ಕೇರಳದಿಂದ ಬಂದಾಕೆ ಕ್ವಾರಂಟೈನ್ ತಪ್ಪಿಸಿ ಮನೆಗೆ…!

ಪಡುಬಿದ್ರಿ: ನೆರೆಯ ಕೇರಳ ರಾಜ್ಯದಿಂದ ಮಂಗಳೂರಿಗೆ ಬಂದ ಯುವತಿಯೊಬ್ಬಳು ಕ್ವಾರಂಟೈನ್‌ಗೆ ಹಾಜರಾಗದೆ ನೇರವಾಗಿ ಮನೆಗೆ ತೆರಳಿದ ಘಟನೆ ಆತಂಕಕ್ಕೆ ಕಾರಣವಾಗಿದೆ.

ಕೇರಳದಿಂದ ಮಂಗಳೂರಿಗೆ ರೈಲಿನಲ್ಲಿ ಬಂದು ಅಲ್ಲಿಂದ ತಂದೆಯೊಂದಿಗೆ ಬೈಕ್‌ನಲ್ಲಿ ಬಂದ ಯುವತಿಯು ಉಡುಪಿಯ ಹೆಜಮಾಡಿಯ ತಪಾಸಣಾ ಟೋಲ್‌ನಲ್ಲಿ ಕ್ವಾರಂಟೈನ್‌ಗೆ ಒಳಪಡುವ ಅರ್ಜಿಯನ್ನು ಭರ್ತಿ ಮಾಡಿ ನೇರವಾಗಿ ತನ್ನ ಊರು ಕುಂದಾಪುರಕ್ಕೆ ತೆರಳಿದ್ದಾಳೆ.

ತಕ್ಷಣಕ್ಕೆ ಎಚ್ಚೆತ್ತ ಅಧಿಕಾರಿಗಳು ಆಕೆಯ ಪತ್ತೆಗೆ ಶ್ರಮಿಸಿದಾಗ ಮೊಬೈಲ್‌ ನಾಟ್‌ರೀಚೆಬಲ್ ಆಗಿತ್ತು. ಮಧ್ಯಾಹ್ನದ ವೇಳೆ ಯುವತಿ ಮನೆ ಸೇರಿದ ಬಗ್ಗೆ ಮಾಹಿತಿ ಲಭ್ಯವಾಯಿತು. ಕುಂದಾಪುರ ತಹಶೀಲ್ದಾರ್ ಯುವತಿಗೆ ಕರೆ ಮಾಡಿ ಕ್ವಾರಂಟೈನ್ ತಪ್ಪಿಸಿ ಬಂದಿರುವ ಬಗ್ಗೆ ಪ್ರಕರಣ ದಾಖಲಿಸುವುದಾಗಿಯೂ ತಿಳಿಸಿದ್ದರು.

ಆದರೆ, ಯುವತಿ ಮನೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮತ್ತು ಆಶಾ ಕಾರ್ಯಕರ್ತೆಯರು ಮನೆಯಲ್ಲಿಯೇ ಇರುವಂತೆ ಆಕೆಗೆ ಮತ್ತು ಮನೆಯವರಿಗೆ ತಾಕೀತು ಮಾಡಿದ್ದಲ್ಲದೆ, ಭಾನುವಾರ ಮನೆ ಭೇಟಿ ನೀಡುವುದಾಗಿಯೂ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಯುವತಿ ಮತ್ತು ಆಕೆಯ ಮನೆಯವರು ಪ್ಲಾನ್ ಮಾಡಿಯೇ ಈ ರೀತಿ ಯುವತಿ ಬೇರೆ ಕಡೆ ಕ್ವಾರಂಟೈನ್ ಆಗುವ ಬದಲು, ಮನೆಗೇ ಬಂದು ಕ್ವಾರಂಟೈನ್ ಆಗಿದ್ದಾಳೆ ಎನ್ನಲಾಗುತ್ತಿದೆ.

Leave A Reply

Your email address will not be published.