ಸವಣೂರು | ಹೋಂ ಕ್ವಾರಂಟೈನ್ ಸೂಚನೆ ದಿಕ್ಕರಿಸಿದವನ ಮೇಲೆ ಕೇಸು ದಾಖಲು

ಕಡಬ: ಹೊರ ರಾಜ್ಯ ದಿಂದ ಬಂದು ಹೋಂ ಕ್ವಾರಂಟೈನ್ ಗೆ ಸೂಚಿಸಿದ ವ್ಯಕ್ತಿಯೋರ್ವರು ಮನೆಯಲ್ಲಿ ಇರದೇ ಇರುವುದು ಕೊರೊನಾ ತಡೆ ತಂಡದ ಗಮನಕ್ಕೆ ಬಂದ ಘಟನೆ ಸವಣೂರು ಗ್ರಾ.ಪಂ.ವ್ಯಾಪ್ತಿಯ ಸವಣೂರು ಗ್ರಾಮದ ಆರೇಲ್ತಡಿಯಲ್ಲಿ ನಡೆದಿತ್ತು.

ಇದೀಗ ಆ ವ್ಯಕ್ತಿಯ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ವ್ಯಕ್ತಿಯೋರ್ವರು ಕೆಲದಿನಗಳ ಹಿಂದೆ ವಿದೇಶದಿಂದ ಆಗಮಿಸಿದ್ದು ,14ದಿನಗಳ ಕಾಲ‌ ಹೋಂ ಕ್ವಾರಂಟೈನ್ ನಲ್ಲಿರುವಂತೆ ಅವರಿಗೆ ಸೂಚಿಸಲಾಗಿತ್ತು.ಅಲ್ಲದೆ ಜಿಲ್ಲಾಡಳಿತ ಕೂಡ ಪಟ್ಟಿ ಬಿಡುಗಡೆ ಮಾಡಿತ್ತು. ಅದರಂತೆ ಮಾ.30ರಂದು ಆರೋಗ್ಯ ಇಲಾಖೆ,ಕಂದಾಯ ಇಲಾಖೆ,ಗ್ರಾ.ಪಂ.ನ ತಂಡ ಬೇಟಿ ನೀಡಿದ ವೇಳೆ ಆ ವ್ಯಕ್ತಿ ಮನೆಯಲ್ಲಿ ಇರದೇ ಇರುವುದು ಗೊತ್ತಾಗಿದೆ.

ಈ ಕುರಿತು ಮನೆಯವರಲ್ಲಿ ವಿಚಾರಿಸಿದಾಗ ಹೊರಹೋಗಿರುವ ಬಗ್ಗೆ ಮಾಹಿತಿ ನೀಡಿದ್ದು,ಬಳಿಕ ಆ ವ್ಯಕ್ತಿಯನ್ನು ಮನೆಗೆ ಬರುವಂತೆ ಸೂಚಿಸಲಾಗಿ,ಆ ವ್ಯಕ್ತಿಗೆ ಮನೆಯಲ್ಲಿರುವಂತೆ ತಿಳಿಸಲಾಯಿತು. ಈ ವೇಳೆ ಆ ವ್ಯಕ್ತಿ ಸಕಾರಾತ್ಮಕವಾಗಿ ಸ್ಪಂದಿಸದೇ ಉಡಾಫೆ ವರ್ತನೆ ತೋರಿದರೆನ್ನಲಾಗಿದೆ.

ಈ ಕಾರಣದಿಂದ ಸರಕಾರದ ಸೂಚನೆ ದಿಕ್ಕರಿಸಿದಕ್ಕಾಗಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.