ಅಲ್ಲ್ ಕೋಡೆ ಬರ್ಸೋ ಗೆ ಮಾರ್ರೆ, ಮೂಳ್ ಪನಿ ಕೂಡ ಪಾಡುದುಜಿ

Share the Article

ಕೋರೋನಾದಿಂದ ಮಂಡೆ ಬೆಚ್ಚ ಮಾಡ್ಕೊಂಡು ಕಾಲಾಡಿಸಲಿಕ್ಕೆ ಸರಿಯಾಗಿ ಪೇಟೆಗೆ ಕೂಡ ಹೋಗಿ ಬರಲಾರದೆ ಇದ್ದ ಜನರ ಕೈಲಿ ಮೋದಿಯವರು ನಿನ್ನೆ ರಾತ್ರಿ ನೀರವ ಕತ್ತಲಿನಲ್ಲಿ ದೀಪ ಬೆಳಗಿಸಿದ್ದರು. ಅದರ ಮಂದ್ರ ಬೆಳಕಿನಲ್ಲಿ ದುಗುಡಗೊಂಡ ಮನಸ್ಸುಗಳು ಪ್ರಶಾಂತವಾಗಿ ಸ್ವಲ್ಪ ನೆಮ್ಮದಿ ಇನ್ನಷ್ಟು ಭರವಸೆಯನ್ನು ಕಂಡುಕೊಂಡಿದ್ದವು. ಅದರ ಬೆನ್ನಿಗೆ ಬಂತು ನೋಡಿ ರಾಜ್ಯದಲ್ಲಿ ಹಲವು ಕಡೆ ಮತ್ತು ನಮ್ಮೂರ ಸುತ್ತಮುತ್ತ ಮಳೆ. ಮನಸ್ಸು ಮತ್ತಷ್ಟು ಮುದಗೊಂಡಿದೆ.

.

ಮಡಿಕೇರಿಯ ಸಂಪಾಜೆ, ತೊಡಿಕಾನ, ಪೆರಾಜೆ, ಭಾಗದಲ್ಲಿ ಗಾಳಿ ಮಳೆಯಾಗಿದೆ. ಕಲ್ಲುಗುಂಡಿ ಪರಿಸರದಲ್ಲಿ ಮಳೆ ಚೆನ್ನಾಗೇ ಬಿದ್ದಿದೆ. ಇಚಿಲಂಪಾಡಿ, ಕೋಣಾಜೆ ಮುಂತಾದ ಕಡೆಗಳಲ್ಲಿ ಮಳೆ ಸುಳಿದು ಹೋಗಿದೆ.

ಸುಬ್ರಹ್ಮಣ್ಯದಲ್ಲಿ ತಕ್ಕಮಟ್ಟಿಗೆ ಭೂಮಿ ಒಂದು ಹಂತಕ್ಕೆ ತಂಪಾಗಿದ್ದು, ಹದಿನೈದು ನಿಮಿಷಗಳ ಕಾಲ ನಿರಂತರ ಮಳೆರಾಯನ ದರ್ಶನ. ಬೆಳಿಗ್ಗೆ ಎದ್ದು ನೋಡಿದರೆ ಮನೆಯ ಎದುರು ಒಣಗುತ್ತಿದ್ದ ಗೋರಂಟಿ ಗಿಡದ ಮೊಗ್ಗಿನಲ್ಲಿ ಕಿರು ನಗು.

ನೂಜಿಬಾಳ್ತಿಲದಲ್ಲಿ ಮಳೆಯ ಅಬ್ಬರ ಜೋರು. ಮತ್ತು ಗೂನಡ್ಕ ಸಮಿಪ ಗಾಳಿ ಮಳೆಗೆ ಮರ ಬಿದ್ದು ಮಡಪಾಡಿ ರಾಮಣ್ಣ ಅವರ ಮನೆಗೆ ಹಾನಿಯಾಗಿದೆ.

ಕರಾವಳಿಯ ಹಲವು ಕಡೆ ನಿನ್ನೆ ಮಳೆಯಾಗಿದೆ. ಬೆಳ್ತಂಗಡಿಯ ದಿಡುಪೆ, ಕಲ್ಮಂಜ, ಮುಂಡಾಜೆ, ನೆರಿಯ, ಅರಸಿನಮಕ್ಕಿ, ಪುದುವೆಟ್ಟು, ಬೆಳಾಲು ಮುಂತಾದ ಕಡೆ ಸುಮಾರು ಅರ್ಧಗಂಟೆ ಮಳೆ ಬಂದಿದೆ. ಬೆಚ್ಚ ಬಿಸಿಗೆ ಫ್ಯಾನ್ ಹಾಕಿಕೊಂಡು ಮಲಗುವವರು ನಿನ್ನೆ ಫ್ಯಾನ್ ಇಲ್ಲದೆ ಮಲಗುವಂತಾಗಿದೆ. ಅಷ್ಟರಮಟ್ಟಿಗೆ ಭೂಮಿ ತಂಪಾಗಿದೆ. ನೀರಿನ ಅಭಾವ ಆಗಿ ಜೋತು ಬಿದ್ದ ಅಡಿಕೆ ಗಿಡದ ಮಡಲುಗಳು, ಬೆಳಿಗ್ಗೆ ಏಕಾಏಕಿ ನಿಗುರಿಕೊಂಡು ಆಕಾಶಕ್ಕೆ ಮುಖ ಮಾಡಿಕೊಂಡು ನಿಂತಿವೆ. ಬೆಳ್ತಂಗಡಿಯ ಕೆಲವು ಕಡೆ ಜೋರಾಗಿ ಮಳೆ ಬಿದ್ದಿದ್ದರೆ, ಮತ್ತೆ ಕೆಲವು ಕಡೆ ಮಳೆಯ ಸುಳಿವೇ ಇಲ್ಲ.

ಕನ್ಯಾಡಿಯಲ್ಲಿ ಕಣ್ಣರೆಪ್ಪೆಯ ಮೇಲೆ ನಾಲ್ಕು ಹನಿ ಬಿದ್ದು ಒದ್ದೆಯಾಗುವಷ್ಟು ಮಾತ್ರದ ಮಳೆ. ಧರ್ಮಸ್ಥಳದಲ್ಲಿ ರಸ್ತೆಗಳು ಒದ್ದೆಯಾಗುವಷ್ಟು ಮಳೆ.

ಪುತ್ತೂರಿನಲ್ಲಿ ಮಳೆಯೇ ಇಲ್ಲ. ಯಾರೋ ಒಬ್ಬರು ಅಂಗಳದಲ್ಲಿ ನಿಂತಿದ್ದಾಗ ಉದ್ದ ಮೂಗಿನ ಮೇಲೆ ಒಂದು ಚಿಕ್ಕ ಹನಿ ಬಿದ್ದ ದೂರು ಪುತ್ತೂರಿನಿಂದ ಬಂದಿದೆ. ಸುಳ್ಯದಲ್ಲಿ ಪಿರಿಪಿರಿ ಮಳೆ. ಮಡಿಕೇರಿಯಲ್ಲಿ ದೊಡ್ಡ ಮಳೆ ಆದ ಕಾರಣ ಸುಳ್ಯದಲ್ಲಿಯು ಮಳೆ ಬರಬೇಕಿತ್ತು. ಆದರೆ ಅಲ್ಲಿ ನಿನ್ನೆ ದೊಡ್ಡ ಗಾಳಿ ಬೀಸಿದ್ದು ಮಳೆ ಮೋಡಗಳು ಚದುರಿ ಹೋಗಿವೆ.

ಮಳೆ ಬೀಳದ ಊರುಗಳಲ್ಲೂ ಇಳೆ ತಂಪಾಗಿದೆ.

Leave A Reply