ವಲಸೆ ಕಾರ್ಮಿಕರಿಗೆ ಶಾಪ ಎನಿಸಿರುವುದು ಕೋರೋನಾವೋ…….? ಬಡತನವೋ……?

ಬರಹ : ಉದಿತ್ ಕುಮಾರ್ ಬೀನಡ್ಕ

ಕಳೆದ ಮೂರು-ನಾಲ್ಕು ತಿಂಗಳಿನಿಂದ ಜಗತ್ತಿನೆಲ್ಲೆಡೆ ಕೊರೋನಾ ವೈರಸ್ ಮರಣ ಮೃದಂಗ ಬಾರಿಸುತ್ತಿದೆ. ಚೀನಾ ದೇಶದಲ್ಲಿ ಜೀವ ಪಡೆದ ಕೊರೋನಾ ತನ್ನ ಜನ್ಮಭೂಮಿಯಲ್ಲಿ ನೆರೆಹೊರೆಯವರಿಗೆ ಪರಿಚಯವಾಗುವ ಮೊದಲೇ ಅವರೊಳಗೊಂದಾಗಿ, ತನ್ನ ಜನನ ಪ್ರಮಾಣ ಪತ್ರ ಕೈಗೆಟಕುವ ಮೊದಲು ಅಟ್ಟಹಾಸದಿಂದ ಪಾಸ್ಪೋರ್ಟ್ ಮಾಡಿಸಿಕೊಂಡು, ಇತರೆ ದೇಶಗಳ ವೀಸಾ ಪಡೆದು ವರ್ಲ್ಡ್ ಟೂರ್ ಹೋಗಿ ವಿಶ್ವದೆಲ್ಲೆಡೆ ರಣಕೇಕೆ ಹಾಕುತ್ತಾ ಮಜಾ ಉಡಾಯಿಸುತ್ತಿದೆ.

ವಿಶ್ವದಲ್ಲೆಲ್ಲ ಇದುವರೆಗೆ ಈ ಮಹಾಮಾರಿಗೆ ಸಂಪೂರ್ಣವಾಗಿ ಅಂತ್ಯ ಹಾಡಲು ದಾರಿ ಕಂಡವರೂ ಇಲ್ಲ, ಹಾಗೂ ಅದರ ಭವಿಷ್ಯದ ತೀವ್ರತೆ ಬಗ್ಗೆ ಅರಿತವರೂ ಇಲ್ಲ. ಕೆಲವಡೆ ಔಷದಿ ಕಂಡುಕೊಂಡರೂ ಪ್ರಯೋಗ ನಡೆಸುವ ದೈರ್ಯ‌ವೂ ಇಲ್ಲ.

ಕೆಲವೊಂದು ದೇಶಗಳ ಜನರು ಕೋರೋನಾ ವಿರುದ್ಧ ಹೋರಾಡಲು ಶಕ್ತರಾಗಿದ್ದು, ಮತ್ತೆ ಕೆಲವು ದೇಶಗಳು ಆಡಳಿತ ತಜ್ಞರ ಅಭಿಪ್ರಾಯ ತಳ್ಳಿಹಾಕಿ ಅತಿ ಬುದ್ಧಿವಂತಿಕೆಯಿಂದ ಕೊರೋನಾದೊಂದಿಗೆ ಜೀವನ ನಡೆಸಲು ಹೊರಟಿದ್ದಾರೆ. ಇನ್ನಿತರ ಕೆಲವು ದೇಶಗಳು ಬಲಿಷ್ಠ ಆಯುಧಗಳನ್ನು ಬಳಸಿ ಪರಿಹಾರದ ಬೆನ್ನು ಹತ್ತಿವೆಯಾದರೂ ಆಯುಧ ಪ್ರಯೋಗಿಸುವ ವಿದ್ಯೆಯೇ ತಿಳಿದಿಲ್ಲವಲ್ಲಾ..!!!?

ಸದ್ಯ ಭಾರತ ಮೂರನೇ ಹಂತದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಭಾರತ ಸರ್ಕಾರ ಕೊರೋನಾ ಹರಡುವಿಕೆ ತಡೆಗಟ್ಟಲು ಪೂರ್ಣಪ್ರಮಾಣದಲ್ಲಿ ಹಲವು ಸ್ಥರಗಳಲ್ಲಿ ಲಾಕ್ಡೌನ್ ನೀತಿ ಅನುಸರಿಸುತ್ತಿದೆ ಮತ್ತು ಪ್ರತಿ ಮನೆಗೂ ಆಹಾರ ಮತ್ತು ದಿನಸಿ ಸಾಮಗ್ರಿಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದೆ. ದೇಶದಲ್ಲಿ ಸುಮಾರು 70 ಪ್ರತಿಶತ ಜನರು ಲಾಕ್ಡೌನ್ ಆದೇಶವನ್ನು ಅನುಸರಿಸಲು ಶಕ್ತರಾಗಿದ್ದಾರೆ. ಆದರೆ ಆರ್ಥಿಕವಾಗಿ ಸಬಲರಗಾದ ನಾಗರಿಕರಿಂದ ಇದು ಸಾಧ್ಯವಾಗುತ್ತಿಲ್ಲ. ಕಾರಣ ಕೆಲಸ ವಿಲ್ಲದೆ ಕೆಲವು ಕಾರ್ಮಿಕ ವರ್ಗದವರು, ಭಿಕ್ಷುಕರು, ಬಡಜನರು ಮತ್ತು ಇನ್ನಿತರ ಕೆಲವು ವರ್ಗದ ಜನತೆ ಒಂದು ಹೊತ್ತಿನ ತುತ್ತಿಗೂ ಕೂಡ ಪರದಾಡುವಂತಾಗಿದೆ. ಅದರಲ್ಲೂ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿಯೇ ಇಲ್ಲದೆ ಆಹಾರ ಪಡೆದುಕೊಳ್ಳುವುದು ಸಾಧ್ಯವಾಗುತ್ತಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಕೆಲವು ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಬಡತನ ಕ್ಷೀಣಿಸುತ್ತಿದೆ ಎನ್ನಲಾಗುತ್ತಿದೆ. ಆದರೆ ಇದು ಎಷ್ಟರಮಟ್ಟಿಗೆ ನಿಜವೋ ಬಲ್ಲವರಿಲ್ಲ..! ಲಾಕ್ಡೌನ್ ಸಮಯದಲ್ಲಿ ಕೆಲವು ಕಡೆಗಳಲ್ಲಿ ಜನರು ಆಹಾರಕ್ಕಾಗಿ, ಆಶ್ರಯಕ್ಕಾಗಿ, ಪರಿತಪಿಸುತ್ತಿರುವುದು ಕಂಡರೆ ಭಾರತ ನಿಜವಾಗಿಯೂ ಬಡತನದಿಂದ ಹೊರಬರುತ್ತಿದೆಯೇ ಎನ್ನುವ ಅನುಮಾನ ಮೂಡುತ್ತದೆ. ಬಡವ ಶ್ರೀಮಂತರ ನಡುವಿನ ಅಂತರ ಮತ್ತೂ ಹೆಚ್ಚಾದಂತೆ ಕಾಣುತ್ತಿದೆ. ವಿದೇಶದಿಂದ ತವರಿಗೆ ಮರಳಲು ಸಾಧ್ಯವಾಗದೆ ಉಳಿದಿದ್ದ ಹಲವಾರು ಭಾರತೀಯರಿಗೆ ಕೇಂದ್ರ ಸರ್ಕಾರ ‘ವಂದೇ ಭಾರತ್ ಮಿಷನ್’ ಯೋಜನೆಯೊಂದಿಗೆ ಎಕನಾಮಿಕ್ ಕ್ಲಾಸ್ ವಿಮಾನದ ಮೂಲಕ ತವರಿಗೆ ಮರಳುವ ಅವಕಾಶ ಮಾಡಿಕೊಡುತ್ತಿದೆ. ಕಾರಣ ಅವರೆಲ್ಲರೂ ಸ್ವಲ್ಪಮಟ್ಟಿಗೆ ಆರ್ಥಿಕವಾಗಿ ಸಬಲರಾದವರು. ಆದರೆ ಇದೇ ಸಮಯದಲ್ಲಿ ಭಾರತದೊಳಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋದ ಬಡ ಕಾರ್ಮಿಕರು ಹೋದ ಸ್ಥಳದಲ್ಲಿ ಕೆಲಸವಿಲ್ಲದೆ ಅಹಾರ ಕೊರತೆಯಿಂದ ಅಲ್ಲಿಯೂ ಉಳಿಯಲಾರದೆ, ಅತ್ತ ಹುಟ್ಟೂರಿಗೆ ತೆರಳಲು ಲಾಕ್ಡೌನ್‌ ನಿಂದಾಗಿ ಸಾಧ್ಯವಾಗದೇ ಕೆಲವರ ಬದುಕು ಅಂತ್ಯಗೊಂಡ ಘಟನೆಗಳು ವರದಿಯಾಗುತ್ತಿವೆ. ಕೆಲವೆಡೆ ಬಹು ದಿನಗಳ ಬಳಿಕ ರೈಲು ಬಸ್ಸಿನ ವ್ಯವಸ್ಥೆ ಮಾಡಲಾಗಿದೆಯಾದರೂ ಅದು ಸಮರ್ಪಕವಾಗಿಲ್ಲ.

ದಿನ ಬೆಳಗಾದರೆ ಸಾಕು ಸುದ್ದಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ “ಲಾಕ್ಡೌನ್ ಕಾರಣದಿಂದ ರೈಲು ಬರುವುದಿಲ್ಲವೆಂದು ನಂಬಿ ಹಳಿಯಲ್ಲಿ ಮಲಗಿ ರೈಲಿನಡಿಗೆ ಸಿಲುಕಿ ವಲಸೆ ಕಾರ್ಮಿಕರ ಮೃತ್ಯು”, “ರಸ್ತೆ ಬದಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಲಾರಿ”, “ರೈಲು-ಬಸ್ ನಿಲ್ದಾಣದಲ್ಲಿ ಬೀಡು ಬಿಟ್ಟ ವಲಸೆ ಕಾರ್ಮಿಕರು”, “20 ರೂ ಆಸೆಗಾಗಿ ಬಾಲಕಿಯನ್ನು ಬಾವಿಗೆ ತಳ್ಳಿದ ಮಹಿಳೆ”, 300 ಕಿಮೀ ಬಿಸಿಲಿನಲ್ಲಿ ನಡೆದು ಬಸವಳಿದು ವಲಸೆ ಕಾರ್ಮಿಕ ಮೃತ್ಯು”, “ನಡುರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದ ವಲಸೆ ಕಾರ್ಮಿಕ ಮಹಿಳೆ” ಎಂಬ ಹಲವು ಮನಕಲಕುವ ಸುದ್ದಿಗಳು ಕಣ್ಣ ಮುಂದೆ ಬರುತ್ತವೆ. ಇದನ್ನೆಲ್ಲ ನೋಡುವಾಗ ಬಡವರ ಜೀವಕ್ಕೆ ಬೆಲೆಯಿಲ್ಲ ಎಂಬಂತಾಗಿದೆ. ಉಳ್ಳವರಿಗೆ ಕೋರೋನ ಶಾಪವಾದರೆ ಇಲ್ಲದವರಿಗೆ ಬಡತನವೇ ಶಾಪ ಎಂಬಂತಾಗಿದೆ…!!

ಏನೇ ಆಗಲಿ ಕೊರೋನಾ ವಿರುದ್ಧ ಹೋರಾಡಲು ಇಡೀ ವಿಶ್ವವೇ ಒಂದಾಗಿದೆ. ಹಲವು ದೇಶಗಳು ವಿನೂತನ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಂಡು ಆ ಪೀಡೆಯನ್ನು ಓಡಿಸಲು ಬಲವಾದ ಪ್ರಯತ್ನ ಮಾಡುತ್ತಿದೆ. ಆರೋಗ್ಯ ಇಲಾಖೆ ಪೊಲೀಸ್ ಇಲಾಖೆ ಹಾಗೂ ಆಡಳಿತ ವರ್ಗ ಅವಿರತ ಶ್ರಮ ವಹಿಸುತ್ತಿದೆ. ಕೆಲದಿನಗಳ ಹಿಂದೆ ಭಾರತ ಸರಕಾರ ಇಪ್ಪತ್ತು ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಹೊರಡಿಸಿ ಕೋರೋನ ವಿರುದ್ಧ ಹೋರಾಡಲು ಬಹುದೊಡ್ಡ ಹೆಜ್ಜೆಯಿಟ್ಟಿದೆ. ಇದು ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಕೊರೋನಾ ವಿರುದ್ಧ ಹೋರಾಡಲು ಸಮಾನ ಶಕ್ತಿ ನೀಡಲಿ ಒಟ್ಟಿನಲ್ಲಿ ಜಗತ್ತಿಗೆ ಹರಡಿರುವ ಕೊರೋನಾದೊಂದಿಗೆ ಬಡತನವೂ ಬಹುಬೇಗ ಮುಕ್ತಿ ಕಾಣುವಂತಾಗಲಿ…..

Leave A Reply

Your email address will not be published.