ಬೆಳಾಲಿನ ವಿಜ್ಞಾನಿ, ಗಾಂಧಿವಾದಿ, ಶಿಕ್ಷಕ ಭೀಷ್ಮ ಗೊಲ್ಲ ಮಾಸ್ಟರ್ ಇನ್ನಿಲ್ಲ
ಬೆಳ್ತಂಗಡಿ : ಗಾಂಧಿವಾದಿ, ವಿಜ್ಞಾನದ ಶಿಕ್ಷಕ, ಎಲ್ಲವನ್ನೂ ವೈಜ್ಞಾನಿಕ ದೃಷ್ಟಿಯಲ್ಲಿ ನೋಡುತ್ತಿದ್ದ ಸರಳ ಜೀವಿ ಗೋಪಾಲಕೃಷ್ಣ ಗೊಲ್ಲ ಮಾಸ್ಟರ್ ಇನ್ನು ಕೇವಲ ನೆನಪು.
ಅವರು ಅಲ್ಪ ಕಾಲದ ಅಸೌಖ್ಯದ ನಂತರ ಇಂದು ಬೆಳಗಿನ ಜಾವ 4.30 ರಲ್ಲಿ ಅವರು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
SDM ಆಸ್ಪತ್ರೆಯಲ್ಲಿ ಒಂದು ವಾರದ ಹಿಂದೆ ಅಡ್ಮಿಟ್ ಆಗಿದ್ದರು. ಹೆಚ್ಚು ಕಮ್ಮಿ ಆರೋಗ್ಯವಂತರಾಗೇ ಇದ್ದರು.
ಬೆಳಾಲು ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1956 ರಲ್ಲಿ ಕೆಲಸಕ್ಕೆ ಸೇರಿದರು. ಅವರ ಹೆಸರು ಗೋಪಾಲಕೃಷ್ಣ ಗೊಲ್ಲ ಎಂದಿದ್ದರೂ, ಅವರು ಗೊಲ್ಲ ಮಾಸ್ಟರ್ ಎಂದೇ ಪ್ರಚಲಿತ. ಸುತ್ತ ಮುತ್ತ ಸುಮಾರು ಮೂರು ತಲೆಮಾರಿಗೆ ವಿದ್ಯೆ ಕಲಿಸಿದ ಗುರು ಗೊಲ್ಲ ಮಾಸ್ಟರ್ ಅವರು.
ಈ ಹಿಂದೆ, ಅವರು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಬೆಳಾಲಿನ ಶ್ರಿ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಶಿಕ್ಷಕ ವೃತ್ತಿಯ ಜತೆಗೆ ಇತರ ಆಸಕ್ತಿ ಗಳನ್ನಿಟ್ಟುಕೊಂಡು ಬದುಕಿದ್ದು ಮಾತ್ರವಲ್ಲ. ಇತರರಿಗೆ ಅವರು ವಿಜ್ಞಾನದ ಆಸಕ್ತಿಯನ್ನು ಬೆಳೆಸಿದವರು. ಕರ್ನಾಟಕ ವಿಜ್ಞಾನ ಪರಿಷತ್ ನ ಪುಟಾಣಿ ಪುಸ್ತಕ ಆಗ ಸಿಗುತ್ತಿತ್ತು. ಅದನ್ನು ಅವರು ತಮ್ಮ ವಿದ್ಯಾರ್ಥಿಗಳಿಗೆ ಓದಲು ಪ್ರೇರೇಪಿಸುತ್ತಿದ್ದರು. ವಿಜ್ಞಾನದ ಜತೆಗೆ ಅವರು ಇಂಗ್ಲಿಷ್ ನ ಶಿಕ್ಷಕ ಕೂಡ. ಇಂಗ್ಲಿಷ್ ಗ್ರಾಮರ್ ಅನ್ನು ಯಾವತ್ತೂ ಮರೆಯದಂತೆ ಅವರು ಹೇಳಿಕೊಡುತ್ತಿದ್ದರು.
ಮಕ್ಕಳಿಗೆ ವಿಜ್ಞಾನ, ಇಂಗ್ಲಿಷ್ ಕಲಿಸುವುದರಲ್ಲಿ ಅವರಿಗೆ ವಿಪರೀತ ಆಸಕ್ತಿ. ಗೊಲ್ಲ ಮಾಸ್ಟರ್ ಬೆಳಾಲು ಶಾಲೆಗೆ ಬಂದಾಗ ನಾನು ಮೊದಲ ಬ್ಯಾಚ್ ನ ವಿದ್ಯಾರ್ಥಿ. ಆ ನಂತರ ನಮ್ಮ ಮಕ್ಕಳಿಗೂ ಅವರು ವೈಜ್ಞಾನಿಕ ಪ್ರಜ್ಞೆ ಬೆಳೆಸಿದರು. ಮಕ್ಕಳನ್ನು ಹಲವು ಕಡೆ ಭಾಷಣ ಸ್ಪರ್ಧೆಗಳಿಗೆ ತಯಾರು ಮಾಡಿ ಕರೆದುಕೊಂಡು ಹೋಗುತ್ತಿದ್ದರು. ಶಾಲೆಯಲ್ಲಿ ವಿಜ್ಞಾನದ ಲ್ಯಾಬ್ ಅನ್ನು ಅದ ಕಾಲದಲ್ಲೇ ಅವರು ಸ್ಥಾಪಿಸಿದವರು.
ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ ಅವರ ಹಳೆಯ ವಿದ್ಯಾರ್ಥಿ ಕೆ ಬಾಬು ಗೌಡ ಅವರು.