ಪುತ್ತೂರಲ್ಲಿ ಇಂದಿನಿಂದ ಕೋವಿಡ್ ಟೆಸ್ಟಿಂಗ್ ಕಿಯೋಸ್ಕ್ | ಸರಕಾರಿ ಆಸ್ಪತ್ರೆಯಲ್ಲಿ ಕಿಯೋಸ್ಕ್ ಸ್ಯಾಂಪಲ್ ಕಲೆಕ್ಷನ್ ಶುರು
ಪುತ್ತೂರು: ಕೋವಿಡ್-19 ಸೋಂಕು ಪರೀಕ್ಷಿಸಲು ಮತ್ತು ಸ್ಯಾಂಪಲ್ ಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ ಪ್ರತಿ ತಾಲೂಕಿಗೆ ಒಂದರಂತೆ ’ಕೋವಿಡ್ ಟೆಸ್ಟಿಂಗ್ ಕಿಯೋಸ್ಕ್’ ಸ್ಥಾಪಿಸುವ ಸರಕಾರದ ಯೋಜನೆಯ ನಿಟ್ಟಿನಲ್ಲಿ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಏ.22 ರಂದು ಕಿಯೋಸ್ಕ್ ಅನ್ನು (ಮಾದರಿ ಸಂಗ್ರಹ ಕೇಂದ್ರ) ಅಳವಡಿಸಲಾಗಿದೆ.
ಇಂದು, ಏ.23 ಕ್ಕೆ ಇದರ ಕಾರ್ಯಾಚರಣೆ ಆರಂಭಗೊಂಡಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಈ ಕಿಯೋಸ್ಕ್ ಪಬ್ಲಿಕ್ ಟೆಲಿಫೋನ್ ಬೂತ್ ಮಾದರಿಯಲ್ಲಿದೆ. ಇದನ್ನು ಅಲ್ಯೂಮಿನಿಯಂ ಮತ್ತು ಅಕ್ರಿಲಿಕ್ ಗ್ಲಾಸ್ನಿಂದ ತಯಾರಿಸಲಾಗಿದೆ. ಹೊರ ಮೈ ಕೊರೊನಾ ಸೋಂಕು ನಿರೋಧಕವಾಗಿದೆ. ಇದು ಆರೋಗ್ಯ ಕಾರ್ಯಕರ್ತರಿಗೆ ಅಗತ್ಯವಾದ ಗ್ಲೌಸ್ ಮತ್ತು ಸೋಂಕಿತರ ಮಾದರಿಗಳನ್ನು ಸಂಗ್ರಹಿಸಲು ಮೆಡಿಕಲ್ ಕಿಟ್ ಅನ್ನು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ನಿರ್ವಹಣೆ ಹೇಗೆ ? ಈ ಬೂತ್ ನ ಹೊರಮೈ ಮುಂದೆ ಸೋಂಕು ಶಂಕಿತ ವ್ಯಕ್ತಿ ನಿಂತುಕೊಳ್ಳಬೇಕು.
ಆಗ ಆರೋಗ್ಯ ಸಹಾಯಕರು ಕೋವಿಡ್ ತಪಾಸಣೆಗೆ ಸಂಬಂಧಿಸಿದ ಮಾದರಿಗಳನ್ನು (ಸ್ಯಾಂಪಲ್) ಸಂಗ್ರಹಿಸುತ್ತಾರೆ. ಮಾದರಿಯನ್ನು ಸಂಗ್ರಹಿಸುವ ಮೊದಲು ಸಿಬ್ಬಂದಿ ಕೆಲವೊಂದು ಸ್ಯಾನಿಟೈಜೇಶನ್ ಪ್ರಕ್ರಿಯೆ ಕೈಗೊಳ್ಳುತ್ತಾರೆ.
ಸೋಂಕಿನ ಮಾದರಿಗಳನ್ನು ಸಂಗ್ರಹಿಸಿ ಸಮೀಪದ ಪ್ರಯೋಗಾಲಯಕ್ಕೆ ಮುಂದಿನ ಹಂತದ ಪರೀಕ್ಷೆಗೆ ಕಳುಹಿಸಲಾಗುವುದು. ಒಟ್ಟು ಸ್ಯಾಂಪಲ್ ಸಂಗ್ರಹಣಾ ಪ್ರಕ್ರಿಯೆ ಮುಗಿಸಿಕೊಂಡು ಬರಲು ಕೇವಲ 5 ನಿಮಿಷ ಸಾಕು. ಕೋವಿಡ್ ಸೋಂಕಿನ ಕುರಿತು ಯಾರಿಗಾದರೂ ಶಂಕೆ ಇದ್ದರೆ ಫಿವರ್ ಕ್ಲಿನಿಕ್ ಅಥವಾ ಆಸ್ಪತ್ರೆಗೆ ಭೇಟಿ ನೀಡುವ ಬದಲು ಕಿಯೋಸ್ಕ್ಗೆ ಭೇಟಿ ನೀಡಬಹುದು. ಆ ಮೂಲಕ, ಅನಗತ್ಯವಾಗಿ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಿದೆ ಎಂದವರು ತಿಳಿಸಿದರು.
ಕಿಯೋಸ್ಕ್ನಿಂದ ಸಮಯ ಉಳಿತಾಯ ಮತ್ತು ಖರ್ಚು ಕಮ್ಮಿ. ಸೋಂಕು ಹರಡುವಿಕೆ ಸಾಧ್ಯತೆ ಕನಿಷ್ಟ.
ಕಿಯೋಸ್ಕ್ ಗಳು ತಾಲ್ಲೂಕಿಗೆ ಒಂದರಂತೆ ಆರಂಭಿಸಲಾಗುತ್ತಿದೆ. ಪುತ್ತೂರು ಸರಕಾರಿ ಆಸ್ಪತ್ರೆಗೂ ಈ ಬೂತ್ ಬಂದಿದೆ. ಈ ಮೂಲಕ ಮಾದರಿ ಸಂಗ್ರಹ ಪ್ರಕ್ರಿಯೆಯನ್ನು ಮತ್ತಷ್ಟು ಹೆಚ್ಚಿಸಿ, ರೋಗ ಹರಡುವುದನ್ನು ತಡೆಯಲಾಗುವುದು. ಈ ಹಿಂದೆ ಆರೋಗ್ಯ ಸಹಾಯಕರು ಪಿಪಿಇ (ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್ಮೆಂಟ್) ಬಳಸಿಕೊಂಡು ಗಂಟಲು ದ್ರವ ಸಂಗ್ರಹಿಸಿದ ಬಳಿಕ ಪಿಪಿಇಯನ್ನು ಬಳಸುವಂತಿಲ್ಲ. ಇದರ ವೆಚ್ಚವೂ ಅಧಿಕವಾಗುತ್ತಿತ್ತು. ಇದೀಗ ಕಿಯೋಸ್ಕ್ನಿಂದಾಗಿ ಆರ್ಥಿಕ ವೆಚ್ಚವೂ ಕಡಿಮೆ ಮತ್ತು ಸಮಯವೂ ಉಳಿತಾಯ ಆಗುತ್ತದೆ.
– ಸಂಜೀವ ಮಠಂದೂರು, ಶಾಸಕರು ಪುತ್ತೂರು