ಗೆಜ್ಜೆಗಿರಿ| ಅಪ್ಪೆ ದೇಯಿ ಬೈದ್ಯೆತಿ ಕ್ಷೇತ್ರೋಡು ಬಾಲೆದ ಪಜ್ಜೆಡ್ ತೋಜಾಯೆರ್ ಕಾರ್ನಿಕ
ಪುತ್ತೂರು: ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಚಾವಡಿಯಲ್ಲಿ ಪುರೋಹಿತರು ಬಿಡಿಸಿದ್ದ ಮಂಡಲದಲ್ಲಿ ಪುಟ್ಟ ಮಕ್ಕಳ ಗಾತ್ರದ ಹೆಜ್ಜೆಗುರುತು ಕಾಣಿಸಿಕೊಳ್ಳುವ ಮೂಲಕ ತಾಯಿ ಬೈದ್ಯೇತಿ ತನ್ನ ಕಾರಣಿಕತೆ ತೋರಿಸಿದ್ದಾರೆ.
ಗೆಜ್ಜೆಗಿರಿ ಸತ್ಯಧರ್ಮ ಚಾವಡಿಯಲ್ಲಿ ಪುರೋಹಿತರು ಚಿತ್ತಾರಗೊಳಿಸಿದ್ದ ಮಂಡಲದಲ್ಲಿ ಪುಟ್ಟ ಮಕ್ಕಳ ಗಾತ್ರದ ಹೆಜ್ಜೆಗುರುತು ಪ್ರತ್ಯಕ್ಷಗೊಂಡಿದ್ದು ಇದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಇದೊಂದು ಪವಾಡ ಎನ್ನುವುದಕ್ಕಿಂತ ಕ್ಷೇತ್ರದ ಮಹಿಮೆ ಅಪಾರ ಎಂಬುದನ್ನು ತಾಯಿಯೇ ಈ ಮೂಲಕ ಭಕ್ತರಿಗೆ ದರ್ಶನ ನೀಡಿದ್ದಾರೆ ಎನ್ನಬಹುದು.
ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಸತ್ಯಧರ್ಮ ಚಾವಡಿಯಲ್ಲಿ ಮಂಗಳವಾರ ಮೃತ್ಯುಂಜಯ ಹೋಮ, ನವಗ್ರಹ ಹೋಮ ನಡೆದಿದೆ.
ಫೆ.26ರ ರಾತ್ರಿ ಚಾವಡಿಯ ಸಾಯನ ಗುರು ಪೀಠದ ಬಳಿ ಅರ್ಚಕರು ಮಂಡಲ ರಚಿಸಿ ಅರ್ಧನಾರೀಶ್ವರ ಚಿತ್ತಾರ ಬಿಡಿಸಿದ್ದರು.
ಫೆ.27ರ ಬೆಳಗ್ಗೆ ಚಾವಡಿಯಲ್ಲಿ ದೇಯಿ ಬೈದ್ಯೆತಿ ಬಿಂಬ, ಕೋಟಿ ಚೆನ್ನಯ, ಸಾಯನ ಗುರುಗಳ ಪಂಚಲೋಹ ಬಿಂಬಗಳ ಶಯ್ಯಾಧಿವಾಸ ನಡೆದು ಮಧ್ಯಾಹ್ನ ಬಾಗಿಲು ಹಾಕಲಾಗಿತ್ತು. ಸಂಜೆ ಹೊತ್ತಿಗೆ ಬಾಗಿಲು ತೆರೆದು ಒಳ ಹೋದಾಗ ಅಲ್ಲಿ ಆಶ್ಚರ್ಯ ಕಾದಿತ್ತು.
ಮಂಡಲದ ಮಧ್ಯದಲ್ಲಿ ಪುಟ್ಟ ಮಕ್ಕಳ ಎಂಟು ಹೆಜ್ಜೆ ಗುರುತು ಕಾಣಿಸಿಕೊಂಡಿದೆ. ಮಂಡಲದ ಒಂದು ಭಾಗದಿಂದ ಪ್ರವೇಶಿಸಿ ಗುರುಪೀಠದ ಕಡೆಗೆ ನಡೆದು ಹೋಗುವ ರೀತಿಯಲ್ಲಿ ಈ ಹೆಜ್ಜೆಗುರುತು ಕಾಣಿಸುತ್ತಿದೆ. ಬಾಗಿಲು ಹಾಕಿದ್ದ ಚಾವಡಿಯೊಳಗೆ ಮಕ್ಕಳು ಪ್ರವೇಶಿಸಲು ಸಾಧ್ಯವಿಲ್ಲ. ಅದರಲ್ಲೂ ಎತ್ತರದ ಸುತ್ತುಪೌಳಿ ಮಂಟಪದ ಮೇಲೆ ಮಂಡಲ ಬಿಡಿಸಲಾಗಿದ್ದು, ಅದರ ಮೇಲೆ ಶಿಶುಗಳು ಹತ್ತಲು ಸಾಧ್ಯವಿಲ್ಲ.
ಒಂದು ವೇಳೆ ಪುಟ್ಟ ಮಕ್ಕಳೇ ನಡೆದಿದ್ದರೂ ಮಂಡಲದ ಮೇಲೆ ಹರಡಿದ ಹುಡಿ ಚೆಲ್ಲಾಪಿಲ್ಲಿಯಾಗುವ ಸಾಧ್ಯತೆ ಇತ್ತು. ಇದಾವುದೂ ಆಗದೇ ಕೇವಲ ಹೆಜ್ಜೆಯ ಅಚ್ಚು ಮಾತ್ರ ಸ್ಪಷ್ಟವಾಗಿ ಕಾಣುತ್ತಿರುವುದು ಕ್ಷೇತ್ರದ ಶಕ್ತಿಯ ಮಹಿಮೆ ಎನ್ನಲಾಗಿದೆ.
ಈ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಸಮಯದಲ್ಲೇ ಸ್ಥಳ ಸಾನಿಧ್ಯ ಶಕ್ತಿಗಳು ತಮ್ಮ ಕಾರಣಿಕತೆ ತೋರಿಸಿದ್ದರು.ವೀರ ಪುರುಷರಾದ ಕೋಟಿ ಚೆನ್ನಯರು ಅವಳಿ ಹಲಸಿನಕಾಯಿ ರೂಪದಲ್ಲಿ ದರ್ಶನ ನೀಡಿದ್ದರು. ಮಾತೃಪ್ರಧಾನ ಸಂಪ್ರದಾಯವಿರುವ ಬಿಲ್ಲವ ಸಮುದಾಯದಲ್ಲಿ ಕೋಟಿ-ಚೆನ್ನಯರ ತಾಯಿ ದೇಯಿ ಬೈದ್ಯೇತಿಗೆ ಆಲಯ ನಿರ್ಮಾಣ ಮಾಡಿ ಬ್ರಹ್ಮಕಲಶ ಮಾಡಿರುವುದರಿಂದ ತಾಯಿ ದೇಯಿ ಬೈದ್ಯೇತಿ ಸಂತುಷ್ಟಳಾಗಿದ್ದಾಳೆ ಎಂದು ನಂಬಲಾಗಿದೆ.
ಕೋಟಿ ಚೆನ್ನಯರ ಮೂಲ ಮನೆಯಾದ ಗೆಜ್ಜೆಗಿರಿ – ನಂದನಬಿತ್ತಿಲ್ ಮಾತೆ ದೇಯಿ ಬೈದಿತಿಗೆ ಪುನರ್ಜನ್ಮ ನೀಡಿದ ತಾಣ. ಗುರು ಸಾಯನ ಬೈದರ ಕರ್ಮ ಭೂಮಿ.ಯಮಳರು ತಮ್ಮ ಬಾಲ್ಯದ ದಿನಗಳನ್ನು ಕಳೆದ ನೆಲ . ಸುಮಾರು 550 ವರ್ಷಗಳ ಬಳಿಕ ಈ ಮೂರು ತಲೆಮಾರುಗಳ ಕಾರಣಿಕ ಶಕ್ತಿಗಳ ಆರಾಧನೆ ಈ ಪುಣ್ಯ ಪಾವನ ತಾಣದಲ್ಲಿ ನಡೆಯುತ್ತಿದೆ.
ಕ್ಷೇತ್ರದ ತಂತ್ರಿ ಎಂ ಕೆ ಲೊಕೇಶ್ ಶಾಂತಿ ಅವರ ನೇತ್ರತ್ವದಲ್ಲಿ ಶಿಖರ ಪ್ರತಿಷ್ಠೆ, ಬೆರ್ಮೆರ್ ಗುಂಡದಲ್ಲಿ ಬೆರ್ಮೆರ್ ಶಿಲಾ ಸ್ಥಾಪನೆ, ಸತ್ಯಧರ್ಮ ಚಾವಡಿಯಲ್ಲಿ ಮಾತೆ ದೇಯಿ ಬೈದ್ಯತಿ ಬಿಂಬ ಪ್ರತಿಷ್ಠೆ ಸಾಯನ ಬೈದ್ಯರ ಗುರುಪೀಠ ಸ್ಥಾಪನೆ, ಮೂಲ ಸ್ಥಾನ ಗರಡಿಯಲ್ಲಿ ಗುರು ಪೀಠ ಸ್ಥಾಪನೆ ಮೂಲಸ್ಥಾನ ಗರಡಿಯಲ್ಲಿ ಗುರು ಸಾಯನ ಬೈದ್ಯರು ಕೋಟಿ ಚೆನ್ನಯರ ಬಿಂಬ ಪ್ರತಿಷ್ಠೆ ನಡೆದು ಬ್ರಹ್ಮ ಕಲಶಾಭಿಷೇಕ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆದಿದೆ.
ನಾಗಬಿಂಬ ಪ್ರತಿಷ್ಟೆಯಂದು ವರುಣವೃಷ್ಟಿ
ಬುಧವಾರ ನಾಗ ಬಿಂಬ ಪ್ರತಿಷ್ಠೆಯ ದಿನದಂದು ಗೆಜ್ಜೆಗಿರಿ ಹಾಗೂ ಸುತ್ತ ಮುತ್ತ ಅಕಾಲಿಕ ಮಳೆ ಸುರಿದದ್ದು ಹಾಗೂ ಈಗ ಬ್ರಹ್ಮಕಲಶಾಭಿಷೇಕ ದಿನದಂದು ಈ ರೀತಿಯ ವಿಸ್ಮಯ ಗೋಚರಿಸಿದ್ದು ತುಳುನಾಡಿನ ದೈವ್ಯಗಳ ಕಾರಣಿಕತೆ ಹಾಗೂ ಸ್ಥಳ ಸಾನಿಧ್ಯ ಮಹಿಮೆಯ ಸೂಚಕ ಎನ್ನಲಾಗಿದೆ. ಜಲ ಶೋಧನೆ ಹಾಗೂ ನೀರಿನ ಮೂಲ ರಚನೆ (ಬಾವಿ,ಕೊಳವೆ ಬಾವಿ)ಯ ಸಂದರ್ಭದಲ್ಲಿ ನಾಗದೇವರನ್ನು ವಿಶೇಷವಾಗಿ ಪ್ರಾರ್ಥಿಸಿ ಮುಂದುವರಿಯುವುದು ನಮ್ಮ ಸಂಪ್ರದಾಯ.
ಅದರಂತೆ ನಾಗಬಿಂಬ ಪ್ರತಿಷ್ಟೆಯಂದೆ ಮಳೆ ಸುರಿದಿರುವುದು ಕ್ಷೇತ್ರದ ಇನ್ನೊಂದು ಪವಾಡ.
ಒಟ್ಟಿನಲ್ಲಿ ಇಂತಹ ಕ್ಷೇತ್ರದ ಜೀರ್ಣೋದ್ಧಾರ, ಬ್ರಹ್ಮಕಲಶಾಧಿ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ಈಗಿನ ತಲೆಮಾರಿಗೆ ದೊರಕಿರುವುದು ಪುಣ್ಯ.
ನಿಜಕ್ಕೂ ವಿಸ್ಮಯದ ವಿಚಾರ. ನಮ್ಮ ತುಳುನಾಡ ಕಾರ್ನಿಕ..??