ಕರ್ನಾಟಕದ ಬುದ್ದಿವಂತ ಸರಕಾರಕ್ಕೆ ಕೊರೋನಾ ವಿಷಯದಲ್ಲಿ ಜನಸಾಮಾನ್ಯರಿಂದ ಒಂದು ಪತ್ರ
ಮಾನ್ಯರೇ, ಜನಸಾಮಾನ್ಯರಲ್ಲಿ ಇರುವ ಕೆಲವೊಂದು ಸಲಹೆಗಳನ್ನು ಸರಕಾರಕ್ಕೆ ಈ ಮೂಲಕ ನೀಡುತ್ತಿದ್ದೇವೆ. ಇದರಲ್ಲಿ ಲಾಜಿಕ್ ಅಂತ ಇದ್ದರೆ ಒಪ್ಪಿಕೊಳ್ಳಿ. ಇದರಲ್ಲಿ ಹುರುಳಿಲ್ಲದೆ ಹೋದರೆ, ನಿಮ್ಮ ಸಮಯವನ್ನು ವ್ಯಯಮಾಡಿದ್ದಕ್ಕೆ ವೀ ಆರ್ ಸಾರೀ !
ಹೋಂ ಕ್ವಾರಂಟೈನ್ ವ್ಯಕ್ತಿಗಳು ಈಗ ಊರಿಡೀ ತಿರುಗಾಡುತ್ತಿದ್ದಾರೆ. ಎಷ್ಟೇ ಹೇಳಿದರೂ ಅವರು ಕೇಳುತ್ತಿಲ್ಲ. ನಿನ್ನೆ ಕೂಡಾ ಕೆಲವೆಡೆ ಭೇಟಿಯ ವೇಳೆ ಮನೆಯಲ್ಲಿ ಇಲ್ಲದ್ದು ಕಂಡುಬಂದಿದೆ. ಸರಕಾರ ಅಮಾಯಕರಾದ ಜನರನ್ನು ಮನೆಯಲ್ಲಿ ಕೂಡಿ ಹಾಕಿ ಲಾಕ್ ಡೌನ್ ಅನ್ನುತ್ತದೆ. ಈ ಸೋಂಕಿತರಾಗಿರಬಹುದಾದ ವ್ಯಕ್ತಿಗಳನ್ನು ಬೀದಿಗೆ ಹೋಗಲು ಅವಕಾಶ ಕೊಡುತ್ತಿದೆ. ಇದರ ಬಗ್ಗೆ ಜನಸಾಮಾನ್ಯರು ತೀವ್ರ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಲಾಕ್ ಡೌನ್ ಪೂರ್ಣ ಪಾಲನೆಯಾಗದೆ ಇರುವುದಕ್ಕೆ ಇದು ಕೂಡಾ ಒಂದು ಪ್ರಮುಖ ಕಾರಣ.
ಎಲ್ಲ ಜನಸಮುದಾಯದ ಅಭಿಪ್ರಾಯಕ್ಕೆ ಸರಕಾರ ಬೆಲೆ ಕೊಡಬೇಕು. ಆಗ ಮಾತ್ರ ಸರಕಾರದ ನಿರ್ಣಯಕ್ಕೆ ಪೂರ್ಣ ಬೆಲೆ ಜನರು ಕೊಡುತ್ತಾರೆ. ವಿದೇಶದಿಂದ ಬಂದಿರುವಂತಹ ಜನರನ್ನು ಬಂಧಿಸಿ ಈ ಮೊದಲೇ ಸರಕಾರ ಇಡಬೇಕಿತ್ತು. ಅವರನ್ನು ಅವರವರ ಮನೆಗೆ ಹೋಗಿ ಸೋಂಕು ಹರಡಲು ಸಹಾಯ ಮಾಡಿದ್ದೆ ಸರಕಾರದ ನಿರ್ಧಾರ. ನಮ್ಮ ಕಣ್ಣ ಮುಂದೆ ಚೀನಾದ ಅನುಭವ ಇತ್ತು. ಆದರೂ ನಾವು ಪಾಠ ಕಲಿತಿಲ್ಲ. ಅದಿರಲಿ. ತಪ್ಪಿನ ಬಗ್ಗೆ ಕೆದಕುವುದು ಬೇಡ. ಈಗ ಎರಡನೆಯ ತಪ್ಪು ಆಗಬಾರದು.
1) ಸೋಂಕಿತರಿರಬಹುದೆಂದು ನಾವು ಭಾವಿಸುವ, ವ್ಯಕ್ತಿಗಳನ್ನು ( ಹೋಂ ಕ್ವಾರಂಟೈನ್ ) ವ್ಯಕ್ತಿಗಳನ್ನು ಮನೆಯಲ್ಲಿ ಇರಲು ಹೇಳುವ, ಬೇಡಿಕೊಳ್ಳುವ ಅಡ್ಮಿನಿಸ್ಟ್ರೇಟಿವ್ ಕಂಟ್ರೋಲ್ ವರ್ಕ್ ಆಗುವುದಿಲ್ಲ. ಒಬ್ಬ ಹೋಂ ಕ್ವಾರಂಟೈನ್ ವ್ಯಕ್ತಿಯ ಹಿಂದೆ ಈಗ ಎಷ್ಟು ಸರಕಾರದ ವೈದ್ಯರು, ನರ್ಸುಗಳು, ಪಂಚಾಯತ್ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಫಾಲೋ ಅಪ್ ಮಾಡುತ್ತಿಲ್ಲ? ಇದೆಲ್ಲ ಯಾಕೆ ಬೇಕು?
2) ಹೋಂ ಕ್ವಾರಂಟೈನ್ ವ್ಯಕ್ತಿಗಳು ಸಹಕರಿಸುತ್ತಿಲ್ಲ. ಗೃಹ ಭೇಟಿಗೆ ಹೋದ ಸಂದರ್ಭದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಆಶಾ ಕಾರ್ಯಕರ್ತೆಯರು ಕನಿಷ್ಠ ಸಂಬಳದ ಮೇಲೆ ಕೆಲಸಮಾಡುವ ಬಡವರಿಗೆ ಬಯ್ಯುವುದು ನಡೆಯುತ್ತಿದೆ. ಸರಕಾರ ಯಾಕೆ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿಲ್ಲ ? ಆಶಾ ಕಾರ್ಯಕರ್ತೆ ಮತ್ತು ಇತರ ಆರೋಗ್ಯ ಇಲಾಖೆಯ ಮತ್ತಿತರ ಸರಕಾರದ ಸಣ್ಣ ನೌಕರರಿಗೂ ಆತ್ಮಗೌರವದಿಂದ ಬದುಕಲು, ಕೆಲಸಮಾಡಲು ಸರಕಾರ ಅವಕಾಶ ಕಲ್ಪಿಸಬೇಕು.
3) ಹೋಂ ಕ್ವಾರಂಟೈನ್ ನಲ್ಲಿ ಇದ್ದವರು ಮಾತು ಕೇಳದೆ ಮನೆಬಿಟ್ಟು ತೆರಳಿದರೆ ಅವರ ಮೇಲೆ ಕೇಸು ಹಾಕುವುದು ಸರಕಾರದ ಈಗಿನ ಕ್ರಮ ಹಾಸ್ಯಾಸ್ಪದ. ಅವರ ಮೇಲೆ ಕೇಸು ಹಾಕುವುದರಿಂದ ಕೊರೋನಾ ಸೋಂಕು ಆಗುವುದು ನಿಲ್ಲುತ್ತದೆಯಾ ? ನಮ್ಮ ಇವತ್ತಿನ ಅಗತ್ಯ ಸೋಂಕು ಹರಡುವುದನ್ನು ತಡೆಯುವುದು. ಅದು ಬಿಟ್ಟು ಅವರಿಗೆ ಗಲ್ಲು ಶಿಕ್ಷೆ ಬೇಕಾದರೆ ಕೊಡಿ, ಅದರಿಂದ ನಮ್ಮ ಮೂಲ ಉದ್ದೇಶ ನೆರವೇರುವುದಿಲ್ಲವಲ್ಲ ? ಕೊರೋನಾ ಅದರಿಂದ ಸಾರಯುವುದಿಲ್ಲವಲ್ಲ ?
4 ) ಒಬ್ಬಿಬ್ಬರಿಂದಾಗಿ ಇಡೀ ಊರಿಗೆ ದಿಗ್ಬಂಧನ ಹಾಕುವುದು ಎಷ್ಟು ಸರಿ ?
5 ) ಆಶಾ ಕಾರ್ಯಕರ್ತೆ ಮತ್ತಿತರ ಕೆಳವರ್ಗದ ಆರೋಗ್ಯ ಮತ್ತು ಇತರ ಸರಕಾರೀ ಸೇವೆಯಲ್ಲಿರುವ ಕಾರ್ಯಕರ್ತರಿಗೆ ವಾಹನದ ವ್ಯವಸ್ಥೆ ಇಲ್ಲ.
6 ) ಆಶಾ ಕಾರ್ಯಕರ್ತೆ ಮತ್ತಿತರ ಕೆಳವರ್ಗದ ಆರೋಗ್ಯ ಮತ್ತು ಇತರ ಸರಕಾರೀ ಸೇವೆಯಲ್ಲಿರುವ ಕಾರ್ಯಕರ್ತರಿಗೆ ಶಂಕಿತ ಮತ್ತು ಅವರ ಕುಟುಂಬದವರು ನಿಂದಿಸಿದರೆ ಅವರ ಮೇಲೆ ಬೇರೆಲ್ಲ ಸರಕಾರೀ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದಾಗ ಹೂಡುವ ಮೊಕದ್ದಮೆ ಹಾಕಬೇಕು. ಸಮಾನ ಸೀರಿಯಸ್ ಆಗಿ ಪರಿಗಣಿಸಬೇಕು.
7 ) ಜನರು ಬೀದಿಗೆ ಬಂದರೆ ಬೆತ್ತ ಬೀಸುವ ಪೊಲೀಸರು, ಅದೇ ಶಂಕಿತ ಬೀದಿಯಲ್ಲಿ ಸಿಕ್ಕಿದರೆ, ರಾಜಾತಿಥ್ಯ ನೀಡಿ ಗಾಡಿಯಲ್ಲಿ ಕುಳ್ಳಿರಿಸಿಕೊಂಡು ಮನೆಯವರೆಗೆ ತಂದು ಬಿಡುತ್ತಾರೆ. ಇದರಿಂದ ಸರಕಾರಕ್ಕೆ ಸ್ವಲ್ಪವೂ ಅವಮಾನ ಆಗುವುದಿಲ್ಲವಾ ?
8 ) ಶಂಕಿತರನ್ನು ತನ್ನ ಸ್ವಂತ ಮಕ್ಕಳಂತೆ ನೋಡುವ ಸರಕಾರ ತನ್ನ ಪ್ರಜೆಗಳನ್ನು ಯಾಕೆ ಮಲತಾಯಿಯಂತೆ ನೋಡುತ್ತಿದೆ ? ಯಾಕೆ ಒಬ್ಬಿಬ್ಬರಿಗಾಗಿ ಎಲ್ಲರಿಗೂ ಶಿಕ್ಷೆ ನೀಡುತ್ತಿದೆ ?
ಇದಕ್ಕೆಲ್ಲ ಏನು ಪರಿಹಾರ ?
1 ) ತಕ್ಷಣ ಈ ಹೋಂ ಕ್ವಾರಂಟೈನ್ ಅವರನ್ನು, ಅವರೆಷ್ಟೇ ಲಕ್ಷ ಸಂಖ್ಯೆಯಲ್ಲಿರಲಿ, ಅವರನ್ನು ಈ ಸಮಾಜದಿಂದ ಮತ್ತು ಅವರ ಕುಟುಂಬದಿಂದ ಪ್ರತ್ಯೇಕಿಸಿ. ಎಷ್ಟೇ ಖರ್ಚಾಗಲಿ, ಮುಂದಿನ 14 ದಿನಗಳಲ್ಲಿ ಫಲಿತಾಂಶವಾದರೂ ಬರುತ್ತದೆ.
2) ಪ್ರತಿ ಊರು ಊರಿಗೆ ಈಗ ದೊಡ್ಡ ದೊಡ್ಡ ಹಲವು ರೂಮುಗಳಿರುವ ಭವನಗಳಿವೆ. ಸರಕಾರೀ ಕಟ್ಟಡಗಳಿವೆ. ಶಾಲಾ ಕಾಲೇಜುಗಳಿವೆ. ಅವುಗಳಲ್ಲಿ ಇಂತಹಾ ಹೋಂ ಕ್ವಾರಂಟೈನ್ ವ್ಯಕ್ತಿಗಳನ್ನು ಕಟ್ಟಪ್ಪಣೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ಇಡಿ.
3 ) ಅಥವಾ ಜೈಲಿಗೆ ಹಾಕಿ, ಅಥವಾ ನಿಮಗೆ ಗೊತ್ತಿರುವ ಒಂದು ಊರು ಖಾಲಿಮಾಡಿಸಿ ಅಲ್ಲಿ ತುಂಬಿರಿ. ಆದರೆ, ಅವರು ಯಾವ ಕಾರಣಕ್ಕೂ ಅವರ ಮನೆಯಲ್ಲಿ ಮತ್ತು ಜನರ ಜತೆ ಇರಬಾರದು.
4 ) ಈಗಾಗಲೇ ಮಾತು ಕೇಳದೆ ಇದ್ದ ಶಂಕಿತ ಒಂದೊಮ್ಮೆ ಸೋಂಕು ದೃಢಪಟ್ಟರೆ, ಆತನಿಗೆ ಸರಕಾರದ ಖರ್ಚಿನಲ್ಲಿ ಟ್ರೀಟ್ಮೆಂಟ್ ಮಾಡಕೂಡದು. ಅಷ್ಟೇ ಅಲ್ಲ, ಆತನ ಕುಟುಂಬದವರೂ ತಮ್ಮತಮ್ಮ ಖರ್ಚಿನಲ್ಲಿ ಚಿಕಿತ್ಸೆ ಮಾಡಿಕೊಳ್ಳಲಿ.
ಸರಕಾರ ಸರಿಯಾದ ಸಮಯದಲ್ಲಿ ಖಚಿತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಜನಸಾಮಾನ್ಯರ ಮನಸ್ಥಿತಿಗೆ ವಿರುದ್ಧವಾಗಿ ಕೆಲಸ ಮಾಡಬೇಡಿ. ಒಬ್ಬಿರಿಂದಾಗಿ ಸಮುದಾಯದ ವಿರೋಧ ಕಟ್ಟಿಕೊಳ್ಲಬೇಡಿ. ತಕ್ಷಣ ಸ್ಪಂದಿಸಿ, ಹೋಂ ಕ್ವಾರಂಟೈನ್ ವ್ಯಕ್ತಿಗಳನ್ನು ಕಡ್ಡಾಯವಾದ ಗೃಹಬಂಧನದಲ್ಲಿಡಿ. ರಾಜ್ಯಕ್ಕೆ ಮತ್ತು ದೇಶಕ್ಕೆ ಒಳ್ಳೆಯದಾಗುತ್ತದೆ.
ಇತೀ ತಮ್ಮ ವಿಧೇಯ ಜನತೆ.