ಕೋರೋನಾಳಿಗೊಂದು ಥ್ಯಾಂಕ್ ಹೇಳೋಣ
ಇದೇನಿದು? ಈ ಮಹಾಮಾರಿಗೂ ಥ್ಯಾಂಕ್ಸಾ! ಅಂತ ಅಚ್ಚರಿಪಡಬೇಡಿ. ಈ ಶೀರ್ಷಿಕೆ ನೀಡುವುದಕ್ಕೂ ಕಾರಣ ಇದೆ. ಇಡೀ ಪ್ರಪಂಚವನ್ನೇ ತನ್ನ ಕಬಂಧ ಬಾಹುವಿನಲ್ಲಿ ಬಂಧಿಸಿ ರಣಕೇಕೆ ಹಾಕುತ್ತಿರುವ ಕೊರೊನಾ ಪ್ರತಿಕ್ಷಣವೂ ಮನುಷ್ಯ ಜೀವಿಯನ್ನು ಬಲಿ ತೆಗೆದುಕೊಳ್ಳುತ್ತಿದೆ. ಆದರೆ ಇದರಿಂದಾಗಿ ಮತ್ತೊಂದು ಹೊಸ ಆಶಾಭಾವನೆ ಮತ್ತು ಹೊಸ ಜೀವನ ಮರುಸೃಷ್ಟಿಯಾಗುತ್ತಿದೆ ಎಂಬುದೂ ಅಷ್ಟೇ ಸತ್ಯ.
ಪ್ರತೀ ವಸ್ತುವನ್ನೂ ಗ್ಯಾರೆಂಟಿ ಇಲ್ಲದೆ ಉತ್ಪಾದಿಸುವ ಚೀನಾ ಕೊರೊನವನ್ನು ಮಾತ್ರ ರೋಗದ ಗ್ಯಾರೆಂಟಿ ನೀಡಿಯೇ ಜಗತ್ತಿಗೆ ಬಳುವಳಿ ನೀಡಿದೆ. ತಾನು ಮಾತ್ರವಲ್ಲದೇ ಎಲ್ಲರನ್ನೂ ಸಂಕಷ್ಟಕ್ಕೆ ಈಡು ಮಾಡಿ ಈಗ ತಣ್ಣನೆಯ ನಿದ್ರೆ ಮಾಡುತ್ತಿರುವ ಚೀನಾ ಮತ್ತೆ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸಿ ತನ್ನನ್ನು ತಾನೇ ಒಬ್ಬಂಟಿಯಾಗಿಸಿಕೊಂಡಿದೆ.
ಚೈನಾ ಮೂಲದ ಕೊರೊನಾ ವೈರಸ್ ನಿಂದ ಪ್ರಪಂಚದ ಎಲ್ಲಾ ದೇಶಗಳೂ ಒದ್ದಾಡಿ ನಿಯಂತ್ರಣಕ್ಕಾಗಿ ವಿವಿಧ ತಂತ್ರಗಳನ್ನು ಅನುಸರಿಸಿದವು. ಭಾರತವೂ ಈ ವೈರಸನ್ನು ಒದ್ದೋಡಿಸಲು ಲಾಕ್ ಡೌನ್ ತಂತ್ರ ಅನುಸರಿಸಿ ಯಶಸ್ವಿಯತ್ತ ಸಾಗುತ್ತಿದೆ. ಪ್ರತಿದಿನ ಲಕ್ಷಾಂತರ ಕೋಟಿ ನಷ್ಟವಾಗುತ್ತಿದ್ದರೂ, ಲಾಕ್ ಡೌನ್ ನಿಂದ ಮನುಷ್ಯ ಜೀವನದ ಹಿಂದಿನ ಮಜಲುಗಳು ಮತ್ತೆ ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಇದಕ್ಕಾಗಿಯೇ ಕೊರೊನಾಕ್ಕೆ ಧನ್ಯವಾದ ಹೇಳಬೇಕಿದೆ.
ಸದಾ ಬ್ಯುಸಿಯಾಗಿರುತ್ತಿದ್ದ ಇಂದಿನ ದಿನಗಳಲ್ಲಿ ಕೊರೊನಾ ಲಾಕ್ ಡೌನ್ ನಿಂದ ಎಲ್ಲವೂ ತಟಸ್ಥವಾಗಿದೆ. ವಾರಕ್ಕೊಮ್ಮೆ ಮನೆಗೆ ಫೋನ್ ಮಾಡಲೂ ಕಷ್ಟಪಡುತ್ತಿದ್ದ ಮಗ ಈಗ ಯಾವುದೇ ಕೆಲಸವಿಲ್ಲದೆ, ಮನೆಯವರೊಂದಿಗೆ ಹಾಯಾಗಿದ್ದಾನೆ. ತೋಟದ ಕಡೆಗೆ ಇಣುಕಿ ನೋಡಲೂ ಸಂಕಟಪಡುತ್ತಿದ್ದ ಮನೆ ಹುಡುಗರಿಗೆ ತಂದೆ-ತಾಯಿ ಮನೆಯಲ್ಲಿ ಪಡುವ ಕಷ್ಟದ ಅರ್ಥವಾಗುತ್ತಿದೆ. ಟೈಂಪಾಸ್ ಅಂತ ಹೊಲಗದ್ದೆಗಳಲ್ಲಿ ಸುತ್ತಾಡುತ್ತಾ ದುಡಿಯುತ್ತಿದ್ದಾರೆ.
ಫಿಜ್ಜಾ, ಬರ್ಗರ್ ತಿನ್ನುತ್ತಿದ್ದ ಬಾಯಿಗಳಿಗೆ ಮನೆಯೂಟ ಬಾರೀ ದೂರವೇ ಆಗಿತ್ತು. ಆದರೆ ಈಗ ಮನೆಯೂಟವೇ ಅಮೃತ ಸಮಾನವಾಗಿದೆ ನಮ್ಮ ಯುವಜನಾಂಗಕ್ಕೆ. ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಅಣ್ಣ-ತಮ್ಮ, ಬಂಧು ಭಾಂಧವರನ್ನು ಒಂದಾಗಿಸಿದ ಕೊರೊನಾ ಹಳೆಯ ಬಂಧುತ್ವವನ್ನು ಗಟ್ಟಿಗೊಳಿಸುವಲ್ಲಿ, ಮರು ಸ್ಥಾಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದೆ ಅನ್ನೋದು ಸುಳ್ಳಲ್ಲ.
ಆರ್ಥಿಕ ತಜ್ಞರ ಪ್ರಕಾರ ಕೊರೊನಾ ಬಳಿಕ ಭಾರತ ಮತ್ತೆ ಪುಟಿದೇಳಲಿದೆ. 2020 ರ ಅಂತ್ಯಕ್ಕೆ ಭಾರತ ಯಶಸ್ವಿ ಆರ್ಥಿಕ ಶಕ್ತಿಯಾಗಿ ಪ್ರಪಂಚದಲ್ಲಿ ತನ್ನದೇ ಸ್ಥಾನವನ್ನು ಗಟ್ಟಿಗೊಳಿಸಲಿದೆ.
ಕಾರಣವೆಂದರೆ ಜಗತ್ತನ್ನು ಹೇಗಾದರೂ ಗೆಲ್ಲಲೇ ಬೇಕೆಂದು ಹಠಕ್ಕೆ ಬಿದ್ದ ಚೀನಾಕ್ಕೆ ಕೊರೊನಾ ವ್ಯಾಧಿಯು ಪ್ರಮುಖ ಅಸ್ತ್ರವಾಗಿ ಖಂಡಿತು. ತನ್ನನ್ನೇ ಆಪೋಷನ ತೆಗೆದುಕೊಳ್ಳುವ ಈ ರಕ್ಕಸ ವೈರಸ್ ನ್ನು ಇಡೀ ಜಗತ್ತಿಗೆ ಪಸರಿಸಿದ ಚೀನಾ ಈಗ ರೋಗವನ್ನು ತಡೆಗಟ್ಟಿ ಮೆರೆಯುತ್ತಿದೆ. ಇದರಿಂದ ಚೀನಾದ ಕುತಂತ್ರ ಜಗತ್ತಿನ ಮುಂದೆ ಜಗಜ್ಜಾಹೀರಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ವಾಣಿಜ್ಯ ಹೂಡಿಕೆಗೆ ಚೀನಾಗಿಂತಲೂ ಭಾರತವೇ ಸೂಕ್ತ ಮತ್ತು ನಂಬಿಕಸ್ಥ ಸ್ಥಳವಾಗಲಿದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಇದರಿಂದ ಮುಂದಿನ ದಿನಗಳಲ್ಲಿ ಭಾರತದಲ್ಲಿ ಹೂಡಿಕೆ ಹೆಚ್ಚಾಗಿ ಉದ್ಯೋಗ ಸೃಷ್ಟಿಯಾಗಲಿದೆ. ಪ್ರಪಂಚದ ಹೊಸತೊಂದು ಆರ್ಥಿಕ ಶಕ್ತಿಯಾಗಿ ಬೆಳೆಯಲಿರುವ ಭಾರತಕ್ಕೆ ಕೊರೊನಾವೇ ಈ ಶಕ್ತಿಗಳಿಸುವ ರಾಜಮಾರ್ಗವಾಗಲಿದೆ.
ಅದಕ್ಕಾಗಿ ಕೊರೊನಾಕ್ಕೊಂದು ಥ್ಯಾಂಕ್ಸ್ ಹೇಳೋಣ. ಎಷ್ಟೇ ಅಭಿನಂದಿಸಿದರೂ, ಆಕೆಯನ್ನು ಮನೆಯತನಕ ಕರೆದೊಯ್ಯುವುದು ಬೇಡ. ಆಕೆಯನ್ನು ಮನೆಗೆ ಕರೆಯದೆ, ಬೀದಿಯಲ್ಲೇ ಹಾಯ್- ಥ್ಯಾಂಕ್ಸ್ ಹೇಳಿ ಸಾಗಹಾಕೋಣ.
ಪ್ರಸಾದ್ ಕೋಲ್ಚಾರ್
Contact: prasadkolchar@gmail.com.