ಹಣಕಾಸು ಸಚಿವರಿಂದ ಇಂದು ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ | 20 ಲಕ್ಷ ಕೋಟಿ ರೂ. ಘೋಷಣೆ ಬಗ್ಗೆ ವಿವರಣೆ
ನವದೆಹಲಿ : ಜಗತ್ತಿಗೇ ಮಾರಕವಾಗಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಹಲವು ಕಾರ್ಯಗಳನ್ನು ಕೈಗೊಂಡ ಬಳಿಕ ಬಹುದೊಡ್ಡ ಹೆಜ್ಜೆ ಇಟ್ಟಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ನಿನ್ನೆ ರಾತ್ರಿ ಕೊರೊನಾ ಬಿಕ್ಕಟ್ಟಿನಿಂದ ತತ್ತರಿಸಿರುವ ಎಲ್ಲ ವರ್ಗದವರಿಗೂ ನೆರವು ನೀಡುವಂತಹ 20 ಲಕ್ಷ ಕೋಟಿ ರೂ. ಮೊತ್ತದ ಬೃಹತ್ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಪ್ರಧಾನಿ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಕುರಿತು ಇಂದು ಸಂಜೆ 4 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಿ ಸಂಕ್ಷಿಪ್ತ ವಿವರಣೆ ನೀಡಲಿದ್ದಾರೆ. ಇದರೊಂದಿಗೆ ಲಾಕ್ ಡೌನ್ 4.0 ವಿಸ್ತರಣೆಯ ಬಗ್ಗೆ ವಿವರಣೆ ನೀಡುವ ನಿರೀಕ್ಷೆಯಿದೆ.
ಪ್ರಧಾನಿ ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ನಲ್ಲಿ ಕೊರೋನಾ ಹಾವಳಿಯಿಂದ ಕೆಂಗೆಟ್ಟಿರು ದೇಶದ ಪ್ರತಿ ಮೂಲೆಯನರೆಗಿನ ಸಂಘಟಿತ, ಅಸಂಘಟಿತ, ಕೂಲಿ ಕಾರ್ಮಿಕರಿಗೆ, ಮದ್ಯಮ ವರ್ಗ, ಪ್ರಾಮಾಣಿಕ ತೆರಿಗೆದಾರರು, ಪಶುಪಾಲಕರು, ಮೀನುಗಾರರು ಸೇರಿದಂತೆ ಹಲವು ವರ್ಗಗಳಿಗೆ ನೆರವು ಸಿಗುವ ನಿರೀಕ್ಷೆಯಿದೆ.
ಈ ಬಗ್ಗೆ ಹಣಕಾಸು ಸಚಿವರ ಇಂದಿನ ಸುದ್ದಿಘೋಷ್ಠಿಯಲ್ಲಿ ಸ್ಪಷ್ಟ ವಿವರಣೆ ಸಿಗಲಿದೆ.