ನಿಮ್ಮಲ್ಲಿ ಕೊಕ್ಕೋ ಹಾಳಾಗುತ್ತಿದೆಯೇ? ಹಾಗಾದರೆ ಹೀಗೆ ಮಾಡಿ | ಬೆಳೆಗಾರರಿಗೆ ಕ್ಯಾಂಪ್ಕೋ ಸಲಹೆ

ದೇಶವ್ಯಾಪಿಯಾಗಿ ಹಬ್ಬುತ್ತಿರುವ ಕೊರೋನಾ (ಕೋವಿಡ್ 19) ವೈರಸ್ ಪಿಡುಗಿನಿಂದಾಗಿ ಸರಕಾರ ವಿಧಿಸಿರುವ ದೇಶವ್ಯಾಪಿ ಬಂದ್ ಗೆ ಸಹಕರಿಸಲೇಬೇಕಾದ ಅನಿವಾರ್ಯತೆಯಲ್ಲಿರುವ ಕ್ಯಾಂಪ್ಕೊ ಸಂಸ್ಥೆಯು ದಿನಂಪ್ರತಿ ಖರೀದಿಸುತ್ತಿದ್ದ ಹಸಿ ಕೊಕ್ಕೊವನ್ನು ಖರೀದಿಸಲು ಅಸಾಧ್ಯವಾಗಿದೆ. ಇದಕ್ಕಾಗಿ ಕ್ಯಾಂಪ್ಕೋ ಸಂಸ್ಥೆ ಕೋಕೊ ಸಂಗ್ರಹ ಕ್ಕೆ ಹೀಗೊಂದು ಮಾಹಿತಿ ನೀಡಿದೆ.

ಆದರೆ ಒಂದೆರಡು ದಿನಗಳಲ್ಲಿ ಹಾಳಾಗುವ ಹಸಿ ಕೊಕ್ಕೊ ಬೀಜವನ್ನು ಒಣ ಬೀಜವಾಗಿ ಮುಂದಿನ ದಿನಗಳಲ್ಲಿ ಖರೀದಿಸುವ ಅವಕಾಶವನ್ನು ನೀಡಲುದ್ದೇಶಿಸಿದ್ದು ಅದರ ತಯಾರಿಸುವ ವಿಧಾನವನ್ನು ಈ ಕೆಳಗೆ ನಮೂದಿಸಲಾಗಿದೆ. ಪ್ರತಿ ಕೊಯ್ಲಿನ ಕೊಕ್ಕೊ ಹಸಿ ಬೀಜವನ್ನು(ಕೋಡಿನಿಂದ ಬೇರ್ಪಡಿಸಿದ) ಪ್ರತ್ಯೇಕವಾಗಿ ಸೆಣಬಿನ ಗೋಣಿ ಚೀಲ ಅಥವಾ ಯಾವುದಾದರೂ ಬಳ್ಳಿಯಿಂದ ನಿರ್ಮಿಸಿದ ಬುಟ್ಟಿ ಅಥವಾ ನೀರು ಬಸಿದು ಹೋಗುವ ಮರದ ಪೆಟ್ಟಿಗೆಯಲ್ಲಿ ರಾಶಿ ಹಾಕಿ ಒತ್ತಡದಲ್ಲಿರುವಂತೆ ಐದಾರು ದಿನಗಳ ಕಾಲ ಎತ್ತರದ ಜಾಗದಲ್ಲಿಟ್ಟು ಸಂಪೂರ್ಣ ನೀರು ಬಸಿದು ಹೋಗುವಂತೆ ಮಾಡಬೇಕು. ಗೋಣಿ ಚೀಲವಾದರೆ ಬಾಯಿ ಕಟ್ಟಿ ದಿನಕ್ಕೊಮ್ಮೆ ಮಗುಚಿ ಹಾಕಿ. ಬುಟ್ಟಿ / ಪೆಟ್ಟಿಗೆಯಾದರೆ ಯಾವುದಾದರೂ ವಸ್ತುವಿನಿಂದ ಮಗುಚುತ್ತಿರಿ.

ಆರು ದಿನಗಳ ಬಳಿಕ ಈ ಬೀಜಗಳನ್ನು ಒಣಗಿಸುವ ಪ್ರಥಮ ಪ್ರಕ್ರಿಯೆ ಮುಗಿದಿರುತ್ತದೆ. ಈ ಸಂದರ್ಭದಲ್ಲಿ ಅವುಗಳು ತನ್ನ ಮೇಲ್ಮೈನ ಲೋಳೆಯಂತಹ ಮೊದಲ ಪದರವನ್ನು ಕಳಚಿಕೊಂಡು ಕಂದು ಬಣ್ಣಕ್ಕೆ ತಿರುಗಿರುವುದನ್ನು ಖಚಿತಪಡಿಸಿಕೊಳ್ಳಿ. ಬಳಿಕ ಅಂಗಳದಲ್ಲಿ ಯಾವುದೇ ಧೂಳು,ಮಣ್ಣು ಹಾಗೂ ಮರಳು ಇಲ್ಲದ ಟಾರ್ಪಾಲನ್ನು ಬಿಡಿಸಿ ಈ ಬೀಜಗಳನ್ನು ಬಿಡಿ ಬಿಡಿಯಾಗಿ ಹರಡಿ ಒಂದು ವಾರದ ಕಾಲ ಬಿಸಿಲಿಗೆ ಒಣಗಿಸಿ. ಈ ಮಧ್ಯೆ ಆಗಾಗ ಸ್ವಚ್ಛವಾದ ಕೈ ಅಥವಾ ಕಾಲಿನಲ್ಲಿ ಮಗುಚುತ್ತಿರಿ.

ಈ ಪ್ರಕ್ರಿಯೆ ಮುಗಿದ ಬಳಿಕ ಈ ಬೀಜಗಳು ಪರಿಪೂರ್ಣವಾಗಿ ಒಣಗಿರುವುದನ್ನು ಖಚಿತಪಡಿಸಿಕೊಳ್ಳಿ. ಬಳಿಕ ಸಮರೀತಿಯಲ್ಲಿ ಒಣಗಿದ ಈ ಒಣ ಬೀಜಗಳನ್ನು ಸ್ವಚ್ಛವಾದ ಒಣಗಿದ ಚೀಲದಲ್ಲಿ ತುಂಬಿಸಿಡಿ.

ಸೂಚನೆ : ಪ್ರತಿ ಕೊಯ್ಲಿನ ಹಸಿ ಕೊಕ್ಕೊ ಬೀಜಗಳನ್ನು ಪ್ರತ್ಯೇಕವಾಗಿ ಮೇಲಿನ ರೀತಿಯಲ್ಲಿ ಒಣಗಿಸಬೇಕು.

Leave A Reply

Your email address will not be published.