ನಿಟ್ಟೆ ಸಮೂಹ ಸಂಸ್ಥೆಯಿಂದ ಕೊವಿಡ್ -19 ಪರಿಹಾರ ನಿಧಿಗೆ 1.25 ಕೋಟಿ ರೂ. ದೇಣಿಗೆ
ಮಂಗಳೂರು: ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ ಮತ್ತು ನಿಟ್ಟೆ ವಿದ್ಯಾಸಂಸ್ಥೆಗಳನ್ನೊಳಗೊಂಡ ಮಂಗಳೂರಿನ ನಿಟ್ಟೆ ಸಮೂಹ ಸಂಸ್ಥೆಯು ಭಾರತದಲ್ಲಿ ಕೊವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವ ಪ್ರಯತ್ನಕ್ಕೆ ಬೆಂಬಲವಾಗಿ 1. 25 ಕೋಟಿ ರೂ. ಮೊತ್ತದ ನಿಧಿಯನ್ನು ದೇಣಿಗೆಯಾಗಿ ನೀಡಿದೆ.
ಈ ದೇಣಿಗೆಯ ಘೋಷಣೆಯನ್ನು ಮಾಡಿರುವ ಸಂಸ್ಥೆಯ ಅಧ್ಯಕ್ಷ ಎನ್.ವಿನಯ ಹೆಗ್ಡೆ ಅವರು, ಇದರಲ್ಲಿ 75 ಲಕ್ಷ ರೂ. ರೂಪಾಯಿಗಳನ್ನು ಪ್ರಧಾನಮಂತ್ರಿಯವರ ಕೇರ್ ನಿಧಿಗೆ ಮತ್ತು 50 ಲಕ್ಷ ರೂ.ಗಳನ್ನು ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ದೇಶವನ್ನು ಕಾಡುತ್ತಿರುವ ಕೊವಿಡ್ -19 ಎಂಬ ಸೋಂಕು ರೋಗದ ತಡೆಗಾಗಿ ಶ್ರಮವಹಿಸುತ್ತಿರುವ ಕೇಂದ್ರ ಹಾಗೂ ಆಡಳಿತ ಮಂಡಳಿ ಹಾಗೂ ಉದ್ಯೋಗಿಗಳು ತಮ್ಮ ವೃತ್ತಿಪರ ಕೌಶಲ್ಯದೊಡನೆ ಆರ್ಥಿಕ ನೆರವನ್ನು ಮನಃಪೂರ್ವಕವಾಗಿ ನೀಡಿರುವ ಧನ್ಯತೆಯಿದೆ ಎಂದವರು ತಿಳಿಸಿದ್ದಾರೆ.
ರಾಜ್ಯ ಸರಕಾರಗಳಿಗೆ ಬೆಂಬಲವಾಗಿ ನಿಟ್ಟೆ ಸಮೂಹ ಸಂಸ್ಥೆಯ ಮಂಗಳೂರಿನ ದೇರಳಕಟ್ಟೆಯಲ್ಲಿರುವ ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯು 1000 ಹಾಸಿಗೆಗಳನ್ನು ಹೊಂದಿದೆ.
ಇಲ್ಲಿರುವ ತಜ್ಞ ವೈದ್ಯಕೀಯ ಮತ್ತು ಆನುವೈದ್ಯಕ ಸಿಬಂದಿಗಳು ಹತ್ತಿರದ ಮತ್ತು ದೂರದ ಊರುಗಳಿಂದ ಬರುತ್ತಿರುವ ರೋಗಿಗಳ ಆರ್ಥಿಕ ಹಿನ್ನೆಲೆಯನ್ನು ಗಣನೆಗೆ ತೆಗೆದುಕೊಳ್ಳದೆ, ಸೇವೆಯೇ ಸಂಸ್ಥೆಯು ತನ್ನ ಸುತ್ತಮುತ್ತಲಿನ ಗ್ರಾಮಗಳ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಜೀವನಾವಶ್ಯಕ ನೆರವನ್ನು ನೀಡುತ್ತಿದೆ ಎಂದು ವಿನಯ ಹೆಗ್ಡೆ ಹೇಳಿದ್ದಾರೆ.