ಪಡಿತರಕ್ಕೆ ಹಣ ಪಡೆದರೆ ಕ್ರಮ, ಲೈಸೆನ್ಸ್ ರದ್ದು-ಸಚಿವ ಗೋಪಾಲಯ್ಯ ಎಚ್ಚರಿಕೆ
ಬೆಂಗಳೂರು: ಪಡಿತರ ಕೊಡುವಾಗ ಜನರ ಬಳಿ ಯಾವುದೇ ಕಾರಣಕ್ಕೂ ಹಣ ಪಡೆಯಬಾರದು ಹಾಗೂ ಅವರಿಗೆ ಸರಿಯಾಗಿ ರೇಷನ್ ವಿತರಣೆ ಮಾಡಬೇಕು. ಒಂದು ವೇಳೆ ನಿಮ್ಮ ಮೇಲೆ ಆರೋಪ ಕೇಳಿಬಂದರೆ ನಿಮ್ಮ ಲೈಸನ್ಸ್ ರದ್ದು ಮಾಡಬೇಕಾಗುತ್ತೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಶ್ ಕೆ ಗೋಪಾಲಯ್ಯ ಎಚ್ಚರಿಕೆ ನೀಡಿದ್ದಾರೆ.
ಎ.10ರಂದು ಬೆಳಗ್ಗೆ ಬೆಂಗಳೂರಿನ ಕೆಲವು ನ್ಯಾಯ ಬೆಲೆ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿದರು.
ಪೀಣ್ಯ, ಸುಂಕದ ಕಟ್ಟೆ, ಹೆಗ್ಗನಹಳ್ಳಿಲಿರುವ ಇರುವ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಬಯೋಮೆಟ್ರಿಕ್ ಉಪಯೋಗಿಸದಂತೆ ರೇಷನ್ ಕಾರ್ಡ್ ಗಳನ್ನ ನೋಡಿ ರೇಷನ್ ವಿತರಣೆ ಮಾಡಿ ಎಂದು ಸೂಚನೆ ನೀಡಿದರು.
ಜನರ ಬಳಿ ಸಮಸ್ಯೆಗಳ ಆಲಿಸಿದ ಸಚಿವ ಕೆ ಗೋಪಾಲಯ್ಯ ಅವರು, ಮುಕ್ತವಾಗಿ ನಿಮ್ಮ ಸಮಸ್ಯೆಗಳನ್ನ ನಮ್ಮ ಬಳಿ ಹೇಳಿಕೊಳ್ಳಿ. ನಿಮಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ರಾಜ್ಯ ಸರ್ಕಾರದಿಂದ ಒಂದು ತಿಂಗಳಿಗೆ 5 ರಿಂದ 10 ಕೆ.ಜಿ ಅಕ್ಕಿ, ಒಂದು ಕುಟುಂಬಕ್ಕೆ ಒಂದು ಕಾರ್ಡ್ ಗೆ ಎರಡು ಕೆಜಿ ಗೋಧಿ ಕೊಡಲಾಗುತ್ತದೆ. ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರದ ಪಡಿತರ ಬರುತ್ತದೆ. ಆಗ 10 ಕೆ ಜಿ ಅಕ್ಕಿ ಒಂದು ಕೆಜಿ ಬೇಳೆ ಕೊಡುತ್ತೇವೆ ಎಂದರು.