ದೀಪ ಹಚ್ಚುವುದು, ಚಪ್ಪಾಳೆ ತಟ್ಟುವುದರಲ್ಲಿ ಏನು ಲಾಭ ? | ಸಂಪಾದಕೀಯ
ಭಾನುವಾರ ರಾತ್ರಿ 9 ಗಂಟೆಗೆ ಎಲ್ಲ ವಿದ್ಯುತ್ ದೀಪಗಳನ್ನು ಆರಿಸಿ 9 ನಿಮಿಷಗಳ ಕಾಲ ದೀಪ ಬೆಳಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿರುವ ಬಗ್ಗೆ ಹಲವರು ಹಲವು ರೀತಿಯ ಟೀಕೆಗಳನ್ನು ಮಾಡಿದ್ದಾರೆ. ಬಹುತೇಕ ಮಂದಿ ಮೋದಿ ಅವರ ಈ ದೀಪ ಹಚ್ಚುವುದು, ಚಪ್ಪಾಳೆ ತಟ್ಟುವುದನ್ನು ಸಮರ್ಥಿಸಿಕೊಂಡಿದ್ದಾರೆ. ಮೊದಲು ಟೀಕೆಗಳತ್ತ ಒಂದು ನೋಟ.
ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ.ಖಾದರ್, ಪ್ರಧಾನಿ ಕರೆಗೆ ಆಕ್ಷೇಪ ವ್ಯಕ್ತ ಪಡಿಸಿ, ಟ್ವೀಟ್ ಮಾಡಿದ್ದಾರೆ. ಅದು ಹೀಗಿದೆ:
“ಚಪ್ಪಾಳೆ ತಟ್ಟಾಯ್ತು, ಪಾತ್ರೆ ಬಡಿದಾಯ್ತು. ಈಗ ಕ್ಯಾಂಡಲ್ ಹಚ್ಚಬೇಕೇ ? ಪ್ರಧಾನಿಗಳೇ ಇದು ಯಾಕೋ ಸ್ವಲ್ಪ ಜಾಸ್ತಿ ಅನಿಸ್ತಾ ಇಲ್ವಾ? ಇದರ ಬದಲು ನಿಜವಾದ ಸಮಸ್ಯೆ ಬಗ್ಗೆ ಗಮನ ಹರಿಸಿ ಸರ್. ಜನಸಾಮಾನ್ಯರ ಹಸಿದ ಹೊಟ್ಟೆಗೆ ಅನ್ನ ನೀಡಿ”
“ಜನರನ್ನು ನೋವಿನಿಂದ ಹೊರತನ್ನಿ, ಆರ್ಥಿಕ ತಲ್ಲಣ ಸರಿಪಡಿಸಿ, ಕೋವಿಡ್ ಹೋರಾಟದಲ್ಲಿ ನಾವು ನಿಮ್ಮ ಜೊತೆ ಇದ್ದೀವಿ, ಎಲ್ಲವೂ ಸರಿ ಹೋದ ಮೇಲೆ ಒಟ್ಟಾಗಿ ದೀಪ ಹಚ್ಚೋದಲ್ಲ, ದೀಪಾವಳಿಯನ್ನೇ ಮಾಡೋಣ.
ಸಮಸ್ಯೆ ಬಗ್ಗೆ ಗಮನಹರಿಸೊಣ ಸರ್. ಏನಂತೀರಿ ? Be Practical Please” ಎಂದು ಖಾದರ್ ಟ್ವೀಟ್ ನಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧುರಿ ಅವರು, ಕೋವಿಡ್ -19 ವಿರುದ್ದದ ಹೋರಾಟಕ್ಕೂ, ಮನೆಗಳ ದೀಪಗಳನ್ನು 9 ನಿಮಿಷ ಆರಿಸುವುದಕ್ಕೂ ಏನು ಸಂಬಂಧವಿದೆ ? ಎಂದು ಅವರು ಪ್ರಶ್ನಿಸಿದ್ದಾರೆ. ನಾನು ಮನೆಯ ಲೈಟುಗಳನ್ನು ಆರಿಸುವುದಿಲ್ಲ,ಮೇಣದ ಬತ್ತಿಯನ್ನು ಬೆಳಗಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನಾನು ಈ ರೀತಿ ಮಾಡಿದರೆ ಕೆಲವರು ನನ್ನನ್ನು ದೇಶದ್ರೋಹಿ ಎಂದು ಕರೆಯುತ್ತಾರೆ, ಅದನ್ನು ಎದುರಿಸಲು ನಾನು ಸಿದ್ದವಾಗಿದ್ದೇನೆ ಎಂದು ಹೇಳಿದ್ದಾರೆ.
ನಮ್ಮ ಕರ್ನಾಟಕದ ಕರಿ ಮಣ್ಣಿನ ಮಗ ದೇವೇಗೌಡರ ಜೇಷ್ಠ ಪುತ್ರ ರೇವಣ್ಣ ಅವರಂತೂ, ” ಲಾಕ್ ಡೌನ್ ಆದುದರಿಂದ ಕ್ಯಾಂಡಲ್ ಸಿಗಬೇಕಲ್ಲ ” ಅಂತ ಲೇವಡಿ ಮಾಡಿದ್ದಾರೆ. ಅದಕ್ಕೆ ಬಿಜೆಪಿಯವರು ರೇವಣ್ಣ ಅವರ ಮನೆ ಬಾಗಿಲಿಗೆ ಕ್ಯಾಂಡಲ್ ಕಳಿಸಿ ಕೊಟ್ಟು ” ದಯವಿಟ್ಟು ಭಾನುವಾರ ರಾತ್ರಿ ಕ್ಯಾಂಡಲ್ ಬೆಳಗಿಸಿ, ಇಡೀ ದೇಶ ದೀಪ ಬೆಳಗಿಸಲಿಕ್ಕಿದೆ. ನೀವೂ ಬೆಳಗಿ ” ಎಂದು ರಿಕ್ವೆಸ್ಟ್ ಮಾಡಿಕೊಂಡಿದೆ.
ಎಲ್ಲಾ ಸರಿ, ಮಹಾಯುದ್ಧದೋಪಾದಿಯಲ್ಲಿ ಕೋರೋನಾ ವೈರಸ್ ನ ಮೇಲೆ ಕದನ ಹೂಡಬೇಕಾದದ್ದು ಅನಿವಾರ್ಯ. ಎರಡು ಮಾತಿಲ್ಲ.
ಆದರೆ ಇವತ್ತು ಒಂದನ್ನಂತೂ ನಾವು ನೆನಪಿನಲ್ಲಿಡಬೇಕು. ಕೊರೋನ ವೈರಸ್ ಗೆ ಮದ್ದಿಲ್ಲ. ಕೊರೋನ ವಿರುದ್ಧದ ಹೋರಾಟಕ್ಕೆ, ಕೋರೋನಾ ವಿರುದ್ಧ ಅನ್ವೇಷಿಸಲ್ಪಟ್ಟ ಒಂದೇ ಒಂದು ಖಚಿತ ಮದ್ದು ಅಂದರೆ ಸೋಶಿಯಲ್ ಡಿಸ್ಟೆನ್ಸ್ . ಕೇವಲ ಕಾನೂನಿನಿಂದ ನಾವು ಅದನ್ನು ಸಾಧಿಸಲು ಸಾಧ್ಯವಾ ? ಕಾನೂನು ಕಷ್ಟದಲ್ಲಿ ಸಾಧಿಸುವುದನ್ನು , ಕೆಟ್ಟದಾಗಿ ಪರ್ಫಾರ್ಮೆನ್ಸ್ ಕೊಡುವುದನ್ನು ಜನರ ಮನಸ್ಸು ಗೆಲ್ಲಿ, ಅವರ ಮನಸ್ಸನ್ನು ಓರಿಯೆಂಟೇಶನ್ ಮಾಡಿ ಅದ್ಭುತಗಳನ್ನು ಸಾಧಿಸಬಹುದು. ಪ್ರೀತಿಯಿಂದ ಗೆಲ್ಲದೇ ಇರುವುದು ಯಾವುದಿದೆ ?
ಇನ್ನೊಂದು ವಿಚಾರ ನೆನಪಿಡಿ. ಹಾಡು ಕೇಳಿದರೆ ನಿಮಗೆ ಅದನ್ನು ಗುನುಗಬೇಕೇನಿಸುತ್ತದಲ್ಲವೆ? ಎಲ್ಲೋ ಲಯಬದ್ಧ ಬಡಿತದ ವಾದ್ಯ ಕಿವಿಗೆ ಬಿದ್ದರೆ ಅದರ ಬೀಟ್ ಗೆ ನಿಮ್ಮ ಮನಸ್ಸು ಮತ್ತು ದೇಹ ಹೆಜ್ಜೆ ಹಾಕುತ್ತದೆಯಲ್ಲವೆ ? ಅದು ಯಾಕೆ ಹಾಗೆ ? ಯಾಕೆಂದರೆ, ನಾವು ಇರುವುದೇ ಹಾಗೆ. ಮನುಷ್ಯನ ದೇಹ ಮನ್ಯೂಫ್ಯಾಕ್ಚರ್ ಆಗಿರೋದೆ ಹಾಗೆ.
ಎರಡೂ ಲಯಕ್ಕೆ, ತಾಳಕ್ಕೆ ಭಾವನೆಗಳಿಗೆ ಸ್ಪಂದಿಸುವ ಗುಣವುಳ್ಳವು. ಅದೇ ಕಾರಣಕ್ಕೆ ಶಾಲೆಗಳಲ್ಲಿ ಚಪ್ಪಾಳೆ ಬಡಿಯುವುದು. ಒಳ್ಳೆಯ ಕೆಲಸ ಮಾಡಿದಾಗ, ಪ್ರೈಸು ಬಂದಾಗ ಚಪ್ಪಾಳೆ ತಟ್ಟುವುದು. ಅದು ಪರಸ್ಪರರನ್ನು ಹುರಿದುಂಬಿಸುವ ಕ್ರಿಯೆ. ಒಂದು ಚಪ್ಪಾಳೆಗೆ ಅಯಾಚಿತವಾಗಿ ಮತ್ತೊಬ್ಬರು ತನಗರಿವಿಲ್ಲದಂತೆಯೆ ಸ್ಪಂದಿಸುತ್ತಾರೆ. ಅದನ್ನೇ ಮೋದಿ ಅವರು ಮೊನ್ನೆ ದೇಶದ ಜನರ ಕೈಲಿ ಮಾಡಿಸಿದ್ದು. ಅದರ ಮುಂದುವರಿದ ಭಾಗವೇ ಇವತ್ತು ಮೋದಿಯವರು ದೇಶವನ್ನು ದೀಪದ, ಕ್ಯಾಂಡಲ್ ನ ಅಥವಾ ಟಾರ್ಚ್ ನ ಬೆಳಕಿನಲ್ಲಿ ಬೆಳಗಿಸಲು ಹೇಳಿರುವುದು. ಈ ಎರಡು ಕಾರ್ಯಗಳು ಭಿನ್ನವಲ್ಲ ; ಎರಡೂ ಒಂದೇ !
ಕೆಲವರು ದೀಪ ಹಚ್ಚುವ ಕಾರ್ಯವನ್ನು ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ನೋಡುತ್ತಾರೆ. ದೇವರು ದಿಂಡರು ಎಲ್ಲ ನಂಬದವರೂ ಕೂಡ ಬೆಂಕಿಯನ್ನು, ಜ್ವಾಲೆಯನ್ನು ದೀಪವನ್ನು ಅಥವಾ ಯಾವುದೇ ಬೆಂಕಿಯ ಮೂಲವನ್ನು ಮತ್ತು ಅದರ ಶಕ್ತಿಯನ್ನು ಒಪ್ಪಿಕೊಳ್ಳಲೇಬೇಕು. ಬೆಂಕಿ ಮಾತ್ರವೇ ಮನುಷ್ಯ ನಾಗರೀಕತೆ ಇಲ್ಲಿಯತನಕ ಸಾಗಿ ಬರಲು ಸಹಾಯ ಮಾಡಿದ್ದು. ಸುಮಾರು 4 ಲಕ್ಷ ವರ್ಷಗಳ ಹಿಂದೆ ಮನುಷ್ಯ ಬೆಂಕಿಯನ್ನು ತನ್ನ ಹತೋಟಿಯಲ್ಲಿ ಬಳಸಲು ಉಪಯೋಗಿಸಿದ್ದು. ಅಂದು ಪ್ರಾರಂಭವಾದ ನಾಗರಿಕತೆ ಇವತ್ತಿನವರೆಗೆ ದಾಪುಗಾಲಿಟ್ಟು ನಡೆದಿದೆ. ಇಷ್ಟು ಲಕ್ಷ ವರ್ಷದ ಮನುಷ್ಯನ ಉಳಿವಿನ ಪ್ರಯತ್ನ ಕೋರೋನಾ ಯಕಶ್ಚಿತ್ ಕ್ರಿಮಿಯಿಂದ ಕಮರಿ ಹೋಗದೆ ಇರಲಿ.
ತನ್ನ ದೇಶದ ಪ್ರಜೆಗಳನ್ನು ಒಮ್ಮುಖವಾಗಿ ಕೋರೋನಾದ ವಿರುದ್ಧ ಹೋರಾಡಲು ಪ್ರೇರೇಪಿಸುವ ಕಾರ್ಯ ಮತ್ತು ಅವರನ್ನು ಮಾನಸಿಕವಾಗಿ ತಯಾರಿ ಮಾಡಬೇಕಾದದ್ದು ನಾಯಕನ ಕರ್ತವ್ಯ. ನಮ್ಮ ಪ್ರಧಾನಿ ಶ್ರಿ ನರೇಂದ್ರ ಮೋದಿಯವರು ಅದನ್ನು ನೆರವೇರಿಸಿದ್ದಾರೆ. ಅವರನ್ನು ಬೆಂಬಲಿಸಿ ಇವತ್ತು ಇಡೀ ಭರತ ಖಂಡವೇ ಉಜ್ವಲವಾಗಿ ದೀಪ ಬೆಳಗಲಿದೆ. ಆ ದೀಪದ ಪ್ರಭೆ ನಮ್ಮ ದೇಶವನ್ನು ದಾಟಿ, ಇಡೀ ಪ್ರಪಂಚವನ್ನೇ ಅತಿಕ್ರಮಿಸಿ, ಕೋರೋನಾ ವಿರುದ್ಧದ ಯುದ್ಧಕ್ಕೆ ಸ್ಪೂರ್ತಿ ತುಂಬಲಿದೆ. ಕ್ಷಣಗಣನೆ ಆರಂಭವಾಗಿದೆ.
ಸುದರ್ಶನ್ ಬಿ. ಪ್ರವೀಣ್, ಬೆಳಾಲು