ಕ್ಲಬ್ ಮತ್ತು ಪಬ್ ಗಳಲ್ಲಿ ಮದ್ಯ ಮಾರಾಟಕ್ಕೆ ನಾಳೆಯಿಂದ ಅವಕಾಶ

ಬೆಂಗಳೂರು : ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಕೂಡಲೇ ಭರ್ಜರಿ ಆದಾಯ ಹರಿದು ಬರುತ್ತಿದ್ದು, ಇದೀಗ ಪಬ್ ಮತ್ತು ಕ್ಲಬ್ ಗಳಲ್ಲಿಯೂ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ. ಇನ್ನು ಮುಂದೆ ಎಕಾನಮಿ ವಾರಿಯರ್ಸ್ (ಕುಡುಕರು/ಮದ್ಯಪ್ರಿಯರು) ಕೃಪೆಯಿಂದ ರಾಜ್ಯದ ಬೊಕ್ಕಸ ತುಂಬಿ ತುಳುಕಲಿದೆ.

ಮೊನ್ನೆ ಮಾರ್ಚ್ 4 ರಿಂದ ಎಂಎಸ್‌ಐಎಲ್ ಗಳಲ್ಲಿ ಮೊದಲಿಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಇದೀಗ ಪಬ್ ಮತ್ತು ಕ್ಲಬ್ ಗಳಲ್ಲಿಯೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಅಬಕಾರಿ ಸಚಿವ ಹೆಚ್ ನಾಗೇಶ್ ತಿಳಿಸಿದ್ದಾರೆ. ಇದು ನಾಳೆಯಿಂದ, ಅಂದರೆ ಶನಿವಾರದಿಂದ ರಾಜ್ಯಾದ್ಯಂತ ಪಬ್ ಮತ್ತು ಕ್ಲಬ್, ಎಲ್ಲಾ ಮದ್ಯದಂಗಡಿಯಲ್ಲಿ ಜಾರಿಗೆ ಬರಲಿದೆ. ಆದರೆ ಇಲ್ಲಿ ಕಂಡಿಷನ್ಸ್ ಹಾಕಿದ್ದು, ಮದ್ಯವನ್ನು ಎಂಆರ್ ಪಿ ಬೆಲೆಯಲ್ಲೇ ಮಾರಬೇಕು.

ಇಲ್ಲದಿದ್ದರೆ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಮಾತ್ರ ಮಾರಾಟ ಮಾಡಬೇಕು ಎಂದು ಅಬಕಾರಿ ಸಚಿವ ಹೆಚ್ ನಾಗೇಶ್ ಅವರು ಹೇಳಿದ್ದಾರೆ.

ವರ್ಷಕ್ಕೆ ಅಬಕಾರಿ ಆದಾಯ ಸರ್ಕಾರಕ್ಕೆ 25 ಸಾವಿರ ಕೋಟಿ ಬರಲಿದೆ. ಈ ವರ್ಷ 2500 ಕೋಟಿ ಹೆಚ್ಚಾಗಲಿದೆ. 22,500 ಕೋಟಿ ಆದಾಯಕ್ಕೆ ಹೆಚ್ಚುವರಿಯಾಗಿ 2500 ಕೋಟಿ ಸಿಗಲಿದೆ ಎಂದು ಅಬಕಾರಿ ಮಂತ್ರಿ ಹೇಳಿದರು. ಸುಪ್ರೀಂ ಕೋರ್ಟ್‌ ನೀಡಿದ ಆದೇಶ ನೋಡಿಲ್ಲ. ಆನ್ ಲೈನ್ ಮಾರಾಟಕ್ಕೆ ಅವಕಾಶ ನೀಡಿದರೆ ತಪ್ಪಿಲ್ಲ. ಮೊದಲಿಂದಲೂ ಆ ಬಗ್ಗೆ ಚರ್ಚೆ ಇತ್ತು ಎಂದು ಪ್ರಶ್ನೆಯೊಂದಕ್ಕೆ ಈ ಸಂದರ್ಭದಲ್ಲಿ ಅವರು ಉತ್ತರಿಸಿದರು.

Leave A Reply

Your email address will not be published.