ಬೆಂಗಳೂರಿನಲ್ಲಿ ಸಿಲುಕಿಕೊಂಡು ತನ್ನೂರಿಗೆ ಬರಲು ಪರದಾಡುತ್ತಿದ್ದ ಯುವತಿಯನ್ನು ಮಂಗಳೂರಿಗೆ ಸುರಕ್ಷಿತವಾಗಿ ತಲುಪಿಸಿದ ಯು ಟಿ ಖಾದರ್

ಮಂಗಳೂರು: ಲಾಕ್‍ಡೌನ್ ಹಿನ್ನೆಲೆಯಲ್ಲಿ ತನ್ನ ಮನೆಗೆ ಬರಲಾಗದೇ ಬೆಂಗಳೂರಿನಲ್ಲಿ ಸಿಕ್ಕಿ ಹಾಕಿಕೊಂಡ ಮಂಗಳೂರು ಮೂಲದ ಯುವತಿಯನ್ನು ಮಾಜಿ ಸಚಿವ ಯು.ಟಿ ಖಾದರ್, ತನ್ನ ಕಾರಿನಲ್ಲಿ ಮಂಗಳೂರಿಗೆ ಕರೆತಂದು ಬಿಟ್ಟಿದ್ದಾರೆ.

ಮಂಗಳೂರಿನ ಮೂಲದ ಇಟಲಿಯಲ್ಲಿ ವಾಸವಾಗಿದ್ದ ಶ್ರೀಮಧು ಭಟ್ ಇಟಲಿಯಿಂದ ಮಾ.22 ರಂದು ಕೊನೆಯ ಅಂತಾರಾಷ್ಟ್ರೀಯ ವಿಮಾನದಲ್ಲಿ ದೆಹಲಿ ತಲುಪಿದ್ದಳು. ಇಟಲಿಯಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಆಕೆಯನ್ನು ದೆಹಲಿಯಲ್ಲಿ ಕ್ವಾರಂಟೈನಲ್ಲಿ ಇರಿಸಲಾಗಿತ್ತು. ಕ್ವಾರಂಟೈನ್ ಅವಧಿ ಮುಗಿದ ಬಳಿಕ
ಮೊನ್ನೆ ಏಪ್ರಿಲ್ 11 ರಂದು ರಾತ್ರಿ ದೆಹಲಿಯ ವಿಶೇಷ ಬಸ್ ಮೂಲಕ ಆಕೆ ಬೆಂಗಳೂರು ತಲುಪಿದ್ದಳು.

ಬೆಂಗಳೂರು ತಲುಪಿದ ನಂತರ  ಶ್ರೀಮಧು ಭಟ್ ಗೆ ಮಂಗಳೂರಿಗೆ ಬರಲು ಬಸ್ ಅಥವಾ ಯಾವುದೇ ವ್ಯವಸ್ಥೆ ಇರಲಿಲ್ಲ. ಆಕೆ ಜಿಲ್ಲಾಡಳಿತವನ್ನು ಸಂಪರ್ಕಿಸಲು ತನ್ನ ತಂದೆಯ ಮೂಲಕ ಯತ್ನಿಸಿದ್ದರೂ ಅವರಿಂದಲೂ ತಕ್ಷಣಕ್ಕೆ ಯಾವುದೇ ಸಹಾಯ ಬಂದಿರಲಿಲ್ಲ. ಈ ಮಾಹಿತಿ ಅದು ಹೇಗೋ ಮಾಜಿ ಸಚಿವ ಯು.ಟಿ ಖಾದರ್ ಅವರಿಗೆ ತಲುಪಿದೆ. ಆಕೆಯ ಕಷ್ಟಕ್ಕೆ ಸ್ಪಂದಿಸಿದ ಸಚಿವರು ತಾನು ಬೆಂಗಳೂರಿನಿಂದ ಮಂಗಳೂರಿಗೆ ಬರುವಾಗ ತನ್ನ ಕಾರಿನಲ್ಲಿ ಶ್ರೀಮಧು ಅವರನ್ನು ಕುಳಾಯಿಯಲ್ಲಿರುವ ಅವರ ಮನೆಗೆ ಕರೆದುಕೊಂಡು ಬಂದು ಬಿಟ್ಟಿದ್ದಾರೆ.

ಖಾದರ್ ಅವರ ಸಹಾಯ ಹಸ್ತದ ಈ ನಡೆಗೆ ಶ್ಲಾಘನೆ ಕೇಳಿಬಂದಿದೆ.

Leave A Reply

Your email address will not be published.