ನಮ್ಮನ್ನು ನಗಿಸುತ್ತಿದ್ದ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ !

ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯ ಕಲಾವಿದ ಬುಲೆಟ್‌ ಪ್ರಕಾಶ್‌ 44 ವರ್ಷಕ್ಕೆ ಉಸಿರು ಚೆಲ್ಲಿ ಮಲಗಿದ್ದಾರೆ.

ಧ್ರುವ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ, ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚಿದ, ಸಿನಿ ರಸಿಕರನ್ನು ರಂಜಿಸಿದ ಈ ದೈತ್ಯ ದೇಹಿಯನ್ನು ಕಡೆ ಕಾಲದಲ್ಲಿ ರೋಗಗಳು ಇನ್ನಿಲ್ಲದೆ ಕಾಡಿದ್ದವು.

ತೀರ ಕೆಲ ದಿನಗಳ ಹಿಂದೆ ಗ್ಯಾಸ್ಟ್ರಿಕ್‌ ತೊಂದರೆಯಿಂದ ಬೆಂಗಳೂರಿನ ಪೋರ್ಟೀಸ್‌ ಆಸ್ಪತ್ರೆಯಲ್ಲಿ ಆಡ್ಮಿಟ್‌ ಆಗಿದ್ದ ಬುಲೆಟ್ ಪ್ರಕಾಶ್‌. ಆರೋಗ್ಯದಲ್ಲಿ ತುಂಬಾನೇ ಏರು-ಪೇರು ಕಾಣಿಸಿಕೊಳ್ಳುತ್ತಿತ್ತು.

ಬುಲೆಟ್‌ ಪ್ರಕಾಶ್ ಅವರು ಹುಟ್ಟಾ ದೈತ್ಯ ದೇಹಿ. ಬೆಳೆಯುತ್ತ ಬೆಳೆಯುತ್ತ ಅವರು ಇನ್ನಷ್ಟು ದೇಹತೂಕವನ್ನು ಹೊತ್ತುಕೊಂಡರು. ತನ್ನ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕೆಂಬ ಬಯಕೆ ಅವರಲ್ಲಿತ್ತು. ಅದೇ ಕಾರಣಕ್ಕೆ ಅವರು ಹಲವು ವಿಧಾನಗಳ ಮೂಲಕ ತಮ್ಮ ದೇಹ ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಅವರ ದೇಹ ಅದಕ್ಕೆ ಸಹಕರಿಸಲಿಲ್ಲ. ದೇಹ ತೂಕ ಇಳಿಸಿಕೊಳ್ಳುವ ಚಿಕಿತ್ಸೆಯು ಅವರ ಲಿವರ್‌ ಹಾಗೂ ಕಿಡ್ನಿ ವೈಫಲ್ಯಕ್ಕೆ ಕಾರಣ ಆಯಿತು.

ಆಸ್ಪತ್ರೆಯಲ್ಲಿ ಮೊನ್ನೆ ಎರಡು ದಿನಗಳಿಂದ ಅವರ ಆರೋಗ್ಯಸ್ಥಿತಿ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿತ್ತು. ನಿನ್ನೆಯಿಂದ ಅವರನ್ನು ವೆಂಟಿಲೇಟರ್ ನಲ್ಲಿ ಇಟ್ಟಿದ್ದರು. ಗ್ಯಾಸ್ಟ್ರೋಎಂಟರಾಲಜಿಸ್ಟ್, ನೆಫ್ರಾಲಜಿಸ್ಟ್, ಟ್ರಾನ್ಸ್‌ ಪ್ಲ್ಯಾಂಟ್  ತಜ್ಞರು ಚಿಕಿತ್ಸೆ ನೀಡಿದರೂ ಅದು ಫಲ ನೀಡದೆ ಅವರು ತೀರಿಕೊಂಡಿದ್ದಾರೆ.  

ಹಾಸ್ಯ ನಟರಾಗಿದ್ದರೂ ಅವರು ಕನ್ನಡಚಿತ್ರದ ಸ್ಟಾರ್ ನಟರಾದ ದರ್ಶನ್ ಅವರ ಸ್ನೇಹಿತರಾಗಿದ್ದರು. ಹಲವು ಸಂದರ್ಭಗಳಲ್ಲಿ ನರೇಂದ್ರ ಮೋದಿಯವರ ಆಲೋಚನೆಗಳನ್ನು ಬೆಂಬಲಿಸಿದ್ದರು. 2015 ರಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು.

ರಾಯಲ್ ಎನ್ಫೀಲ್ಡ್ ಬುಲೆಟ್ ಅವರ ಪ್ರೀತಿಯ ವಾಹನವಾಗಿತ್ತು. ಅದಕ್ಕಾಗಿ ಅವರಿಗೆ ಬುಲೆಟ್ ಪ್ರಕಾಶ್ ಎಂದು ಹೆಸರು ಬಂತು. ಬುಲೆಟ್ ಪ್ರಕಾಶ್ ಮತ್ತು ಸಾಧು ಕೋಕಿಲ ಕಾಂಬಿನೇಷನ್ ನ ಹಾಸ್ಯ ಸನ್ನಿವೇಶಗಳನ್ನು ಯಾರು ತಾನೇ ಮರೆಯಲು ಸಾಧ್ಯ? ಶರಾಬು ಹೀರುವ ಪಾತ್ರಗಳಲ್ಲಿ, ಖರಾಬ್ ಏರಿಯಾಗಳ ಪಾತ್ರಗಳಲ್ಲಿ ಸಾಧು ಕೋಕಿಲ, ‘ಅಮ್ಮಾ ತಾಯೇ’ ಖ್ಯಾತಿಯ ವೈಜನಾಥ ಬಿರಾದಾರ್ ರ ಸ್ಪೋಟಕ ಕಾಂಬಿನೇಷನ್ ಹಾಸ್ಯ ಸನ್ನಿವೇಶಗಳು ಮತ್ತು ಯಾವತ್ತೂ ಚಿತ್ರ ರಸಿಕರ ಮನದಲ್ಲಿ ಜೀವಂತವಾಗಿರಿಸುತ್ತವೆ.

ಇಷ್ಟು ದಿನ ನಮ್ಮನ್ನು ನಕ್ಕು ನಲಿಸಿದ ಬುಲೆಟ್ ಪ್ರಕಾಶ್, ಇವತ್ತು ತಮ್ಮ ಪ್ರೀತಿಯ ಬುಲೆಟ್ ಅನ್ನು ಇಲ್ಲೇ ಬಿಟ್ಟು, ನಮ್ಮ ಕಣ್ಣಲ್ಲಿ ಒಂದು ಹನಿ ನೀರು ಬರಿಸಿ ವಾಪಸ್ಸು ಬಾರದ ಲೋಕಕ್ಕೆ ಹೋಗುತ್ತಿದ್ದಾರೆ. ಇದೇ ಬದುಕಿನ ವಿಪರ್ಯಾಸ.

ಬುಲೆಟ್ ಪ್ರಕಾಶ್ ನಟಿಸಿದ ಕೆಲ ಚಿತ್ರಗಳ ಪಟ್ಟಿ

ಚಿತ್ರ ವರ್ಷ
ದ್ರುವ 2002
ಪಾರ್ಥ 2003
ಓ೦ಕಾರ ೨೦೦೪
ಅ೦ಬಿ ೨೦೦೬
ಮಾಸ್ತ್ ಮಜಾ ಮಾಡಿ ೨೦೦೮
ಐತಲಕ್ಕಡಿ ೨೦೧೦
ಜಾಕಿ ೨೦೧೦
ಮಲ್ಲಿಕಾರ್ಜುನ ೨೦೧೧
ದೆವ್ರಾಣೆ ೨೦೧೩
ರಜಿನಿ ಕಾ೦ತ ೨೦೧೩
ಪಾರಾರಿ ೨೦೧೩
ಜಟಾಯು ೨೦೧೩
ಶತ್ರು ೨೦೧೩
ಜ೦ಗಲ್ ಜಾಕಿ ೨೦೧೩
ಧನು ೨೦೧೩
ಸವಾಲ್ ೨೦೧೩
ಲವ್ ಶೋ ೨೦೧೪
ನಿ೦ಬೆ ಹುಳಿ ೨೦೧೪
ಪು೦ಗಿ ದಾಸ ೨೦೧೪
ರೋಜ್ ೨೦೧೪
ಆರ್ಯನ್ ೨೦೧೪
ಮಾಸ್ಟರ್ ಮೈ೦ಡ್ ೨೦೧೫
ರಾಟೆ ೨೦೧೫
ದಕ್ಷ ೨೦೧೫
ಬಾ೦ಬೆ ಮಿಟಾಯಿ ೨೦೧೫
ಪಾತರಗಿತ್ತಿ ೨೦೧೫
ರೆಡ್ ಅಲರ್ಟ್ ೨೦೧೫
ಮಳೆ ೨೦೧೫
ಲವ್ ಯು ಆಲಿಯ ೨೦೧೫
ಮಿ. ಐರಾವತ ೨೦೧೫
ಗ೦ಗ ೨೦೧೫
ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ ೨೦೧೬
ಮದುವೆಯ ಮಮತೆಯ ಕರೆಯೋಲೆ ೨೦೧೬
ಅಕಿರ ೨೦೧೬
ಸಾಹೇಬ ೨೦೧೬
ಜಗ್ಗುದಾದ ೨೦೧೬
ರಾಜಸಿಂಹ ೨೦೧೮

Leave A Reply

Your email address will not be published.