ನೆಕ್ಕಿಲಾಡಿ ಆದರ್ಶನಗರದಲ್ಲಿ ಭೂಗರ್ಭದೊಳಗಿಂದ ಭಾರೀ ಸದ್ದು

ಉಪ್ಪಿನಂಗಡಿ : 34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಆದರ್ಶನಗರದಲ್ಲಿ ಭೂಮಿಯಡಿ ಆಗಾಗ ಭಾರೀ ಶಬ್ದ ಕೇಳಿ ಬರುತ್ತಿದ್ದು ಇದು ಸ್ಥಳೀಯರ ಆತಂಕಕ್ಕೆ ಮತ್ತು ಪರಿಸರದ ನಿಗೂಢತೆಗೆ ಸಾಕ್ಷಿಯಾಗಿದೆ.

ಪುತ್ತೂರು- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ದೊಡ್ಡ ತಾಡನದ ಶಬ್ದ ಆಗಾಗ ಕೇಳಿಬರುತ್ತಿದೆ. ದೊಡ್ಡ ದೊಡ್ಡ ಬಂಡೆಗಳು ಪರಸ್ಪರ ಕುಟ್ಟಿಕೊಂಡಂತೆ ಶಬ್ಧ ಉಂಟಾಗುತ್ತಿದೆ.

ಈ ಶಬ್ದ ಸುಮಾರು 20 ರಿಂದ 30 ಸೆಕೆಂಡ್ ಇರುತ್ತದೆ. ದಿನಕ್ಕೆ ನಾಲ್ಕೈದು ಬಾರಿ ಶಬ್ದವಾಗುವುದು ನಮ್ಮ ಗಮನಕ್ಕೆ ಬಂದಿದ್ದು, ನಿನ್ನೆ ಮೇ 5 ರಂದು ಬೆಳಗಿನ ಹೊತ್ತು ಸುಮಾರು 10 ಕ್ಕೆ ಕೂಡಾ ಈ ಶಬ್ದ ಕೇಳಿ ಬಂದಿದೆ ಎನ್ನುತ್ತಾರೆ ಸ್ಥಳೀಯರು.

ಆದರ್ಶನಗರದ ಪರಿಸರದಲ್ಲಿ ಭೂಮಿಯ ಒಳಗೆ ಸದ್ದು ಸುಮಾರು ವರ್ಷಗಳಿಂದಲೂ ಕೇಳಿ ಬರುತ್ತಿರುವುದಾಗಿ ಸ್ಥಳೀಯ ವ್ಯಕ್ತಿಗಳು ಹೇಳುತ್ತಿದ್ದಾರೆ. ಕೆಲವರ ಮನೆಯ ಬಳಿ ಈ ಸದ್ದು ಜೋರಾಗಿ ಕೇಳಿ ಬರುತ್ತಿದ್ದರೆ, ಮತ್ತೆ ಕೆಲವು ಕಡೆ ಕ್ಷೀಣ ಸದ್ದು ಬರುತ್ತಿದೆ. ಎಲ್ಲಾ ಸಮಯದಲ್ಲೂ ಸದ್ದು ಇರುವುದಿಲ್ಲ. ನಿರ್ದಿಷ್ಟ ಸಮಯದಲ್ಲೂ ಇರುವುದಿಲ್ಲ. ದಿನಕ್ಕೆ ನಾಲ್ಕೈದು ಬಾರಿ ಯಾವುದೇ ಸಮಯದಲ್ಲಾದರೂ ಸದ್ದು ಕೇಳಿ ಬರಬಹುದು ಎಂದು ಸ್ಥಳೀಯವಾಸಿಗಳು ಹೇಳುತ್ತಿದ್ದಾರೆ.

ಸುಮಾರು 50 ವರ್ಷಗಳ ಹಿಂದೆ ಈ ಕೆಲವು ಕಡೆ ಗ್ರಾನೈಟ್ ಕಲ್ಲು ಗಣಿಗಾರಿಕೆಯನ್ನು ನಡೆಸಲಾಗುತ್ತಿತ್ತು. ಅದರಿಂದ ಉಂಟಾದ ಬಿರುಕಿನಿಂದ ಏನಾದರೂ ಈ ಸದ್ದು ಬರುತ್ತಿರಬಹುದೆ ಎಂಬುದು ಸ್ಥಳೀಯರ ವಿಶ್ಲೇಷಣೆ.

ಇನ್ನು ಭೂಗರ್ಭ ಶಾಸ್ತ್ರಜ್ಞರು ಹಲವು ಸಂಭವನೀಯತೆಯನ್ನು ನಮ್ಮ ಮುಂದಿಡುತ್ತಾರೆ. ಮೊದಲನೆಯದಾಗಿ ಈ ಹಿಂದೆ ಈ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಮಾಡಿದ ಪರಿಣಾಮ ಭೂಮಿಯೊಳಗೆ ಉಂಟಾದ ಬಿರುಕಿನಿಂದಾಗಿ ಈಗ ಭೂಮಿ ಜರುಗಿ (ಜರಿಯುವಿಕೆ) ಈ ಸದ್ದು ಬರಬಹುದು.
ಕೆಲವೊಮ್ಮೆ ಅತ್ಯಂತ ಕ್ಷೀಣ ಪ್ರಮಾಣದ ಭೂಕಂಪನಗಳು ಕೂಡಾ ಇಂತಹ ಸದ್ದು ಬರಲು ಕಾರಣ ಆಗಬಹುದು. ಭೂಕಂಪನಗಳು ಭೂಮಿಯ ಒಳಗಡೆ ನಡೆಯುವ ಸಾಮಾನ್ಯ ಪ್ರಕ್ರಿಯೆಗಳು. ಅವು ಸಣ್ಣ ಪ್ರಮಾಣದಲ್ಲಿ ನಿರಂತರವಾಗಿ ನಡೆಯುತ್ತಾ ಇರುತ್ತದೆ. ಭೂಮಿಯ ಮೇಲಿರುವ ಹಲವು ಶಿಲಾಪದರಗಳ ಪರಸ್ಪರ ರಿಸೆಟ್ ಮಾಡಿಕೊಂಡು, ಆಂತರಿಕವಾಗಿ ಒಳಗಡೆಗೆ ಹೊಂದಿಕೊಳ್ಳುತ್ತವೆ. ಆಗ ಇಂತಹ ಸದ್ದು ಬರುವ ಸಂಭವ ಇದೆ.

ಕೆಲವೊಮ್ಮೆ ನೀರು ಹರಿವಾಗ ಉಂಟಾಗುವ ನಿರ್ವಾತದಿಂದಾಗಿ ಗಾಳಿ ಚಲಿಸುವ ಸದ್ದು ಕೂಡ ಸಣ್ಣ ಪುಟ್ಟ ‘ ಕ್ರಿವೈಸ್ ‘ ಮೂಲಕ ಭೂಮಿಯ ಮೇಲ್ಮೈಗೆ ಕೇಳಿ ಬರಬಹುದು. ಆದರೆ ಯಾವುದನ್ನೇ ಆದರೂ ಸ್ಥಳ ಪರಿಶೀಲನೆ ಮಾಡಿ ಮತ್ತು ತಂತ್ರಜ್ಞಾನ ಬಳಸಿಕೊಂಡು ಮಾತ್ರ ಹೇಳಬಹುದು. ಜನರು ಊಹಾಪೋಹ ಮಾಡಬಾರದು. ಭಯಬೀಳುವ ಯಾವುದೇ ಆತಂಕ ಇಲ್ಲ. ಆದರೂ ಭೂ ಮತ್ತು ಗಣಿ ಇಲಾಖೆಗೆ ತಿಳಿಸುವ ಕೆಲಸ ಮಾಡುವುದು ಒಳ್ಳೆಯದು ಎಂದು ಭೂಗರ್ಭ ಶಾಸ್ತ್ರಜ್ಞ ರಾಗಿರುವ ನಮ್ಮ ಪುತ್ತೂರಿನವರೆ ಆದ ಮಧುಕರ ಗಣಪತಿ ಭಟ್ ಅವರು ತಿಳಿಸಿದ್ದಾರೆ.

Leave A Reply

Your email address will not be published.