Breaking News : ಸುಳ್ಯದ ಸುಣ್ಣ ಮೂಲೆ ಬಳಿ ಗುಡ್ಡದಲ್ಲಿ ಬೆಂಕಿ ಅವಘಡ
ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಸುಣ್ಣ ಮೂಲೆ ಬಳಿ ಖಾಸಗಿ ವ್ಯಕ್ತಿಗಳಿಗೆ ಸೇರಿದ ಗುಡ್ಡೆ ಮತ್ತು ರಬ್ಬರ್ ತೋಟಕ್ಕೆ ಬೆಂಕಿ ಬಿದ್ದಿದೆ.
ವಿದ್ಯುತ್ ಟ್ರಾನ್ಸ್ಫಾರ್ಮರ್ ನಿಂದ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದ ಸುಮಾರು ಒಂದು ಎಕರೆಗೂ ಹೆಚ್ಚು ಜಾಗಕ್ಕೆ ಬೆಂಕಿ ಆವರಿಸಿದೆ.
ಸ್ಥಳಕ್ಕೆ ಸುಳ್ಯ ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿ ಬಂದಿದ್ದಾರೆ. ಅಗ್ನಿಶಾಮಕ ದಳದವರು ಬೆಂಕಿ ಇರುವ ಸ್ಥಳವನ್ನು ಸಮೀಪಿಸಲು ನೋಡಿದ್ದಾರೆ. ಬೆಂಕಿ ಹಿಡಿದ ಸ್ಥಳಕ್ಕೆ ಒಂದು ಕಚ್ಚಾ ರಸ್ತೆ ಇದ್ದು ಅದರಲ್ಲಿ ಅಗ್ನಿಶಾಮಕ ದಳದವರು ವಾಹನ ಚಲಾಯಿಸಿಲ್ಲ. ಅಗ್ನಿಶಾಮಕ ವಾಹನದ ಡ್ರೈವರ ರನ್ನು ಊರವರು ಎಷ್ಟು ಬೇಡಿಕೊಂಡರೂ ನಾನು ಮುಂದಕ್ಕೆ ಗಾಡಿ ಚಲಾಯಿಸುವುದಿಲ್ಲ ಎಂದು ಹಠ ಹಿಡಿದು ಕುಳಿತ.
ಆದುದರಿಂದ ಸ್ಥಳೀಯ ಗ್ರಾಮಸ್ಥರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಬೇಕಾಯಿತು. ಕೊನೆಗೂ ಗ್ರಾಮಸ್ಥರ ಪ್ರಯತ್ನದಿಂದಲೇ ಬೆಂಕಿ ಆರಿ ಹೋಗಿದೆ. ಅಗ್ನಿಶಾಮಕ ದಳದ ಜನರ ಈ ವರ್ತನೆಗೆ ಗ್ರಾಮಸ್ಥರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನಮಗೆ ಅಗ್ನಿಶಾಮಕದಳ ಇರುವುದು ಏನಕ್ಕೆ ಎಂದು ಊರವರು ಪ್ರಶ್ನೆ ಮಾಡುತ್ತಿದ್ದಾರೆ. ದೊಡ್ಡ ಪ್ರಮಾಣದ ಬೆಂಕಿ ಆರಿ ಹೋಗಿದ್ದರೂ ಮತ್ತೆ ಗಾಳಿಗೆ ಬೆಂಕಿ ಹೊತ್ತಿಕೊಳ್ಳುವ ಸಂಭವ ಇದೆ.
ಆಸ್ತಿ ನಷ್ಟದ ಅಂದಾಜು ಇನ್ನೂ ಮಾಡಬೇಕಿದೆ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.
ವರದಿ : ಹಸೈನಾರ್ ಜಯನಗರ