ಮಗು ಸತ್ತರೂ ಮನೆಗೆ ಹಿಂದಿರುಗದೆ ಕೊರೋನಾ ಹೋರಾಟದಿಂದ ವಿಮುಖರಾಗಲಿಲ್ಲ ಈ ವೈದ್ಯ
ಕೋರೋನಾ ಮನುಷ್ಯನ ಜೀವ ಹಿಂಡುತ್ತಿರುವುದಲ್ಲದೇ, ಇದೀಗ ಸಂಬಂಧಗಳನ್ನು ಕೂಡ ಕಸಿಯುವಷ್ಟರ ಮಟ್ಟಿಗೆ ತಲುಪಿದೆ. ಇಂದೋರ್ ನಲ್ಲಿ ಒಂದು ಮನ ಕಲಕುವ ಘಟನೆ ನಡೆದಿದೆ. ವೈದ್ಯನಾಗಿರುವ ಅಪ್ಪ ದೂರದಲ್ಲಿ ಕೋರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರೆ ತವರಿನಲ್ಲಿದ್ದ 15 ತಿಂಗಳ ಅವರ ಮಗು ಬಾರದ ಲೋಕಕ್ಕೆ ತೆರಳಿದೆ.
ಹೋಶಂಗಾಬಾದ್ನಲ್ಲಿನ ವೈದ್ಯ ದೇವೇಂದ್ರ ಮೆಹ್ರಾ ಅವರು ಕುಟುಂಬದೊಂದಿಗೆ ತನ್ನ ಊರಿನಲ್ಲಿದ್ದರು. ಕೆಲ ಸಮಯದ ಹಿಂದೆ ಕೊರೋನಾದ ಕೂಗು ಕೇಳಿಬಂದು, ರೋಗಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಇವರನ್ನು ಸುಮಾರು 300 ಕಿಲೋಮೀಟರ್ ದೂರದ ಇಂದೋರ್ ಗೆ ತೆರಳುವಂತೆ ಸೂಚಿಸಲಾಗಿತ್ತು. ವೈದ್ಯರ 15 ತಿಂಗಳ ಮಗು ಸತತ ಅನಾರೋಗ್ಯದಿಂದ ಬಳಲುತ್ತಿತ್ತು. ಈ ಕಾರಣದಿಂದ ವೈದ್ಯರಿಗೆ ಇಂದೋರ್ ಗೆ ಹೋಗುವುದು ಸುಲಭದ ಮಾತಾಗಿರಲಿಲ್ಲ. ಮಗುವನ್ನು ತಂದೆಯಾಗಿ, ವೈದ್ಯರಾಗಿ ನೋಡಿಕೊಳ್ಳುತ್ತಿದ್ದ ಇವರು ಕರ್ತವ್ಯದ ಕೂಗಿಗೆ ಓಗೊಟ್ಟು ಇಂದೋರ್ ಗೆ ಹೋಗಿಯೇ ಬಿಟ್ಟರು.
ವೈದ್ಯರು ಇಂದೋರ್ ಗೆ ಹೋಗಿ ಕರ್ತವ್ಯ ನಿರತರಾಗಿದ್ದರು. ಆದರೆ ಕೆಲವೇ ದಿನಗಳಲ್ಲಿ ವೈದ್ಯರಿಗೆ ಮಗು ಮರಣ ಹೊಂದಿದೆ ಎಂಬ ಆಘಾತಕಾರಿ ಮಾಹಿತಿ ಮುಟ್ಟಿತು. ಈ ಸುದ್ದಿ ಕೇಳಿಯೂ ವೈದ್ಯರು ತಮ್ಮ ಕರ್ತವ್ಯವನ್ನು ಬಿಟ್ಟು ಬರಲಿಲ್ಲ. ” ಮಗು ಎಂದಿಗೂ ಇನ್ನು ವಾಪಸ್ ಬರುವುದಿಲ್ಲ. ಇಲ್ಲಿನ ಸೋಂಕಿತ ರೋಗಿಗಳಿಗೆ ನನ್ನ ಅವಶ್ಯಕತೆ ಈಗ ಬಹಳಷ್ಟು ಇದೆ ಎಂದಿದ್ದರು ಅವರು.” ಆದರೆ ಮಾನವೀಯತೆ ಮೆರೆದ ವೈದ್ಯಾಧಿಕಾರಿಗಳು ಮೆಹ್ರಾ ಅವರನ್ನು ಮನೆಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ.
ವೈದ್ಯ ಮೆಹ್ರಾರವರ ಕರ್ತವ್ಯಪ್ರಜ್ಞೆ ನಿಜಕ್ಕೂ ಶ್ಲಾಘನೀಯ. ದೇಶದಾದ್ಯಂತ ಇಂದು ಇಂತಹ ಅನೇಕರು ತಮ್ಮ ಜೀವವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂತವರು ಹಲವರು ನಮ್ಮ ಊರಿನಲ್ಲಿ ಕೂಡ ಇರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಹಾಗಿದ್ದಲ್ಲಿ, ಅದನ್ನು ನಮ್ಮ ಗಮನಕ್ಕೂ ತನ್ನಿ.
ರಾಜೇಶ್ ಕೆ. ಶೇಣಿ