ನಮ್ಮ ರಾಷ್ಟ್ರಗೀತೆಯ ಕರ್ತೃವಿನ ಜನುಮದಿನವಿಂದು
ಅದೊಂದು ಗೀತೆ ಕೇಳಿದರೆ ಸಾಕು ಭಾರತೀಯರು ಜಾಗೃತಗೊಳ್ಳುತ್ತಾರೆ. ಎದ್ದು ನಿಂತು ಗೌರವ ಸಲ್ಲಿಸುತ್ತಾರೆ. ಅದು ಮತ್ತಾವುದೂ ಅಲ್ಲ, ನಮ್ಮ ರಾಷ್ಟ್ರಗೀತೆ. ‘ಜನ ಗಣ ಮನ…’ ಎಂದು ಆರಂಭವಾಗುವ ನಮ್ಮ ರಾಷ್ಟ್ರಗೀತೆಯನ್ನು ಕೇಳಿದಾಕ್ಷಣ ಪ್ರತಿಯೊಬ್ಬ ಭಾರತೀಯರ ಕಿವಿಗಳು ನಿಮಿರುತ್ತವೆ. ಕಾಲುಗಳು ತಾನಾಗಿಯೇ ಮೇಲೇಳುತ್ತವೆ. ಅಷ್ಟೊಂದು ಶಕ್ತಿಯುಳ್ಳ ಗೀತೆಯನ್ನು ರಚಿಸಿದ ಮಹಾನ್ ಸಾಹಿತಿಯೇ ರವೀಂದ್ರನಾಥ ಠಾಗೋರ್.
ಮಾತ್ರವಲ್ಲದೇ ಏಷ್ಯಾದಲ್ಲೇ ಪ್ರತಿಷ್ಟಿತವಾದ ನೋಬೆಲ್ ಪುರಸ್ಕಾರವನ್ನು ಪಡೆದ ವ್ಯಕ್ತಿ ಹಾಗೂ ಮೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಗೌರವಾನ್ವಿತರು.
ರವೀಂದ್ರನಾಥ ಠಾಗೋರರ ಜನುಮದಿನವಿಂದು. 1861ರ ಮೇ 7ರಂದು ರವೀಂದ್ರನಾಥರು ಜನಿಸಿದರು. ಇವರ ತಂದೆ ದೇಬೇಂಬ್ರನಾಥ ಠಾಗೋರ್, ತಾಯಿ ಶಾರದಾ ದೇವಿ. ರವೀಂದ್ರನಾಥ ಠಾಗೂರರು ಬಾಲ್ಯದಿಂದಲೇ ಕವನಗಳನ್ನು ಬರೆಯುವ ಹವ್ಯಾಸವನ್ನು, ಆಸಕ್ತಿಯನ್ನು ಹೊಂದಿದ್ದರು. ತಮ್ಮ ಎಂಟನೇ ವಯಸ್ಸಿನಲ್ಲಿಯೇ ಪದ್ಯ ರಚನೆಯತ್ತ ಆಸಕ್ತಿ ತೋರಿದರು. ತಮ್ಮ ಹದಿನಾರನೇ ವಯಸ್ಸಿನಲ್ಲಿ ಭಾನುಶಿಂಘೊ (ಸೂರ್ಯ ಸಿಂಹ) ಎಂಬ ಗುಪ್ತ ನಾಮಧೇಯದಲ್ಲಿ ತಮ್ಮ ಮೊದಲ ಕವನವನ್ನು ಪ್ರಕಟಿಸಿದ್ದರು.
ಠಾಾಗೋರ್ ಅವರು 1877ರಲ್ಲಿ ಸಣ್ಣ ಕಥೆ ಮತ್ತು ನಾಟಕಗಳನ್ನು ಬರೆದು ಪ್ರಕಟಿಿಿಸಿದರು. ಭಾರತೀಯ ಸಾಂಪ್ರದಾಯಿಕ ಕಠೋರತೆಗಳನ್ನು ವಿರೋಧಿಸಿದ ಠಾಗೂರರು, ಬಂಗಾಳಿ ಕಲಾ ಪ್ರಕಾರಕ್ಕೆ ಹೊಸ ಮೆರುಗನ್ನು ನೀಡಿದರು. ಅವರ ಕವನಗಳು, ಕಾದಂಬರಿಗಳು, ಸಣ್ಣ ಕಥೆಗಳು, ಪ್ರಬಂಧಗಳು ಮತ್ತು ನೃತ್ಯ ನಾಟಕಗಳುರಾಜಕೀಯ ಮತ್ತು ವೈಯಕ್ತಿಕ ವಿಚಾರಗಳನ್ನು ಪ್ರತಿಫಲಿಸಿವೆ.
ಗೀತಾಂಜಲಿ, ಗೋರ, ಘರೇ ಬೈರೆ ಮುಂತಾದವು ಠಾಗೂರರ ಪ್ರಸಿದ್ಧ ಕೃತಿಗಳು. ಇವರ ಗೀತಾಂಜಲಿ ಕಾವ್ಯಕ್ಕೆ 1913ರಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಏಷ್ಯಾದಲ್ಲೇ ಪ್ರಪ್ರಥಮ ಬಾರಿಗೆ ನೊಬೆಲ್ ಪುರಸ್ಕಾರ ಪಡೆದ ಸಾಹಿತಿ ಹಾಗೂ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯು ಠಾಗೋರ್ ಅವರ ಪಾಲಾಗಿದೆ.
ರವೀಂದ್ರನಾಥ ಠಾಗೋರ್ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗವಹಿಸಿದ್ದರು.
ಗಾಂಧೀಜಿಯವರ ಮುಂದಾಳತ್ವದ ಸ್ವರಾಜ್ ಚಳುವಳಿಗೆ ಪೂರ್ಣ ಬೆಂಬಲ ನೀಡಿದ್ದರು. ಮಾತ್ರವಲ್ಲದೇ ಸಮಾಜದಲ್ಲಿ ಬೇರೂರಿದ್ದಂತಹ ಜಾತಿ ಪದ್ಧತಿ ಸೇರಿದಂತೆ ಹಲವಾರು ಅನಿಷ್ಟ ಹಾಗೂ ಶೋಚನೀಯ ಪಿಡುಗುಗಳನ್ನು ಖಂಡಿಸುತ್ತಿದ್ದರು. ಸಾಮಾಜಿಕ ಪಿಡುಗುಗಳನ್ನು ವಿರೋಧಿಸುವ ಸಲುವಾಗಿ ಹಲವಾರು ಕವನಗಳನ್ನು ಮತ್ತು ನಾಟಕಗಳನ್ನು ಠಾಗೋರ್ ರಚನೆ ಮಾಡಿದ್ದಾರೆ. ರವೀಂದ್ರನಾಥ ಠಾಗೋರ್ ನ್ನು ಭಾರತೀಯರು ಸದಾ ಸ್ಮರಿಸಲು ಮತ್ತೊಂದು ಕಾರಣವೆಂದರೆ ಅದು ನಮ್ಮ ರಾಷ್ಟ್ರ ಗೀತೆ. ನಮ್ಮ ರಾಷ್ಟ್ರಗೀತೆಯು ಬಂಗಾಳಿ ಭಾಷೆಯಲ್ಲಿದ್ದು ಸಂಸ್ಕೃತ ಪದಗಳೂ ಆವರಿಸಿಕೊಂಡಿವೆ.
1911ರ ಕಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆಂದೇ ‘ಜನ ಗಣ ಮನ…’ ಗೀತೆಯನ್ನು ಠಾಾಗೋರ್ ರಚಿಸಿದ್ದರು. ಅಂದೇ ಮೊದಲ ಬಾರಿಗೆ ಆ ಗೀತೆಯನ್ನ ಹಾಡಲಾಯಿತು. ಬಂಗಾಳಿ ಮತ್ತು ಸಂಸ್ತ್ತ್ಕ್ರತ ಮಿಶ್ರಿತ ಗೀತೆಯನ್ನು ಅಬಿದ್ ಅಲಿಯವರು ಹಿಂದಿ ಹಾಗೂ ಉರ್ದುವಿಗೆ ಭಾಷಾಂತರಿಸಿದರು. ಸಂವಿಧಾನ ರಚನಾ ಸಭೆಯು ಹಿಂದಿ ಭಾಷಾಂತರದ ಗೀತೆಯನ್ನು 1950ರ ಜನವರಿ 24ರಂದು ಭಾರತದ ರಾಷ್ಟ್ರಗೀತೆಯನ್ನಾಗಿ ಘೋಷಣೆ ಮಾಡಿತು. ನಮ್ಮ ರಾಷ್ಟ್ರಗೀತೆಯನ್ನು 48 ಸೆಕೆಂಡುಗಳಿಗೆ ಕಡಿಮೆ ಇಲ್ಲದಂತೆ, 52 ಸೆಕೆಂಡು ಮೀರದಂತೆ ಹಾಡಬೇಕು ಎಂಬ ನಿಯಮವಿದೆ.
ರವೀಂದ್ರನಾಥ ಠಾಾಗೋರ್ ಶಾಂತಿನಿಕೇತನದಲ್ಲಿ ಪ್ರಾರ್ಥನಾ ಮಂದಿರ, ಗ್ರಂಥಾಲಯ, ಪ್ರಾಯೋಗಿಕ ಶಾಲೆಯನ್ನು ಸ್ಥಾಪನೆ ಮಾಡಿದ್ದಾರೆ. ಠಾಾಗೋರ್ ಕವಿಯಾಗಿ, ಸಾಹಿತಿಯಾಗಿ ಗುರುತಿಸಿಕೊಂಡವರು. ನಮ್ಮ ರಾಷ್ಟ್ರಕ್ಕೆ ರಾಷ್ಟ್ರಗೀತೆಯನ್ನು ನೀಡಿದವರು. ಆ ಮಹಾನ್ ಸಾಹಿತಿಯ ಜನುಮದಿನವಿಂದು. ನಮ್ಮ ರಾಷ್ಟ್ರಗೀತೆಗೆ ಸದಾ ಗೌರವ ನೀಡೋಣ.
ರಾಷ್ಟ್ರಗೀತೆಯನ್ನು ನೀಡಿದ ಠಾಗೋರ್ ಅವರಿಗೆ ನನ್ನ ವಂದನೆಗಳು.
“ಕಡಲತಡಿಯಲ್ಲಿ ನಿಂತ ನೀರನ್ನು ನೋಡುತ್ತಾ ಕಾಲ ಕಳೆಯುತ್ತಿದ್ದರೆ ಸಮುದ್ರವನ್ನು ದಾಟಲು ಸಾಧ್ಯವಿಲ್ಲ” ಎಂಬ ಮಾತನ್ನು ಠಾಗೋರ್ ಹೇಳಿದ್ದಾರೆ. ಪ್ರಯತ್ನ ಮುಖ್ಯ ಎಂಬುದೇ ಇದರ ಒಳಾರ್ಥ. ಪ್ರಸ್ತುತ ಸ್ಥಿತಿಗೆ ಒಪ್ಪುವಂತಹ ಮಾತಿದು.
ಕೊರೊನಾವನ್ನು ಹೊಡೆದೋಡಿಸಲು ಪ್ರತಿಯೊಬ್ಬರೂ ಪ್ರಯತ್ನ ಪಟ್ಟರೆ ನಮ್ಮ ರಾಷ್ಟ್ರ ಕೊರೋನಾ ಮುಕ್ತವಾಗುತ್ತದೆ. ಸರಕಾರದ ನಿಯಮಗಳನ್ನು ಪಾಲಿಸುತ್ತಾ ಕೊರೋನಾ ವಿರುದ್ಧ ಹೋರಾಡೋಣ.
- ಸೌಜನ್ಯ.ಬಿ.ಎಂ.ಕೆಯ್ಯೂರು.
ದ್ವಿತೀಯ ಪತ್ರಿಕೋದ್ಯಮ
ವಿವೇಕಾನಂದ ಪದವಿ ಕಾಲೇಜು ಪುತ್ತೂರು.