ನೂಜಿಬಾಳ್ತಿಲ ಗ್ರಾ.ಪಂ | ಜಾಗೃತಿ ಪಡೆಯಿಂದ ಸಭೆ, ಸೂಚನೆ

0 9

ಕಡಬ: ಕೊರೊನಾ ಹರಡುವುದನ್ನು ತಡೆಗಟ್ಟಲು ಗ್ರಾ.ಪಂ.ನಲ್ಲಿ ರಚಿಸಲಾದ ಜಾಗೃತಿ ಪಡೆಯ ಸಭೆ ನೂಜಿಬಾಳ್ತಿಲ ಗ್ರಾ.ಪಂ. ಸಭಾಂಗಣದಲ್ಲಿ ಗುರುವಾರ ನಡೆಯಿತು.

ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಅಧ್ಯಕ್ಷತೆ ವಹಿಸಿ, ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಈಗಾಗಲೇ ಹೊರ ದೇಶದಿಂದ ಹಾಗೂ ಬೆಂಗಳೂರಿನಿಂದ ಬಂದವರನ್ನು ಹೊರಗೆ ಸುತ್ತಾಡದಂತೆ ಸೂಚಿಸಲಾಗಿದೆ. ಆರೋಗ್ಯ ಸಹಾಯಕಿಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸಹಕಾರದಿಂದ ಮನೆ ಬೇಟಿ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಕಲ್ಲುಗುಡ್ಡೆಯಲ್ಲಿ ದಿನವಹಿ ವಸ್ತು ಖರೀದಿಸಲು ಸಮಯ ಹಾಗೂ ಸ್ಥಳದಲ್ಲಿ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದ್ದು, ಬಳಿಕ ಗುಂಪು ಸೇರದಂತೆ ಪೊಲೀಸರು ಕ್ರಮಕೈಗೊಳ್ಳುತ್ತಿದ್ದಾರೆ ಎಂದರು.

ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ ಹಾಲು ಸೊಸೈಟಿಯಲ್ಲಿ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಹಾಲು ಹಾಕಬೇಕೆಂಬ ಸೂಚನೆ ನೀಡಬೇಕು. ಆಹಾರ ಸಮಸ್ಯೆ ಎದುರಾಗದಂತೆ ವಾರ್ಡ್ ಸದಸ್ಯರು ಗಮನಹರಿಸಬೇಕು ಎಂದರು.

ಗ್ರಾ.ಪಂ. ಸದಸ್ಯರಾದ ಕೆ.ಜೆ.ತೋಮಸ್, ರಾಮಚಂದ್ರ ಎಸ್.ಗೌಡ, ರಾಜು ಗೋಳಿಯಡ್ಕ, ವಲ್ಸ ಕೆ.ಜೆ., ರಜಿತಾ ಕೆ., ಬೀಟ್ ಪೊಲೀಸ್ ಅಧಿಕಾರಿ ಚಿನ್ನಪ್ಪ ಕೆ., ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡು ಜಾಗೃತಿ, ಕಾರ್ಯದ ಸೂಚನೆ ಬಗ್ಗೆ ಚರ್ಚಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನಂದ ಎ. ಸ್ವಾಗತಿಸಿ, ವಂದಿಸಿದರು.

Leave A Reply