ಕೊಯಿಲ: ಶಾಲೆಯಿಂದ ಹೊರಗುಳಿದ ಮಕ್ಕಳ ಪತ್ತೆ
ಕಡಬ: ಪೊಲೀಸ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೊಯಿಲ ಗ್ರಾ.ಪಂ.ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಮನೆಗೆ ಭೇಟಿ ನೀಡಿ ಅವರನ್ನು ಮತ್ತೆ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಡಬ ಠಾಣೆಯ ಹೆಡ್ಕಾನ್ಸ್ಟೇಬಲ್, ಕೊಯಿಲ ಗ್ರಾಮದ ಬೀಟ್ ಪೊಲೀಸ್ ಹರೀಶ್ರವರ ಸಹಕಾರದೊಂದಿಗೆ ಶಿಕ್ಷಣ ಇಲಾಖೆಯ ಬಿಆರ್ಸಿ ದೇವಕಿ, ರಾಮಕುಂಜ ಕ್ಲಸ್ಟರ್ ಸಿಆರ್ಪಿ ಮಹೇಶ್, ಸಬಳೂರು ಶಾಲಾ ಮುಖ್ಯಶಿಕ್ಷಕಿ ವಾರಿಜ ಹಾಗೂ ಸಹಶಿಕ್ಷಕರ ನೇತೃತ್ವದ ತಂಡ ಮಕ್ಕಳ ಮನೆಗೆ ಹೋಗಿ ಪೋಷಕರ ಮನವೊಲಿಸಿ ಮಕ್ಕಳನ್ನು ಮತ್ತೆ ಶಾಲೆಗೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾವೇರಿ ಜಿಲ್ಲೆಯ ನಿವಾಸಿ ಅಶೋಕ್ ಎಂಬವರ ಪುತ್ರ, ಶ್ರವಣ್ ಎಂಬಾತ ಕೆಮ್ಮಿಂಜೆ ಗ್ರಾಮದ ಕೆಮ್ಮಿಂಜೆ ಸಂಜಯನಗರ ಶಾಲೆಯಲ್ಲಿ 5 ನೇ ತರಗತಿ ವಿದ್ಯಾರ್ಥಿಯಾಗಿದ್ದು ಈತನ ಪೋಷಕರು ಈಗ ಸಬಳೂರು ಸಮೀಪದ ಕಲಾಯಿ ಎಂಬಲ್ಲಿಗೆ ಕೆಲಸಕ್ಕೆಂದು ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಶ್ರವಣ್ ಪೋಷಕರ ಜೊತೆಗೆ ಬಂದಿದ್ದು ಶಾಲೆಗೆ ಹೋಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಶ್ರವಣ್ರ ಪೋಷಕರನ್ನು ಭೇಟಿ ಮಾಡಿದ ಅಧಿಕಾರಿಗಳ ತಂಡ ಅವರ ಮನವೊಲಿಸಿದ್ದು ಶ್ರವಣ್ರನ್ನು ಶಾಲೆಗೆ ಮರು ಸೇರಿಸಲು ಒಪ್ಪಿಕೊಂಡಿದ್ದಾರೆ. ಇನ್ನೊಂದೆಡೆ ಉತ್ತರ ಪ್ರದೇಶ ರಾಜ್ಯ ಶಾಪುರ ಜಿಲ್ಲೆಯ ನಿವಾಸಿಯಾಗಿದ್ದು ಕೊಯಿಲದಲ್ಲಿ ವಾಸವಾಗಿದ್ದ ಮೊಹಮ್ಮದ್ ಇದ್ರೀಸ್ ಎಂಬವರ ಮಕ್ಕಳಾದ 3 ನೇ ತರಗತಿಯ ಮೊಹಮ್ಮದ್, 4 ನೇ ತರಗತಿಯ ರಾಕಿಫ್ ಮೊಹಮ್ಮದ್ ಶಕೀಮ್, 5 ನೇ ತರಗತಿಯ ಆಸ್ಮೀನಾರವರು ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿಗೆ ಸೇರ್ಪಡೆಗೊಂಡಿದ್ದರು.
ಇವರನ್ನು ಮತ್ತೆ ಶಾಲೆಗೆ ಸೇರ್ಪಡೆಗೊಳಿಸುವ ಸಂಬಂಧ ಅಧಿಕಾರಿಗಳ ತಂಡ ಮಾತುಕತೆ ನಡೆಸಿ ಮನವೊಲಿಸಿದೆ. ಎರಡೂ ಕಡೆಯವರು ಮಕ್ಕಳನ್ನು ಮತ್ತೆ ಶಾಲೆಗೆ ಸೇರ್ಪಡೆಗೊಳಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಬೀಟ್ ಪೊಲೀಸ್ ಹರೀಶ್ರವರು ತಿಳಿಸಿದ್ದಾರೆ.