ದಿನಸಿ ತರಕಾರಿ ತರಲು ಹೋದ ಮಗ ಬ್ರ್ಯಾಂಡ್ ನ್ಯೂ ಸೊಸೆಯನ್ನು ಕರೆತಂದ
ಅಮ್ಮ ಮಗನನ್ನು ದಿನಸಿ ತರಲು ಪೇಟೆಗೆ ಕಳಿಸಿದ್ದಳು. ಮನೆಯಲ್ಲಿ ದಿನಸಿ ಮತ್ತು ತರಕಾರಿಗಳು ಮುಗಿದಿದ್ದವು. ಇನ್ನೇನು ಮಗ ಬರುತ್ತಾನೆಂದು ಅಮ್ಮ ಕಾಯುತ್ತಾ ಕೂತಿದ್ದಾಳೆ. ಮಗ ತರಕಾರಿ ಬರುವುದರೊಳಗಾಗಿ ಈರುಳ್ಳಿ ಹಚ್ಚಿಡೋಣ ಎಂದುಕೊಂಡು ಅಡುಗೆಮನೆಯಲ್ಲಿ ಈರುಳ್ಳಿ ಹೆಚ್ಚುತ್ತಿದ್ದಳು.
ಅಷ್ಟರಲ್ಲಿ ಕಾಲಿಂಗ್ ಬೆಲ್ಲಿನ ಸದ್ದು. ಮಗ ಬಂದೇಬಿಟ್ಟ ಅಂದುಕೊಂಡು ಖಾರದ ಈರುಳ್ಳಿಗೆ ಬರಿಸಿಕೊಂಡ ಕಣ್ಣೀರನ್ನು ಒರೆಸಿಕೊಂಡು ಬಂದು ಬಾಗಿಲು ತೆಗೆದರೆ ಮಗ ತರಕಾರಿ ಜೊತೆಗೆ ಹುಡುಗಿಯೊಬ್ಬಳನ್ನು ಕರೆತಂದಿದ್ದ !
ಘಾಜಿಯಬಾದ್ ನಿವಾಸಿಯಾದ ಆಕೆಯ ಮಗ ಇಪ್ಪತ್ತಾರರ ಹರೆಯದ ಗುಡ್ಡು ತಿಂಗಳ ಹಿಂದೆ ಹುಡುಗಿಯೊಬ್ಬಳನ್ನು ಹರಿದ್ವಾರದ ಆರ್ಯಸಮಾಜದಲ್ಲಿ ಮದುವೆಯಾಗಿದ್ದ. ಆತನ ಕೈಗೆ ಮದುವೆಯ ಪ್ರಮಾಣ ಪತ್ರ ಇನ್ನೂ ಸಿಕ್ಕಿರಲಿಲ್ಲ ವಾದ ಕಾರಣ, ಪತ್ನಿ ಸವಿತಾಳನ್ನು ದೆಹಲಿಯಲ್ಲಿ ಒಂದು ಮನೆ ಮಾಡಿ ಕೂರಿಸಿದ್ದ. ಅಷ್ಟರಲ್ಲಿ ಲಾಕ್ಡೌನ್ ಎದುರಾಯಿತು. ಆತನಿಗೂ ಪತ್ನಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಇತ್ತೀಚೆಗೆ ಲಾಕ್ಡೌನ್ ಸ್ವಲ್ಪಮಟ್ಟಿಗೆ ಸಡಿಲವಾದ ಕಾರಣ ಆತ ತನ್ನ ಅಮ್ಮ ತರಕಾರಿ ತರಲು ಹೇಳಿದ ನೆಪವನ್ನಿಟ್ಟುಕೊಂಡು ಸೀದಾ ದೆಹಲಿ ತಲುಪಿದ್ದಾನೆ. ಹಾಗೆ ಹೋಗಿ, ಹೀಗೆ ಬಂದು ಮನೆಮುಂದೆ ತರಕಾರಿಯ ಜತೆ ಹಾಜರಾಗಿದ್ದಾನೆ.
ಆದರೆ ಮಗ ಹುಡುಗಿಯೊಬ್ಬಳನ್ನು ಮದುವೆಯಾಗಿ ಕರೆದದ್ದಕ್ಕೆ ತಾಯಿ ಆಕೆಯನ್ನು ಮನೆಯೊಳಗೆ ಸೇರಿಸಿಕೊಳ್ಳಲು ಒಪ್ಪುವುದೇ ಇಲ್ಲ. ಆಕೆಗೆ ಬೇಕಾಗಿದ್ದುದು ಮಗ ಮತ್ತು ತರಕಾರಿ. ತರಕಾರಿ ಹೆಚ್ಚಲು ಇನ್ನೊಂದು ಹುಡುಗಿಯ ಅವಶ್ಯಕತೆ ಅವಳಿಗೆ ಈಗ ಇರಲಿಲ್ಲ !
ಆದುದರಿಂದ ಪೊಲೀಸರ ಮತ್ತು ಆಕೆಯ ಪೋಷಕರ ಸಹಾಯದಿಂದ ವಾಪಸ್ ಗಂಡನ ಜೊತೆ ದೆಹಲಿಯಲ್ಲಿ ಆಕೆ ತಂಗಿದ್ದ ಬಾಡಿಗೆ ಮನೆಗೆ ವಾಪಸ್ ಆಗಬೇಕಾಯಿತು.