ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಸಿದ್ದ ಮೂಲೆ ಕೆರೆಯಲ್ಲಿ 200 ಕ್ಕೂ ಮಿಕ್ಕಿ ಸತ್ತ ಕೋಳಿಗಳು | ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಗ್ರಾ. ಪಂಚಾಯತ್

ಪುತ್ತೂರು : ಇಲ್ಲಿನ ಕೊಳ್ತಿಗೆ ಗ್ರಾಮದ  ಕೆರೆಯೊಂದರಲ್ಲಿ 200 ಕ್ಕೂ ಮಿಕ್ಕಿದ ಸತ್ತ ಕೋಳಿಗಳು ತೇಲುತ್ತಾ ಬಿದ್ದಿವೆ.

ಕೊಳ್ತಿಗೆ ಗ್ರಾಮ ವ್ಯಾಪ್ತಿಯಲ್ಲಿ ಬರುವ ಬೆಳ್ಳಾರೆ- ಪೆರ್ಲಂಪಾಡಿ ರಸ್ತೆಯ ಮಧ್ಯೆ ಬರುವ ಸಿದ್ದಮೂಲೆ ಕೆರೆಯಲ್ಲಿ ಬೆಳ್ಳಂಬೆಳಗ್ಗೆ ಸತ್ತ ಫಾರಂ ಕೋಳಿಗಳನ್ನು ನೋಡಿ ಜನತೆ ದಿಗ್ಬ್ರಾಂತರಾಗಿದ್ದಾರೆ.

ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಸಿದ್ದ ಮೂಲೆಯಲ್ಲಿ ಬೆಳಿಗ್ಗೆ ಎದ್ದು ನೋಡಿದಾಗ ಊರವರಿಗೆ ಆಶ್ಚರ್ಯ. ಊರಿನ ಕೆರೆಯಲ್ಲಿ ಏಕಾಏಕಿ ಇದೆಲ್ಲಿಂತ ಬಂತು ತಾವರೆ ದಳಗಳು ಅಂತ ಗ್ರಾಮಸ್ಥರು ಅಂದುಕೊಂಡು ಹತ್ತಿರ ಬಂದು ಗಮನಿಸಿ ನೋಡಿದಾಗ ಅವು ಸತ್ತು ಬಿದ್ದು ತೇಲುತ್ತಿರುವ ಬ್ರಾಯ್ಲಾರ್ ಕೋಳಿಗಳು.

ಯಾರೋ ಕೋಳಿ ವ್ಯಾಪಾರಸ್ಥರು ಈ ರೋಗಗ್ರಸ್ತ ಕೋಳಿಗಳನ್ನು ತಂದು ಕೆರೆಗೆ ಸುರಿದು ಹೋಗಿದ್ದಾರೆ.  ಸತ್ತ ಕೋಳಿಗಳನ್ನು ಈ ಹಿಂದೆ ಅಂಗಡಿಯವರು ತೋಟದಲ್ಲಿ ಗುಂಡಿ ಅಗೆದು ಅಲ್ಲಿ ಹೂತು ಹಾಕುತ್ತಿದ್ದರು. ಈಗ, ಗುಂಡಿ ಅಗೆದು ಹಾಕಲು ಯಾಕೆ ಕಷ್ಟ ಅಂತ ಹಾಗೇ ಕೆರೆಗೆ ಬಿಸಾಡಿದ್ದಾರೆ. ಇದು ದೊಡ್ಡ ಕೆರೆ, ಮತ್ತು ಕೋಳಿ ನೀರಲ್ಲಿ ಮುಳುಗುತ್ತದೆ, ಯಾರಿಗೂ ಗೊತ್ತಾಗುವುದಿಲ್ಲ ಎಂಬುದು ಅವರ ಪ್ಲಾನು. ಆದರೆ ಕೋಳಿಗಳು ತೇಲುತ್ತಾ ಇರುವುದರಿಂದ ಅದು ತಕ್ಷಣ ಗ್ರಾಮಸ್ಥರ ಗಮನಕ್ಕೆ  ಬಂದಿದೆ.

ರೋಗದ ಕೋಳಿಗಳನ್ನು ಕೆರೆಗೆ ಚೆಲ್ಲಿ ಹೋದುದಕ್ಕೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಈ ಕೆರೆ ಅರಣ್ಯ ಇಲಾಖೆಗೆ ಸೇರಿದ್ದು ಇದರಿಂದ ಸ್ಥಳೀಯರು ತಮ್ಮ ತೋಟಗಳಿಗೆ ಮತ್ತು ಇತರ ಅಗತ್ಯಗಳಿಗೆ ನೀರನ್ನು ಬಳಸುತ್ತಿದ್ದಾರೆ.

ಸ್ಥಳೀಯ ಆಡಳಿತಕ್ಕೆ ದೂರು ನೀಡುವ ಮೊದಲೇ ಕೊಳ್ತಿಗೆ ಗ್ರಾ.ಪಂ.ನಿಂದ ಮಿಂಚಿನ ಕಾರ್ಯಾಚರಣೆ ನಡೆದಿದೆ. ಕೆರೆಯಿಂದ ಸತ್ತ ಕೋಳಿಗಳನ್ನು ಹೊರತೆಗೆಯಲಾಗಿದೆ. ಒಂದೆಡೆ ಗ್ರಾಮಪಂಚಾಯಿತಿ ಕ್ಷಿಪ್ರ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ಕೇಳಿ ಬಂದಿದ್ದರೆ ಮತ್ತೊಂದೆಡೆ ಕಿಡಿಗೇಡಿಗಳ ಪತ್ತೆಗೆ ಆಗ್ರಹ ಹೆಚ್ಚಾಗಿದೆ.

Leave A Reply

Your email address will not be published.