7 ದಿನಗಳಲ್ಲಿ 6000 ಕಿ.ಮೀ ದೂರ ಕ್ರಮಿಸಬಲ್ಲ ಕ್ಷಮತೆ ಈತನದು!
ಆತ ಏಪ್ರಿಲ್ 29 ಕ್ಕೆ ತನ್ನ ಪ್ರಯಾಣ ಶುರುವಿಟ್ಟಿದ್ದ. ಹಾಗೆ ಕೆನ್ಯಾದಿಂದ ಹೊರಟವನು, ಮೇ 4 ರ ಮಧ್ಯಾಹ್ನದ ಹೊತ್ತಿಗೆ, ಇಡೀ ಭಾರತ ಲಾಕ್ ಡೌನ್ ನ ಸಡಿಲಿಕೆಯಿಂದ ಸಂಭ್ರಮದ ನಗು ಬೀರುತ್ತಿದ್ದರೆ, ಆತ ಮಧ್ಯಪ್ರದೇಶದ ಮಿನಾರ್ ಒಂದರ ಮೇಲೆ ಕೂತು ಆ ಸಂಭ್ರಮವನ್ನು ಕಣ್ಣು ತುಂಬಿ ಕೊಳ್ಳುತ್ತಿದ್ದ.
ಕೆನ್ಯಾದ ಭೂಪ್ರದೇಶಗಳನ್ನು ದಾಟಿ ಆನಂತರ ಅರಬ್ಬೀ ಸಮುದ್ರವನ್ನು ಹಿಂದಕ್ಕೆ ಹಾಕಿಕೊಂಡು ಮತ್ತೆ ನೆಲದ ಮೇಲೆ ಆರು ನೂರು ಕಿಲೋಮೀಟರುಗಳ ಕ್ರಮಿಸಿ ಮಧ್ಯಪ್ರದೇಶಕ್ಕೆ ಬಂದು ಹಿಂತಿರುಗಿ ನೋಡಿದಾಗ ಬರೋಬ್ಬರಿ ಐದು ದಿನದಲ್ಲಿ ಐದು ಸಾವಿರ ಕಿಲೋಮೀಟರುಗಳ ಲೆಕ್ಕ ಸಿಕ್ಕಿದೆ.
ಹಾಗೆ ಪ್ರಪಂಚ ಪರ್ಯಟನೆ ಹೊರಟವನಿಗೆ ಜೀವ ವಿಜ್ಞಾನಿಗಳು ಇಟ್ಟ ಹೆಸರೇ ಒನೊನ್. ಒನೊನ್ ಕುಕ್ಕೂ!
ಅಲ್ಲೊಂದು ಪುಟಾಣಿ ವಿಶ್ರಾಂತಿ ತೆಗೆದುಕೊಂಡು, ಒಂದಷ್ಟು ತಿಳಿನೀರು ಹುಡುಕಿ ಕುಡಿದು, ಆ ನಂತರ ಅಲ್ಲೇ ಕೆಲವೊಂದು ಕಾಳು ಹೆಕ್ಕಿ ತಿಂದು ಆತ ಮತ್ತೆ ಹೊರಟಿದ್ದಾನೆ. ಮತ್ತೆ ಸುಧೀರ್ಘ ಪ್ರಯಾಣಕ್ಕೆ ಪುಟಾಣಿ ದೇಹ ರೆಡಿಯಾಗಿದೆ.
ಮತ್ತೆರಡು ದಿನ, ಅಂದರೆ ಮೇ 6 ಕ್ಕೆ ಆತ ಬರೋಬ್ಬರಿ 6300 ಕಿಲೋಮೀಟರ್ ಗಳಷ್ಟನ್ನು ಪ್ರಯಾಣಿಸಿ ಮತ್ತೂ ಪ್ರಯಾಣ ಮುಂದುವರಿಸಿದ್ದ. ಆತ ಭಾರತವನ್ನು ಹಿಂದಕ್ಕೆ ಹಾಕಿ ಬಾಂಗ್ಲಾ ದೇಶದ ಮೇಲೆ ರೆಕ್ಕೆಯಗಲಿಸಿ ಸಾಗಿದ್ದ. ಈತನ ಪ್ರಯಾಣದ ಚಲನವಲನವನ್ನೆಲ್ಲ ಸ್ಯಾಟಲೈಟ್ ಟ್ರ್ಯಾಕಿಂಗ್ ಮೂಲಕ ಪಕ್ಷಿಪ್ರಿಯರಿಂದ ಜಗತ್ತಿನಾದ್ಯಂತ ವೀಕ್ಷಿಸಲಾಗುತ್ತಿದೆ.
ಹಾಗೆ ಒನೊನ್ ಕುಕ್ಕೂ ಎಂಬ ಕೋಗಿಲೆ ಒಂದು ಕಡೆ ಕ್ಷಮತೆಗೆ, ಮತ್ತೊಂದು ಕಡೆ ಸಹಿಷ್ಣುತೆಗೆ, ಇನ್ನೊಂದು ಕಡೆ ಪ್ರಪಂಚ ಪರ್ಯಟನೆಗೆ ತೊಡಗಿರುವವರಿಗೆ ಒಂದು ಸ್ಪೂರ್ತಿ.