ ಕವಿ ಕುವೆಂಪು

20 ನೇ ಶತಮಾನ ಕಂಡ ದೈತ್ಯ ಪ್ರತಿಭೆ ರಾಷ್ಟ್ರ ಕವಿ ಕುವೆಂಪುರವರು, ವರಕವಿ ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡು, ವಿಶ್ವ ಮಾನವ ಸಂದೇಶ ಸಾರಿ ಆದರ್ಶ ಪುರುಷ.

ಜಯ ಭಾರತ ಜನನಿಯ ತನುಜಾತೆ, ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು,ಓ ನನ್ನ ಚೇತನ ಆಗು ನೀ ಅನಿಕೇತನ ಹೀಗೆ ಇವರ ಹಲವಾರು ಕವನಗಳು ಕನ್ನಡಿಗರ ಮನದಾಳದಲ್ಲಿ ಹಾಸುಹೊಕ್ಕಾಗಿವೆ. ಇವರನ್ನು ಮಲೆನಾಡಿನ ಚಿತ್ರಕಾರ ಎಂದರೆ ತಪ್ಪಾಗುವುದಿಲ್ಲ.
ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಚಿಂತಕರಾದ ಇವರು ಜನಿಸಿದ್ದು ತನ್ನ ಅಜ್ಜಿ ಮನೆಯಾದಂತಹ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆ, 29 ಡಿಸೆಂಬರ್ 1904 ರಲ್ಲಿ.

“ನಿಶ್ಶಬ್ಧದಲ್ಲಿ ನಿಂತು ನೆನೆಯುತ್ತೇನೆ, ನಿಮ್ಮಿಂದ ನಾ ಪಡೆದ ಹೊಸ ಹುಟ್ಟುಗಳ, ಗುಟ್ಟುಗಳ” ಈ ಕವಿತೆಯಲ್ಲಿ .ಜಿ. ಎಸ್. ಶಿವರುದ್ರಪ್ಪರವರು ಕುವೆಂಪು ಹೇಗೆ ಸ್ನೇಹಜೀವಿಯಾಗಿ ಬದುಕಿದ್ದರು ಎಂಬುದನ್ನು ತಿಳಿಸಿದ್ದಾರೆ.
ನಮ್ಮ ಪರಂಪರೆ ಮರೆಯಾಗಿ, ನವ್ಯ ಕಾವ್ಯ ಸೃಷ್ಟಿಯಾದ ಸಂದರ್ಭದಲ್ಲಿ ಕುವೆಂಪು ಮತ್ತು ಡಾ. ಎಸ್. ಎಲ್.ಭೈರಪ್ಪನವರು ಗದ್ಯಪ್ರಕಾರದಲ್ಲಿ ಅತ್ಯುತ್ತಮ ಕೃತಿಗಳನ್ನು ರಚಿಸುವುದರ ಮೂಲಕ ನಮ್ಮ ಪರಂಪರೆಯ ಉಳಿಯುವಿಕೆಗೆ ಸಾಕ್ಷಿಯಾಗಿದ್ದಾರೆ.

ನುಡಿದಂತೆ ನಡೆ ಎಂಬ ಮಾತಿನಿಂದ ಕುವೆಂಪುರವರು ಎಂದೂ ಹೊರತಾಗಿರಲಿಲ್ಲ, ತರಗತಿಯಲ್ಲಿ ತಾನು ಭೋಧಿಸಿದ್ದನ್ನೇ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಂತಹ ಮಹಾನ್ ವ್ಯಕ್ತಿತ್ವ ಇವರದ್ದು. ಇವರ ವ್ಯಕ್ತಿತ್ವ ಮತ್ತು ಸಾಹಿತ್ಯ ಎರಡೂ ಭಿನ್ನವಲ್ಲ, ತಾವು ವಿಶ್ವಮಾನವ ಸಂದೇಶದ ರೀತಿಯಲ್ಲಿಯೇ ಬದುಕಿದರು.
ಒಮ್ಮೆ ಕುವೆಂಪು ಅವರ ಪುತ್ರ ತೇಜಸ್ವಿಯವರು ಗಣಿತ ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ಕುವೆಂಪು ಮಗನನ್ನು ತಮ್ಮ ಬಳಿಗೆ ಕರೆದು “ನಿನಗೆ ಗಣಿತ ಅನ್ನುವುದು ಕಷ್ಟ, ಕನಿಷ್ಟ ಮೂವತ್ತೈದು ಅಂಕ ಪಡೆಯಲಾದರು ಪ್ರಯತ್ನಿಸು ಇಲ್ಲವಾದಲ್ಲಿ ಒಂದು ವರ್ಷ ಕಳೆದುಕೊಳ್ಳುತ್ತೀಯ” ಎಂದು ಸಲಹೆ ನೀಡಿದರು. ಆದರೆ ಮಗನನ್ನು ಗದರಿಸಿಲಿಲ್ಲ, ತಮ್ಮ ಮಕ್ಕಳಿಗೆ ಅವರೆಂದೂ ಅಂಕುಶ ಹಾಕಲಿಲ್ಲ, ಮಕ್ಕಳೊಳಗೆ ಮಕ್ಕಳಾಗಿ ಕುವೆಂಪುರವರು ಬೆರೆತ ರೀತಿಯನ್ನು ನಾವಿಲ್ಲಿ ಕಾಣಬಹುದು.
ಕುವೆಂಪು ನಾಸ್ತಿಕರಲ್ಲ, ದೇವರನ್ನು ವಿರೋಧಿಸುತ್ತಿರಲಿಲ್ಲ. ಇವರ ಮನೆಯಲ್ಲಿ ಪ್ರತ್ಯೇಕ ದೇವರ ಕೋಣೆಯಿದ್ದು ಪ್ರತಿನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು, ಮತ್ತು ಇವರು ಎಂದೂ ಕೂಡ ಬ್ರಾಹ್ಮಣ ವಿರೋಧೀಯಾಗಿರಲಿಲ್ಲ. ಇವರ ಪರಮಗುರು ರಾಮಕೃಷ್ಣಪರಮಸಂಸರು, ಗುರುಗಳಾಗಿದ್ದ ಟಿ.ಎಸ್. ವೆಂಕಣ್ಣಯ್ಯ, ಬಿ.ಎಂ.ಶ್ರೀಕಂಠಯ್ಯ, ಎಲ್ಲರೂ ಬ್ರಾಹ್ಮಣರೇ, ಆದರೆ ದೇವರು ಮತ್ತು ಬ್ರಾಹ್ಮಣರ ಹೆಸರಿನಲ್ಲಿ ನಡೆಯುತ್ತಿದ್ದಂತಹ ಮಡಿ, ಢಂಬಾಚಾರ, ಕಂದಾಚಾರಗಳನ್ನು ಸಹಿಸದೇ ವಿರೋಧಿಸುತ್ತಿದ್ದರು.
ದಸರಾ, ಕ್ರಿಸ್ಮಸ್, ಹಾಗೂ ಬೇಸಿಗೆ ರಜಾ ದಿನಗಳಲ್ಲಿ ಕುಪ್ಪಳಿಯಿಂದ ದೇವಂಗಿಗೆ ಹೋಗುತ್ತಿದ್ದ ಕುವೆಂಪುರವರು ಕಾಡುಗಳಲ್ಲಿ ಬೇಟೆಯಾಡಿದ್ದಕ್ಕಿಂತಲೂ ಕಾಡಿನ ಸೌಂದರ್ಯ ಸವಿಯುತ್ತಿದ್ದುದೇ ಹೆಚ್ಚು. ಬಹುಶಃ ಮುಂದೆ ಅವರ ‘ಶ್ರೀ ರಾಮಾಯಣ ದರ್ಶನಂ’ ಕೃತಿಯಲ್ಲಿ ಪ್ರಕೃತಿಯ ವೈಭವವನ್ನು ಕುವೆಂಪುರವರು ಕಣ್ಣಿಗೆ ಕಟ್ಟುವಂತೆ ವರ್ಣಿಸಲು ಈ ರಜಾದಿನಗಳು ಸಹಾಯಕವಾಗಿರಬಹುದು.

“ಕನ್ನಡದ ವಿಷಯದಲ್ಲಿ ನಾನು ಬುಲ್ಡೋಜರ್ ನಂತೆ ನುಗ್ಗುತ್ತೇನೆ, ದಾರಿ ಬಿಟ್ಟಿರೋ ಬದುಕುಳಿಯುತ್ತಿರಿ”, “ಆದರ್ಶಗಳು ಪ್ರತಿದಿನ ಪಠಣ ಮಾಡಬೇಕಾದ ಬರೀಗೊಡ್ಡು ಮಾತುಗಳಲ್ಲ, ಅವು ನಮ್ಮ ಜೀವನದ ಉಸಿರು”, ಎಂದು ಉದ್ಗರಿಸಿದ ಕನ್ನಡದ ಮೂರಕ್ಷರದ ಪ್ರತಿಭೆ ಕುವೆಂಪುರವರು.

“ಜಾತಿ ಮತಗಳ ವಿರೋಧ ಭಾವನೆ ನನ್ನ ಹುಟ್ಟುಗುಣ, ಸಂಸ್ಕಾರ ರೂಪದಲ್ಲಿಯೇ ಅದು ನನ್ನ ಜನ್ಮಕ್ಕೆ ಅಂಟಿಕೊಂಡು ಬಂದೀತೆಂದು ತೋರುತ್ತದೆ. ಅಸ್ಪೃಶ್ಯತೆಯೊಂದು ಮಹಾಪಾಪ” ಎಂದು ಗಾಂಧೀಜಿ ಘೋಷಿಸಿದ ಒಂದು ಘೋಷಣೆಯು ಕುವೆಂಪುರವರಿಗೆ ಬಹಳ ಹಿಡಿಸುತ್ತದೆ. ಆ ಒಂದು ಸಂದರ್ಭದಲ್ಲಿ ಕುವೆಂಪುರವರು ಜಲಗಾರ ಎಂಬ ನಾಟಕದ ರಚನೆಯನ್ನು ಮಾಡುತ್ತಾರೆ,

“ದೇವಾಲಯಗಳಿಗೆ ಪ್ರವೇಶಾವಕಾಶ ದೊರೆತರು ಹರಿಜನರು ಹೋಗಬಾರದೆಂದೇ ನನ್ನ ಸಲಹೆ. ನೂರಾರು ದೇವತೆಗಳನ್ನು ಪೂಜಿಸಿಯೇ ನಮ್ಮ ದೇಶ ಈ ಸ್ಥಿತಿಗೆ ಬಂದದ್ದು, ಸವರ್ಣೀಯರ ದೇವತೆಗಳನ್ನು ಉತ್ತಮ ವರ್ಗದವರು ಸೃಷ್ಟಿಸಿರುವ ಪುರಾಣ ಪುಣ್ಯ ಕಥೆಗಳನ್ನು ಮೌಢ್ಯ ಸಂಪ್ರದಾಯಗಳನ್ನು ಪೂರ್ಣವಾಗಿ ತಿರಸ್ಕರಿಸಬೇಕು, ಈ ನನ್ನ ಮಾತುಗಳು ಎಲ್ಲಾ ಶೂರರಿಗೂ ಅನ್ವಯಿಸುತ್ತದೆ” ಇದು ಕುವೆಂಪುರವರು ತಮ್ಮ ನಾಟಕದ ಕುರಿತಾಗಿ ಆಡಿದ ಮಾತುಗಳು. ಇದರ ಮೂಲಕ ಮೂಢನಂಬಿಕೆಯ ವಿರುದ್ಧವಾಗಿ ಅವರಿಗಿದ್ದ ಭಾವನೆಗಳನ್ನು ತಿಳಿಸುತ್ತದೆ. ಬಹುಶಃ ಕುವೆಂಪುರವರಂತೆ ಸರ್ವ ಪ್ರಕಾರಗಳಲ್ಲೂ ಏಕ ಪ್ರಕಾರವಾದ ಸಿದ್ಧಿ ಪಡೆದ ಕವಿಗಳು ಬಹುವಿರಳ.

ಶ್ವೇತಾ ಪಿ. ಜೈನ್

Leave A Reply

Your email address will not be published.