ಸುಳ್ಯ | ಕೊರೋನ ವೈರಸ್ ನ ಜಾಗೃತಿ ಮೂಡಿಸುವ ವಿಭಿನ್ನ ಕಾರ್ಯಕ್ಕೆ ಮುಂದಾದ ಬೆಳ್ಳಾರೆಯ ಯುವಕ
ವರದಿ : ಹಸೈನಾರ್ ಜಯನಗರ
ದೇಶದಾದ್ಯಂತ ಕೊರೋನ ವೈರಸ್ ತಾಂಡವವಾಡುತ್ತಿದ್ದು ಸರಕಾರಗಳು ಮತ್ತು ವಿವಿಧ ಇಲಾಖೆಗಳು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಇದೇ ಸಂದರ್ಭದಲ್ಲಿ ಬೆಳ್ಳಾರೆ ಗ್ರಾಮದ ಕಿಶನ್ ಎಂಬ ಯುವಕ ಸುಳ್ಯ ತಾಲೂಕಿನಾದ್ಯಂತ ಸೈಕಲ್ ಸವಾರಿ ಮಾಡಿಕೊಂಡು ಕೊರೋನ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಪೆರುವಾಜೆ ಗ್ರಾಮದ ಮುಕ್ಕೂರು ನೇಸರ ಯುವಕ ಮಂಡಲ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯವರು ನೀಡಿದ ಕೊರೊನಾ ಜಾಗೃತಿ ಕರಪತ್ರವನ್ನು ಸೈಕಲ್ ಹಿಂಭಾಗ, ಮುಂಭಾಗದಲ್ಲಿ ಅಂಟಿಸಿ ಈ ಜಾಗೃತಿ ಕಾರ್ಯ ಮಾಡುತ್ತಿದ್ದಾರೆ.
ಈ ಪ್ರಚಾರ ಯಾತ್ರೆಗೆ ಮೇ1 ರಂದು ಬೆಳ್ಳಾರೆಯಲ್ಲಿ ಚಾಲನೆ ನೀಡಲಾಗಿದ್ದು ಈಗಾಗಲೇ ಸುಳ್ಯದ ಹಲವು ಗ್ರಾಮಗಳಲ್ಲಿ ಇವರು ಪ್ರಚಾರ ಯಾತ್ರೆಯನ್ನು ಮಾಡಿರುತ್ತಾರೆ.
ದೇಶದಲ್ಲಿ ಎಲ್ಲರೂ ಸಮಾನರು ದೇಶಕ್ಕಾಗಿ ಪ್ರತಿಯೊಬ್ಬ ಪ್ರಜೆಯು ಏನಾದರೂ ಸೇವೆಯನ್ನು ಈ ಸಂದರ್ಭದಲ್ಲಿ ಸಲ್ಲಿಸುವುದು ಪ್ರತಿಯೊಬ್ಬನ ಜವಾಬ್ದಾರಿ.
ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮವನ್ನು ನಡೆಸುತ್ತಿದ್ದೇನೆ ಎಂದು ಅವರು ಪತ್ರಿಕೆಗೆ ಹೇಳಿಕೆ ನೀಡಿದರು.