ಗೆಜ್ಜೆಗಿರಿಯಲ್ಲಿ ಭಕ್ತ ಸಾಗರ : ಇತಿಹಾಸ ನಿರ್ಮಾಣ
ಪುತ್ತೂರು: ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತ್ಲ್‌ನಲ್ಲಿ ಜಿಲ್ಲೆ, ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವು , ನೇಮ ನಡೆಯಿತು.
“ಸತ್ಯೊಡು ಬತ್ತಿನಕ್ಲೆಗ್ ತಿಗಲೆಡ್ ಸಾದಿ ತೋಜಾವ, ಅನ್ಯಾಯೊಡು ಬತ್ತಿನಕ್ಲೆಗ್ ಸುರಿಯೊಡು ಸಾದಿ ತೋಜಾವ’ ಎಂಬ ಅಮರ ವಾಕ್ಯವನ್ನು ಐನೂರು ವರ್ಷಗಳ ಹಿಂದೆ ಸಾರಿದ ತುಳುನಾಡಿನ ವೀರರಾಗಿ ಮೆರೆದು ಮಾನವತ್ವದಿಂದ ದೈವತ್ವಕ್ಕೇರಿದ ಕೋಟಿ-ಚೆನ್ನಯರು ಹಾಗೂ ದೇಯಿ ಬೈದ್ಯೆತಿ ಮೂಲಸ್ಥಾನ ಕ್ಷೇತ್ರವು ವೈದಿಕ ವಿಧಿ ವಿಧಾನಗಳಿಂದ, ನಾಡಿನಾದ್ಯಂತದ ಗಣ್ಯರು, ಭಕ್ತರ ಸಮ್ಮಿಲನಕ್ಕೆ ಸಾಕ್ಷಿಯಾಯಿತು.
ಜನಸಂದೋಹ ಕ್ಷೇತ್ರದಲ್ಲಿ ಫೆ. 24ರಿಂದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಆರಂಭಗೊಂಡಿದ್ದು, ಅಂದಿನಿಂದ ಪ್ರತಿದಿನ ರಾತ್ರಿ ಸಮಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದರೆ, ಶುಕ್ರವಾರ ಪ್ರತಿಷ್ಠೆಯ ಕಾರ್ಯಕ್ರಮಕ್ಕೆ ಮುಂಜಾನೆಯಿಂದಲೇ ಸಹಸ್ರ ಸಂಖ್ಯೆಯ ಭಕ್ತರು ಹರಿದುಬಂದರು. ಶನಿವಾರ, ಆದಿತ್ಯವಾರ ವೂ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಲಕ್ಷಾಂತರ ಮಂದಿ ಗೆಜ್ಜೆಗಿರಿ ಯ ಕ್ಷೇತ್ರಕ್ಕೆ ಬಂದು ಪುನೀತರಾದರು.
ಪೊಲೀಸ್ ಇಲಾಖೆ, ಕ್ಷೇತ್ರದ ಸ್ವಯಂಸೇವಕರು ಶಿಸ್ತುಬದ್ಧವಾಗಿ ಭಕ್ತರಿಗೆ ಪೂರಕವಾದ ವ್ಯವಸ್ಥೆಗಳನ್ನು ಮಾಡಿಕೊಟ್ಟರು.
ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಗೆಜ್ಜೆಗಿರಿ ಕ್ಷೇತ್ರಕ್ಕೆ ಬರುವ ವಿವಿಧ ಕಡೆಗಳ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದಿಂದ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಲಾಗಿತ್ತು.
ಪುತ್ತೂರು ಬಸ್ಸು ನಿಲ್ದಾಣದಿಂದ ಕೌಡಿಚ್ಚಾರು ಮಾರ್ಗವಾಗಿ ಪ್ರತಿ 15 ನಿಮಿಷಗಳಿಗೆ ಭಕ್ತರಿಂದ ತುಂಬಿದ ಬಸ್ಸುಗಳು ಸಂಚರಿಸಿದವು. ಪಟ್ಟೆಯಿಂದ ಗೆಜ್ಜೆಗಿರಿ ತನಕದ 2 ಕಿ.ಮೀ. ರಸ್ತೆಯಲ್ಲಿ ವಾಹನಗಳು ಸರತಿ ಸಾಲಿನಲ್ಲಿ ಸಂಚರಿಸಿದವು.
ಕ್ಷೇತ್ರದ ಪರಿಸರದಲ್ಲಿ ಅಲ್ಲಲ್ಲಿ ವ್ಯವಸ್ಥೆ ಮಾಡಲಾದ ಪಾರ್ಕಿಂಗ್‌ಗಳಲ್ಲಿ ವಾಹನಗಳು ತುಂಬಿದವು. ಲಕ್ಷಾಂತರ ಮಂದಿಗೆ ಅನ್ನದಾನ ಕ್ಷೇತ್ರದ “ಬಂಗಾರ್ ತಿನಸ್’ ಭೋಜನ ಶಾಲೆಯಲ್ಲಿ ನಿರಂತರ ಅನ್ನದಾನ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇದುವರೆಗೆ ಲಕ್ಷಾಂತರ ಮಂದಿ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ.
ಸುಮಾರು 50 ಮಂದಿ ಅಡಿಗೆ ತಯಾರಕ ತಜ್ಞರು, 150 ಮಂದಿ ಅಡುಗೆ ಸಹಾಯಕರು, 50 ಕೌಂಟರ್‌ಗಳಲ್ಲಿ 500 ಮಂದಿ ಊಟ ಬಡಿಸುವ ಸ್ವಯಂಸೇವಕರು ಭೋಜನ ಶಾಲೆಯ ಅಚ್ಚುಕಟ್ಟಿನ ವ್ಯವಸ್ಥೆಯನ್ನು ನಿಭಾಯಿಸಿದರು. ಶುಕ್ರವಾರ ವಿಶೇಷವಾಗಿ ಲಾಡು, ಪಾಯಸವನ್ನು ಭಕ್ತರು ಸವಿದರು. ವಿವಿಐಪಿ, ಎಲೆ ಊಟದ ಕೌಂಟರ್, ಸೇವಾ ಕೇಂದ್ರಗಳನ್ನು ಪ್ರತ್ಯೇಕವಾಗಿ ಮಾಡಲಾಗಿತ್ತು.
ಭೋಜನ ಶಾಲೆಯ ಬಳಿಯೂ ಕಾರ್ಯಕ್ರಮಗಳ ಲೈವ್ ವೀಕ್ಷಣೆಗೆ ಎಲ್‌ಸಿಡಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ನಿರೀಕ್ಷೆಗೂ ಮೀರಿದ ಹೊರೆಕಾಣಿಕೆ ನಾಡಿನಾದ್ಯಂತದಿಂದ ಹೊರೆಕಾಣಿಕೆ ಸೇವೆ ನೀಡುವಂತೆ ಅಲ್ಲಲ್ಲಿ ತೆರಳಿ ಹೊರೆಕಾಣಿಕೆ ಸಮಿತಿಯ ಮೂಲಕ ವಿನಂತಿಸಿದ್ದೇವೆ. ಅದರ ಪರಿಣಾಮವಾಗಿ ಕ್ಷೇತ್ರದ ಭಕ್ತರಿಂದ ನಿರೀಕ್ಷೆಗೂ ಮೀರಿದ ಹೊರೆಕಾಣಿಕೆ ಸಲ್ಲಿಕೆಯಾಗಿದೆ. ಅಚ್ಚುಕಟ್ಟಿನ ವ್ಯವಸ್ಥೆಯೊಂದಿಗೆ ಕ್ಷೇತ್ರಕ್ಕೆ ಎಷ್ಟು ಸಂಖ್ಯೆಯ ಭಕ್ತರು ಬಂದರೂ ಅವರಿಗೆ ವ್ಯವಸ್ಥೆ ಮಾಡಲು ನಾವು ಸರ್ವ ಸನ್ನದ್ಧರಾಗಿದ್ದೇವೆ.
- ರವಿ ಕಕ್ಕೆಪದವು, ಪ್ರಧಾನ ಸಂಚಾಲಕರು, ಹೊರೆಕಾಣಿಕೆ ಸಮಿತಿ