ಗುರುಗಳನ್ನು ಗೌರವಿಸೋಣ | ನಮಾಮಿ ಗುರು

” ಗುರುಬ್ರಹ್ಮ ಗುರುವಿಷ್ಣು ಗುರದೇವೋ ಮಹೇಶ್ವರಾ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ ” ಎಂಬ ಸಂಸ್ಕೃತ ವಾಕ್ಯದ ಮಾತುಗಳು ಎಷ್ಟೊಂದು ಅಥ೯ಗಬಿ೯ತವಾಗಿದೆ ಎಂದರೆ, ಆ ವಾಕ್ಯವನ್ನು ವಿವರಿಸಲು ಬೇರಾವ ಪದಗಳ ಅವಶ್ಯಕತೆಯೂ ಬೇಕಾಗಿಲ್ಲ. ದೇವಾನುದೇವತೆಗಳೂ ಸಹ ಗುರುವಿಗೆ ಗೌರವವನ್ನು ಕೊಡುತ್ತಾರೆ ಎಂದರೆ, ಗುರುವಿನ ಮಹಿಮೆ ಅಗಾಧವಾದುದೇ ಸರಿ. ಗುರುವಿಗೆ ಸರಿಸಮಾನವಾದ ಸ್ಥಾನ ಯಾವುದೂ ಇಲ್ಲ. ಗುರುವಿನ ಸ್ಥಾನವೇ ಅತ್ಯಂತ ಶ್ರೇಷ್ಠ ಸ್ಥಾನ.

ಭಾರತ ದೇಶದಲ್ಲಿ ಗುರುವನ್ನು ದೇವರೆಂದು ಪೂಜಿಸುವುದು ಸಹ ಒಂದು ಭವ್ಯವಾದ ಸಂಸ್ಕೃತಿ. ಒಬ್ಬ ಗುರುವಿನಿಂದ ಮಾತ್ರವೇ ದೇಶಕ್ಕೆ, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡಲು ಸಾಧ್ಯ. ಪ್ರತಿಯೊಂದು ಮಗುವಿಗೆ ತಾಯಿ ಹೇಗೆ ಮೊದಲ ಗುರುವಾಗಿ ಮಗುವಿನ ಸವ೯ತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತಾಳೋ ಹಾಗೆಯೇ ಒಬ್ಬ ಗುರು ಸಹ ಮಗುವಿನ ಸಭ್ಯ ವ್ಯಕ್ತಿತ್ವದ ಬೆಳವಣಿಗೆಗೆ, ಪ್ರಜ್ಞಾವಂತ ಉತ್ತಮ ನಾಗರಿಕರನನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.

ಇಂದಿನ ಪ್ರತಿಯೊಬ್ಬ. ವಿದ್ಯಾರ್ಥಿಯೂ ಗುರುವಿನ ಮಾರ್ಗದರ್ಶನವನ್ನು ಪಡೆದು ಉತ್ತಮ ದಾರಿಯಲ್ಲಿ ನಡೆಯಬೇಕಾಗಿದೆ. ಗುರುನಿಂದನೆ ದೇವನಿಂದನೆಗೆ ಸಮ. ಗುರುವನ್ನು ಯಾರು ನಿಂದಿಸುತ್ತಾರೋ ಅವರು ದೇವನಿಂದನೆ ಮಾಡಿದ್ದಾರೆ ಎಂಬುದೇ ನಿಜವಾದ ಅರ್ಥ. ಗುರುನಿಂದನೆ ಮಹಾಪಾಪ. ಇಂದು ಭಾರತ ದೇಶದ ಸಂಸ್ಕೃತಿ ವಿದೇಶಗಳಿಗೂ ಪಸರಿಸುತ್ತಿದೆ ಎಂದಾದರೆ, ಅದರ ಮೂಲ ಗುರು. ಯಾಕೆಂದರೆ, ಸಂಸ್ಕೃತಿಯನ್ನು ಕಲಿಸಲು ಗುರುವಿನಿಂದ ಮಾತ್ರವೇ ಸಾಧ್ಯ ‌ ಯಾವಾಗ ಗುರು ವಿದ್ಯಾರ್ಥಿಗಳನ್ನು ಒಬ್ಬ ಪ್ರಜ್ಞಾವಂತ ನಾಗರಿಕರನ್ನಾಗಿಸುತ್ತಾರೋ ಅಂದೇ ದೇಶ ಸುಸಂಸ್ಕೃತಿಯಿಂದ ಬೆಳೆಯುತ್ತಿದೆ ಎಂದು ಗುರುತಿಸಬಹುದು.

ಗುರುಗಳು ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರಜ್ಞಾವಂತ, ಸುಸಂಸ್ಕೃತ ನಾಗರಿಕರಾಗಬೇಕೆಂದು ಶ್ರಮ ಪಡುತ್ತಾರೆಯೇ ಹೊರತು ಎಂದೂ ಸಹ ಅದಕ್ಕೆ ವಿರುದ್ಧವಾಗಿ ಯೋಚಿಸುವುದೂ ಇಲ್ಲ. ವಿದ್ಯಾರ್ಥಿಗಳಿಗೆ ಬುದ್ಧಿ ಹೇಳುವುದು ಕೋಪದ ಮುಖದಲ್ಲಾದರೂ ಮನಸ್ಸಿನಲ್ಲಿ ನನ್ನ ವಿದ್ಯಾರ್ಥಿ ಎಂಬ ಅಗಾಧವಾದ ಪ್ರೀತಿಯನ್ನು ಇಟ್ಟುಕೊಂಡಿರುತ್ತಾರೆ. ಗುರುಗಳು ಹೇಳುವ ಪ್ರತಿಯೊಂದು ಮಾತೂ ಸಹ ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದಲೇ ಆಗಿರುತ್ತದೆ. ತಪ್ಪು ದಾರಿಯಲ್ಲಿ ಸಾಗುವ ವಿದ್ಯಾರ್ಥಿಯನ್ನು ಸರಿ ದಾರಿಗೆ ತರಲು ಪ್ರಯತ್ನಿಸುವ ಗುರುಗಳನ್ನು ಧಿಕ್ಕರಿಸುವ ಹಕ್ಕು ಸಮಾಜದ ಯಾವ ಗಣ್ಯ ವ್ಯಕ್ತಿಗೂ ಇಲ್ಲ.

ಸರೋಜ ಪಿ.ಜೆ ದೋಳ್ಪಾಡಿ‌. ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಪದವಿ ಕಾಲೇಜು ಪುತ್ತೂರು

Leave A Reply

Your email address will not be published.