SSLC ಪರೀಕ್ಷೆ, ಶಾಲಾ ದಾಖಲಾತಿ,ಇಲಾಖಾ ಸೇವೆಯ ಪ್ರಕ್ರಿಯೆಗಳ ವೇಳಾಪಟ್ಟಿ ಎಪ್ರಿಲ್ 20ರ ಬಳಿಕ ಪ್ರಕಟ
ಬೆಂಗಳೂರು: ಕೋವಿಡ್ 19 ವೈರಸ್ ವ್ಯಾಪಿಸುತ್ತಿರುವ ಕಾರಣದಿಂದ ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯು ತನ್ನ ಈ ಹಿಂದಿನ ಸುತ್ತೋಲೆಯಲ್ಲಿ ಪ್ರಕಟಿಸಿದ್ದಂತೆ 7 ರಿಂದ 10ನೇ ತರಗತಿಯವರೆಗಿನ ಪರೀಕ್ಷೆಯನ್ನು ಮಾರ್ಚ್ 31ರವರೆಗೆ ಮುಂದೂಡಿ ಆದೇಶ ಹೊರಡಿಸಲಾಗಿತ್ತು.
ಆದರೆ ಇದೀಗ ಹೊಸ ಸುತ್ತೋಲೆ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಕೋವಿಡ್ 19 ವೈರಸ್ ಪ್ರಕರಣಗಳು ರಾಜ್ಯದಲ್ಲಿ ಮುಂದುವರಿಯುತ್ತಿರುವುದರಿಂದ 21 ದಿನಗಳ ಕಾಲ ರಾಷ್ಟ್ರವನ್ನೇ ಲಾಕ್ ಡೌನ್ ಮಾಡಲು ಪ್ರಧಾನ ಮಂತ್ರಿಗಳು ಸೂಚಿಸಿರುವ ಹಿನ್ನಲೆಯಲ್ಲಿ 7 ರಿಂದ 9ನೇ ತರಗತಿವರೆಗಿನ ಪರೀಕ್ಷೆಗಳನ್ನು, ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು, ಆರ್.ಟಿ.ಇ. ಅಡಿಯಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆಗಳನ್ನು ಹಾಗೂ 2020-21ನೇ ಸಾಲಿನ ಶಾಲಾ ದಾಖಲಾತಿ ಪ್ರಕ್ರಿಯೆಗಳನ್ನು ಮತ್ತು ಇವುಗಳಿಗೆ ಸಂಬಂಧಿಸಿದ ಪರಿಷ್ಕೃತ ವೇಳಾಪಟ್ಟಿಗಳನ್ನು ಎಪ್ರಿಲ್ 20ರ ನಂತರ ಪ್ರಕಟಿಸಲಾಗುವುದು ಎಂದು ತಿಳಿಸಿದೆ.
ಈ ವಿಷಯವನ್ನು ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಯ ವಿದ್ಯಾರ್ಥಿಗಳ ಪೋಷಕರಿಗೆ ವಾಟ್ಸ್ಯಾಪ್/ಎಸ್.ಎಂ.ಎಸ್./ಇ-ಮೇಲ್ ಅಥವಾ ಇನ್ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ತಿಳಿಸುವಂತೆ ರಾಜ್ಯದ ಶಾಲೆಗಳಲ್ಲಿನ ಮುಖ್ಯ ಶಿಕ್ಷಕರು ಅಥವಾ ಶಾಲಾ ಆಡಳಿತ ಮಂಡಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ನಿರ್ದೇಶಿಸಿದ್ದಾರೆ.