ರಾಷ್ಟ್ರಮಟ್ಟದಲ್ಲಿ ತನ್ನ ನಟನೆ ಮತ್ತು ಸಂಗೀತದ ಮೂಲಕವೇ ಗುರುತಿಸಿಕೊಂಡ ಸಾಯಿ ಶರಣ್ ವಾಲಿಬಾಲ್ನಲ್ಲೂ ನಿಷ್ಣಾತ
ಪ್ರತಿಭೆಯನ್ನು ತೋರಿಸಿಕೊಳ್ಳಲು ಹಲವಾರು ವೇದಿಕೆಗಳಿವೆ. ಆಡುವ ಹುಮ್ಮಸ್ಸು ಇರುವಾತನಿಗೆ, ಕ್ಷೇತ್ರ ಯಾವುದಾದರೇನು?
ತಾನು ಇಳಿದದ್ದೆ ತನ್ನ ಇಷ್ಟದ ಕ್ಷೇತ್ರ ಎಂಬಂತೆ ಹಲವು ವೇದಿಕೆಗಳಲ್ಲಿ ಮಿಂಚಿದ ಪ್ರತಿಭೆ ಇವತ್ತಿನ ನಮ್ಮ ಹೀರೋ.
ಹೆಸರು ಸಾಯಿ ಶರಣ್. ವಾಲಿಬಾಲ್, ಸಂಗೀತ ಮತ್ತು ನಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಎಲ್ಲಾ ಕಡೆಯೂ ಸೈ ಎನಿಸಿಕೊಂಡಿರುವವರು.
ಮೂಲತ ಪಡೀಲಿನ ಜಲ್ಲಿಗುಡ್ಡೆ ನಿವಾಸಿ ಪಡುಬೀಡು ಯಶವಂತ ಶೆಟ್ಟಿ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರ. ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ಸೈಂಟ್ ಜೋಸೆಫ್ ಮತ್ತು ಪಿ.ಯು ಸಿ ಯನ್ನು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪೂರೈಸಿದ್ದಾರೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ.
ಬಾಲ್ಯದಿಂದಲೇ ಉತ್ತಮ ಕ್ರೀಡಾಪಟು ಆಗಬೇಕೆಂಬ ಕನಸು ಕಂಡ ಯುವ ಕ್ರೀಡಾಪಟು ತಮ್ಮ 12 ನೇ ವಯಸ್ಸಿನಲ್ಲಿ ಕ್ರೀಡಾಕ್ಷೇತ್ರದಲ್ಲಿ ಕಾಲಿಟ್ಟರು. ಇವರ ಗುರುಗಳು ಹಾಸನದ ಕೃಷ್ಣಮೂರ್ತಿ ಮತ್ತು ಮಂಗಳೂರಿನ ಉಮೇಶ್. ಸತತ 8 ವರ್ಷಗಳಿಂದ ಇವರು ವಾಲಿಬಾಲ್ ನ ಜೊತೆಗೆ ಇನ್ನಿತರ ಕ್ರೀಡೆಗಳನ್ನು ಅಭ್ಯಸಿಸುತ್ತಿದ್ದಾರೆ. ವಾಲಿಬಾಲ್ ಅನ್ನು ತಾಲೂಕು ಮಟ್ಟ ವಿಶ್ವವಿದ್ಯಾನಿಲಯ ಮಟ್ಟ ಹಾಗೂ ಹಲವಾರು ಕಡೆಗಳಲ್ಲಿ ಆಡಿ ಜಯಗಳಿಸಿದ್ದಾರೆ.
ಕ್ರೀಡೆ ಮಾತ್ರವಲ್ಲದೆ ಸಂಗೀತ ಮತ್ತು ನಟನೆಯಲ್ಲಿ ಅಭಿರುಚಿ ಹೊಂದಿರುವ ಇವರು, ಶಾಲಾ ದಿನಗಳ ಪ್ರತಿಭಾಕಾರಂಜಿಯಲ್ಲಿ ನಡೆದ ಸಂಗೀತ ಮತ್ತು ನಟನೆಯಲ್ಲಿ ಜಿಲ್ಲಾಮಟ್ಟಕ್ಕೆ ಸ್ಪರ್ಧಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಪದವಿ ಶಿಕ್ಷಣದಲ್ಲಿ ನಟನೆಗೆ ಹೆಚ್ಚು ಒತ್ತು ಕೊಟ್ಟ ಕಾರಣ, ರಾಜ್ಯಮಟ್ಟದ ಜೊತೆಗೆ ರಾಷ್ಟ್ರಮಟ್ಟದಲ್ಲಿಯೂ ತನ್ನ ಪ್ರತಿಭೆಯಿಂದ ಎಲ್ಲರ ಮನಗೆದ್ದಿದ್ದಾರೆ. ಸೈಂಟ್ ಅಲೋಶಿಯಸ್ ನಲ್ಲಿ ನಡೆದ ರಾಜ್ಯಮಟ್ಟದ ಸಂಗೀತ ಕಾರ್ಯಕ್ರಮದಲ್ಲಿ ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಾಗೆ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ಅಸ್ತಿತ್ವ 2K19 ನಲ್ಲಿ ಭಾಗವಹಿಸಿ ನಟನೆಯಲ್ಲಿಯು ಸೈ ಎನಿಸಿಕೊಂಡಿದ್ದಾರೆ. ಉತ್ತಮ ವಾಲಿಬಾಲ್ ಕ್ರೀಡಾಪಟುವಾಗಿ ಹೊರಹೊಮ್ಮಬೇಕೆಂಬುದು ಇವರ ಅಭಿಲಾಷೆ.