ಮದ್ಯದ ಮರ್ಲರು ಮದ್ಯದಂಗಡಿ ದೋಚಿದರು | ಕಳ್ಳರು ತಮ್ಮ ಬ್ರಾಂಡ್ ಬಿಟ್ಟು ದುಡ್ಡು ಕೂಡಾ ಮುಟ್ಟಲಿಲ್ಲ

ಕೊರೋನ ವೈರಸ್ ನ ವಿರುದ್ಧದ ಹೋರಾಟದಲ್ಲಿ ಇಡೀ ದೇಶಕ್ಕೆ ದೇಶವೇ ಲಾಕ್ ಔಟ್ ಆಗಿದ್ದಾಗ ಮದ್ಯದಂಗಡಿ ಬಂದ್ ಆಗದೇ ಇರುತ್ತಾ? ಆದರೂ ಕುಡುಕರು ಅದನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ ಎನಿಸುತ್ತದೆ. 

ಕೆಲವು ಕಡೆ ಮದ್ಯವಿಲ್ಲದೆ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಂದು ಕಡೆ ಮದ್ಯಕ್ಕೆ ಒಗ್ಗಿಕೊಂಡ ದೇಹ ಹೀಗೆ ದಿನಗಟ್ಟಲೆ ಮದ್ಯವಿಲ್ಲದೆ ಸಡನ್ನಾಗಿ ದೈಹಿಕ ಆಘಾತಕ್ಕೊಳಗಾಗಿ ವ್ಯಕ್ತಿಯೊಬ್ಬರು ಮರಣಿಸಿದ್ದಾರೆ. ಕೆಲವು ಅದೃಷ್ಟವಂತರಿಗೆ ಊರಲ್ಲಿ ಕದ್ದುಮುಚ್ಚಿ ಮದ್ಯ ಮಾರುವ ಜನರು ಮಾಲು ಸಪ್ಲೈ ಮಾಡಿದ್ದಾರೆ.

ಇವೆಲ್ಲದರ ನಡುವೆ ಸ್ವಲ್ಪ ಧೈರ್ಯ ಮತ್ತು ಖತರ್ನಾಕ್ ತಲೆ ಇದ್ದವರು ಮದ್ಯ ಕಳ್ಳತನಕ್ಕೆ ಮುಂದಾಗಿದ್ದಾರೆ. ಅಂತಹ ಘಟನೆ ಗದಗ ತಾಲೂಕಿನ ಕಳಸಾಪೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಅಲ್ಲಿನ ನಾಗಾವಿ ರಸ್ತೆಯಲ್ಲಿರುವ ಎಂಎಸ್‍ಐಎಲ್ ಮದ್ಯದಂಗಡಿಯ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ವಿಚಿತ್ರ ಎಂದರೆ ಈ ಮದ್ಯಾತ್ಮರು ( ಪುಣ್ಯಾತ್ಮರು ಇದ್ದ ಹಾಗೆ ) ತಮಗೆ ಇಷ್ಟವಾಗಿರುವ ಬೀರು ಮತ್ತು ವಿಸ್ಕಿಬಾಟಲಿಗಳನ್ನು ಸೇರಿದಂತೆ ಕೆಲವು ಕಡಿಮೆ ಬೆಲೆಯ ಮದ್ಯವನ್ನು ಮಾತ್ರ ಕಳ್ಳತನ ಮಾಡಿದ್ದಾರೆ. ಬಹುಶಃ ಅವರು ದಿನನಿತ್ಯ ಬಳಸುವ ಬ್ರ್ಯಾಂಡ್ ಅನ್ನು ಮಾತ್ರ ತೆಗೆದುಕೊಂಡು ಹೋಗಿರಬೇಕು ! ದುಬಾರಿ ಬೆಲೆಯ ಮದ್ಯ ಅಂಗಡಿಯ ಕಪಾಟಿನಲ್ಲಿ ಹಲವು ಆಕರ್ಷಕ ಶೇಪಿನ ಬಾಟಲ್ ಗಳಲ್ಲಿ ಮಿರ ಮಿರ ಮಿಂಚತ್ತಿದ್ದರೂ ಅವರು ಯಾವುದನ್ನೂ ಮುಟ್ಟಿಲ್ಲ. ಕಡಿಮೆ ಬೆಲೆಯ ಮದ್ಯವನ್ನು ಮಾತ್ರ ಹೊತ್ತೊಯ್ದಿದ್ದಾರೆ.

ಅದೇ ಅಲ್ಲದೇ ಅಂಗಡಿಯ ಕೌಂಟರ್ ಡ್ರಾನಲ್ಲಿ 1.5 ಲಕ್ಷ ರೂ. ಕ್ಯಾಶ್ ಇದ್ದರೂ  ಅದರತ್ತಲೂ ಅವರು ತಿರುಗಿ ಕೂಡ ನೋಡಿಲ್ಲ. ಅಷ್ಟು ನಿಯತ್ತಿನ, ಶ್ರದ್ಧೆಯ ಕಳ್ಳರು ! ಇದರಿಂದಲೇ ಗೊತ್ತಾಗುತ್ತದೆ : ಫಿಡ್ಕ್ ಇಲ್ಲದೆ ಅವರು ಯಾವ ರೆನ್ಬರಗೆಟ್ಟಿರಬಹುದು ಎಂದು !
ಇಷ್ಟು ದಿನ ಎಣ್ಣೆ ಸಿಗದೇ ಕಂಗಾಲಾದ ಪ್ರೊಫೆಷನಲ್ ಕುಡುಕರೇ ಈ ಕೃತ್ಯವೆಸೆಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಡ್ರಿಂಕ್ಸ್ ಇಲ್ಲದಕ್ಕಿಂತ ಬೇರೆ ಯಾವುದು ದೊಡ್ಡ ಶಿಕ್ಷೆ ಇದೆ ?
ಡಿವೈಎಸ್‍ಪಿ ಎಸ್.ಕೆ ಪ್ರಹ್ಲಾದ್, ಗ್ರಾಮೀಣ ಪಿಎಸ್‍ಐ ಮಲ್ಲಿಕಾರ್ಜುನ್ ಕುಲಕರ್ಣಿ ಮತ್ತು ಇತರೆ ಪೊಲೀಸ್ ಸಿಬ್ಬಂದಿ ಹಾಗೂ ಅಬಕಾರಿ ಇಲಾಖೆ ಅಧಿಕಾರಿ ಸೈನಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿ ಕ್ಯಾಮೆರಾ ದೃಶ್ಯಾವಳಿ ಮೂಲಕ ಕಳ್ಳರಿಗೆ ಬಲೆಬೀಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.