ಕಾರ್ಮಿಕರಿಗೆ ಊರಿಗೆ ಹಿಂದಿರುಗಲು ಡಿಕೆಶಿ ನೀಡಿದ ಚೆಕ್ ನಕಲಿ | ಸಚಿವ ಆರ್. ಅಶೋಕ್
ಬೆಂಗಳೂರು : ಕಾರ್ಮಿಕರಿಗೆ ಊರಿಗೆ ಹಿಂದಿರುಗಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕಾಂಗ್ರೆಸ್ ಪಕ್ಷ ಚೆಕ್ ನೀಡಿದ್ದು ಅದು ನಕಲಿ ಚೆಕ್ ಎಂದು ಕಂದಾಯ ಸಚಿವ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರು ನೀಡಿದ ಚೆಕ್ ಮೇಲೆ ದಿನೇಶ್ ಗುಂಡುರಾವ್ ಸಹಿ ಇದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್. ಇವರ ಒಳ ಜಗಳ ಏನಿದೆಯೋ ಗೊತ್ತಿಲ್ಲ. ಚೆಕ್ ಮೇಲೆ ಡಿಕೆಶಿ ಸಹಿ ಇಲ್ಲ. ಹೀಗಾಗಿ ಈ ಚೆಕ್ ಕೂಡ ನಕಲಿ. ಇವರಿಗೆ ಖಾತೆ ಬದಲಾವಣೆ ಮಾಡುವ ಜ್ಞಾನ ಇಲ್ಲ. ಬಸ್ ಬಿಡುವ ಬಗ್ಗೆ ನಮಗೆ ಸಲಹೆ ನೀಡುತ್ತಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಕಾಂಗ್ರೆಸ್ ನಾಯಕರ ಮುಖಕ್ಕೆ ಹೊಡೆದಂತೆ ಹೇಳಿದರು .
ಗುಂಡುರಾವ್ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಇಷ್ಟೊಂದು ದೇಣಿಗೆ ನೀಡಿರಲಿಲ್ಲ. ಈಗ ಡಿಕೆ ಶಿವಕುಮಾರ್ ಅಧ್ಯಕ್ಷ ಆಗುತ್ತಿದ್ದಂತೆ ಒಮ್ಮಿಂದೊಮ್ಮೆಲೆ ದುಡ್ಡು ಎಲ್ಲಿಂದ ಬಂದಿದೆ?. ಅದು ನಮಗೆ ಆಶ್ಚರ್ಯ ತಂದ ಸಂಗತಿ. ಹೀಗಾಗಿ ಅವರು ನೀಡಿದ ಚೆಕ್‍ನ್ನು ನಾವು ಕೂಲಂಕುಶವಾಗಿ ಗಮನಿಸುತ್ತೇವೆ. ಅವರ ಒಂದು ಕೋಟಿ ಚೆಕ್ ಅನ್ನು ನಾವು ತಗೆದುಕೊಂಡಿಲ್ಲ. ನಾವು ಈಗಾಗಲೇ ನೂರಾರು ಕೋಟಿ ಕೋರೋನ ನಿರ್ಮೂಲನೆಗಾಗಿ ಖರ್ಚು ಮಾಡಿದ್ದೇವೆ ಎಂದು ಹೇಳಿದರು.
ನಿನ್ನೆ ಸುಮಾರು 5 ಸಾವಿರ ಮಂದಿ ನಡುವೆ ಕಾಂಗ್ರೆಸ್ ನಾಯಕರು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಕಾಂಗ್ರೆಸ್ ಪಕ್ಷದವರು ನಿಯಮ ಉಲ್ಲಂಘನೆ ಮಾಡಿದ್ದಾರೆ . ಬೇರೆಯವರಿಗೆ ಬುದ್ಧಿಹೇಳುವ ಇವರಿಗೆ ಯಾರಿಗಾದರೂ ಸೋಂಕು ಇದ್ದರೆ ಅನ್ನೋ ಅಲ್ಪ ಜ್ಞಾನವೂ ಅವರಿಗೆ ಇರಲಿಲ್ಲ. ಹೀಗಾಗಿ ಅವರಿಗೂ ಕೋರೋನ ತಪಾಸಣೆಯಾಗಬೇಕು ಎಂದು ಅಶೋಕ್ ಅವರು ಹೇಳಿದರು.
ಕಾಂಗ್ರೆಸ್ ನಾಯಕರಿಗೂ ಕ್ವಾರೆಂಟೈನ್ ಮಾಡಬೇಕಾದ ಅನಿವಾರ್ಯತೆ ಬರಬಹುದು. ಈ ಬಗ್ಗೆ ಅಧಿಕಾರಿಗಳ ಜೊತೆ ಹಾಗೂ ಸಿಎಂ ಜೊತೆ ಚರ್ಚಿಸಿ ಕಾಂಗ್ರೆಸ್ ನಾಯಕರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುತ್ತೇವೆ ಎಂದು ಕಿಡಿಕಾರಿದರು.