ಕಂಬಳ, ಕೃಷಿ ಕ್ಷೇತ್ರದ ಸಾಧಕ ಬೆಳ್ಳಿಪ್ಪಾಡಿ ಕೈಪ ಕೇಶವ ಭಂಡಾರಿ : ಕಂಬಳ,ಕೃಷಿ ಕ್ಷೇತ್ರದ ಪರಿಶ್ರಮಕ್ಕೆ ಈಗ ಮೂರು ದಶಕ !
ಲೇ : ಆದರ್ಶ್ ಶೆಟ್ಟಿ ಕಜೆಕ್ಕಾರ್, ಉಪ್ಪಿನಂಗಡಿ.
ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ಹಲವಾರು ಶತಮಾನಗಳ ಇತಿಹಾಸವಿದೆ. ಕಂಬಳ ಕ್ಷೇತ್ರದಲ್ಲಿ ನೂರಾರು ಕೋಣಗಳ ಯಜಮಾನರು, ಓಟಗಾರರು ಹತ್ತು ಹಲವು ಮೈಲುಗಲ್ಲುಗಳನ್ನು ಸಾಧಿಸಿ ಸದ್ದಿಲ್ಲದೆ ತೆರೆಯಮರೆಯಲ್ಲಿರುವವರು ಹಲವರಿದ್ದಾರೆ. ಕಂಬಳದ ಉಳಿವಿನಲ್ಲಿ ಪ್ರಮುಖ ಪಾತ್ರವಹಿಸುವ ಕೋಣಗಳ ಯಜಮಾನರುಗಳ ಪೈಕಿ ತಮ್ಮ ಹಿರಿಯರ ಕಾಲದಿಂದಲೂ ಕೋಣಗಳನ್ನು ಸಾಕಿ ಹಲವಾರು ದಶಕಗಳಿಂದ ಕಂಬಳ ಕೂಟಗಳಲ್ಲಿ ಭಾಗವಹಿಸುವ ಮಂದಿ ಒಂದೆಡೆಯಾದರೆ, ಮತ್ತೊಂದೆಡೆ ನಮ್ಮ ಮುಂದಿನ ಪೀಳಿಗೆಗೂ ಕಂಬಳವನ್ನು ಉಳಿಸಿ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಕೋಣಗಳನ್ನು ಸಾಕಿ ಕಂಬಳವನ್ನು ಪೋಷಿಸುವ ಬಹುತೇಕ ಮಂದಿ ಯಜಮಾನರಿದ್ದಾರೆ.
ಇವೆಲ್ಲದರ ಮಧ್ಯೆ ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿಯ ಕೈಪ ಕೇಶವ ಮಾಂಕು ಭಂಡಾರಿಯವರು ಕಳೆದ ಮೂರು ದಶಕಗಳಿಂದ ಕಂಬಳ ಕ್ಷೇತ್ರದಲ್ಲಿ ಕೋಣಗಳನ್ನು ಸಾಕಿ ಕಂಬಳ ಕೂಟದಲ್ಲಿ ಸಾಕಷ್ಟು ಹೆಸರು ಗಳಿಸಿದವರು.ಕೇಶವ ಭಂಡಾರಿಯವರ ತಂದೆ ದಿ.ಮಾಂಕು ಭಂಡಾರಿಯವರು ಕೂಡ 2 ಜೊತೆ ಕೋಣಗಳನ್ನು ನಿತ್ಯ ನಿರಂತರವಾಗಿ ಸಾಕಿ ಸಲಹಿ ಕಂಬಳ ಕೂಟದಲ್ಲಿ ತೊಡಗಿಸಿ upಕೊಂಡವರು.ತನ್ನ ತಂದೆಯ ಹಾದಿಯಲ್ಲೇ ನಡೆದು ಬಂದ ಕೇಶವ ಭಂಡಾರಿಯವರು ಓರ್ವ ಪ್ರಗತಿಪರ ಕೃಷಿಕರಾಗಿ ಸಾಮಾಜಿಕ, ಧಾರ್ಮಿಕ ಹೀಗೆ ಹತ್ತು ಹಲವು ಸಂಘಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಳೆದ ಮೂವತ್ತು ವರ್ಷಗಳಲ್ಲಿ ಕಂಬಳ ಕ್ಷೇತ್ರದಲ್ಲಿ 60 ಮಿಕ್ಕಿ ಚಿನ್ನದ ಪದಕಗಳನ್ನು ಗೆದ್ದ ಸಾಧನೆ ಇವರದು.
ಉಪ್ಪಿನಂಗಡಿ ವಿಜಯ-ವಿಕ್ರಮ ಕಂಬಳದ ಪ್ರಧಾನ ಕಾರ್ಯದರ್ಶಿಯಾಗಿ ಜಿಲ್ಲಾ ಅವಿಭಜಿತ ಕಂಬಳ ಒಕ್ಕೂಟದ ಪದಾಧಿಕಾರಿಯಾಗಿ ಕೇಶವ ಭಂಡಾರಿಯವರು ಕಂಬ ಳದ ಉಳಿವಿಗಾಗಿ ನಡೆದ ಹೋರಾಟದಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡವರು.
ತನ್ನ ಕೋಣಗಳಿಗೆ ಈಜುಕೊಳ,ವ್ಯಾಯಾಮ ಒದಗಿಸಲು ಗದ್ದೆ,ಉಲುಮೆ,ನಿತ್ಯನಿರಂತರವಾಗಿ ಎಣ್ಣೆ ಹಚ್ಚಿ ತಮ್ಮ ಕೋಣಗಳ ಬಗ್ಗೆ ಪ್ರೀತಿ ವಾತ್ಸಲ್ಯವನ್ನು ತೋರುತ್ತಾ ಬಂದಿದ್ದಾರೆ. ಈ ವರ್ಷ ನಡೆದ ಅವಿಭಜಿತ ಕಂಬಳ ಕೂಟದಲ್ಲಿ ಗಮನಾರ್ಹ ಸಾಧನೆಗೈದಿರುವ ಕೇಶವ ಭಂಡಾರಿಯವರ ಕೋಣಗಳು ಸತತ ಆರು ಬಾರಿ ಸೆಮಿಫೈನಲ್ ಗೇರಿ ಜಪ್ಪಿನಮೊಗರು ಜಯ-ವಿಜಯ ಕಂಬಳದಲ್ಲಿ ಪ್ರಥಮ ಸ್ಥಾನ ಗಳಿಸಿ ಸಾಧನೆಗೈದಿದೆ.
ಪ್ರಗತಿಪರ ಕೃಷಿಕರಾಗಿ ಸಾಧನೆಗೈದ ಕೇಶವ ಭಂಡಾರಿ :
ತನ್ನ ಹತ್ತು ಎಕರೆಗೂ ಮಿಕ್ಕಿ ವಿಶಾಲ ಜಾಗದಲ್ಲಿ ಅಡಿಕೆ, ತೆಂಗು,ಭತ್ತ, ರಬ್ಬರ್, ಕರಿಮೆಣಸು, ತರಕಾರಿ ಬೆಳೆಯೊಂದಿಗೆ ಉಪಬೆಳೆಗಳನ್ನು ಬೆಳೆಯುತ್ತಿರುವ ಇವರು ವೀಳ್ಯದೆಲೆ, ಚಿಕ್ಕು,ತೆಂಗು, ಕೊಕ್ಕೊ,ಹಲವು ತಳಿಯ ಅಡಿಕೆ ಗಿಡಗಳನ್ನು ಬೆಳೆಯುತ್ತಿದ್ದಾರೆ.ಇದರ ಜೊತೆ ಜೊತೆಗೆ ಸಾಗುವಾಣಿ,ಶ್ರೀ ಗಂಧ,ರಕ್ತಚಂದನ,ಅಗರ್ ವುಡ್ ,ಬೀಟೆ ಜಾತಿಯ ಗಿಡಗಳನ್ನು ಬೆಳೆದು ಮಾದರಿ ಕೃಷಿಕನಾಗಿ ಬೆಳೆದಿದ್ದಾರೆ ಕೇಶವ ಭಂಡಾರಿಯವರು.
ಇವರು ಪ್ರಸ್ತುತ ಗುತ್ತಿಗೆದಾರರಾಗಿದ್ದು,ಬೆಳ್ಳಿಪ್ಪಾಡಿಯಲ್ಲಿ ಮೆಗಾ ಎಂಬ ಹೆಸರಿನ ನರ್ಸರಿಯನ್ನು ನಡೆಸುತ್ತಾ ವಿವಿಧ ಜಾತಿಯ ಗಿಡಗಳನ್ನು ಮಾರಾಟ ಮಾಡುವ ಮೂಲಕ ತನ್ನಂತೆಯೇ ಇತರ ಜನರೂ ಕೃಷಿಯ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕೆಂಬ ಇರಾದೆಯನ್ನು ಹೊಂದಿದ್ದಾರೆ. ಕೃಷಿಯ ಬಗ್ಗೆ ಆಳವಾದ ಸಂಶೋಧನೆ ನಡೆಸಿರುವ ಕೇಶವ ಭಂಡಾರಿಯವರಿಗೆ ಸಾವಯವ ಕೃಷಿ ಸಾಧನೆಗಾಗಿ ಹಲವಾರು ಪ್ರಶಸ್ತಿಗಳು ಲಭಿಸಿರುವುದಲ್ಲದೆ,ಕೃಷಿಯ ಕ್ಷೇತ್ರದ ಬಗ್ಗೆ ಅಧ್ಯಯನ ನಡೆಸುವ ಸಾಮಾಜಿಕ ಕಾರ್ಯ ಸೇರಿದಂತೆ ಇನ್ನಿತರ ವಿಭಾಗದ ವಿದ್ಯಾರ್ಥಿಗಳಿಗೆ ಕೇಶವ ಭಂಡಾರಿಯವರ ಕೃಷಿ ಚಟುವಟಿಕೆಗಳು ಪೂರಕ ಸ್ಥಳವೂ ಆಗಿದೆ.
ಧಾರ್ಮಿಕ ಸಾಮಾಜಿಕ ಕ್ಷೇತ್ರಗಳು :
ಇವರು ಧಾರ್ಮಿಕ ಕ್ಷೇತ್ರದಲ್ಲಿ ಬೆಳ್ಳಿಪ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಉಪಾಧ್ಯಕ್ಷರಾಗಿ, ಬಾರ್ಕೂರು ಕಚ್ಚೂರು ನಾಗೇಶ್ವರ ದೇವಸ್ಥಾನದ ಟ್ರಸ್ಟಿಯಾಗಿ,ಭಂಡಾರಿ ಸಮಾಜದ ಪುತ್ತೂರು ತಾಲೂಕು ಅಧ್ಯಕ್ಷರಾಗಿ ಇದೀಗ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಹೊಸ್ತಿಲಿನಲ್ಲಿರುವ ಬೆಳ್ಳಿಪ್ಪಾಡಿ ವನಶಾಸ್ತಾರ ದೇವಳದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.ಕೃಷಿ, ಸಾಮಾಜಿಕ, ಧಾರ್ಮಿಕ, ಜನಪದ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದಿರುವ ಕೇಶವ ಭಂಡಾರಿಯವರ ಕಾರ್ಯಕ್ಕೊಂದು ಹ್ಯಾಟ್ಸಾಪ್ ಅನ್ನಲೇಬೇಕು.
ರಾಜವಂಶದ ಕಾಲದ ಇತಿಹಾಸ ಹೊಂದಿರುವ ಕಂಬಳ ಕ್ರೀಡೆಗೆ ಮತ್ತು ಕೃಷಿ ಪರಂಪರೆ, ರೈತಾಪಿ ವರ್ಗಕ್ಕೆ ಅವಿನಾಭಾವ ನಂಟಿದೆ. ಜಾಗತೀಕರಣದ ಪ್ರಭಾವದಲ್ಲಿ ನಮ್ಮ ಸಂಸ್ಕೃತಿ,ಕೃಷಿ ಪದ್ಧತಿಗಳು ನಶಿಸಿ ಹೋಗುತ್ತಿರುವ ಈ ಕಾಲದಲ್ಲಿ ಅದನ್ನು ಮುಂದಿನ ಪೀಳಿಗೆಗೆ ತಿಳಿಸುವ, ಉಳಿಸುವ ಕೆಲಸಗಳಾಗಬೇಕು.
– ಕೇಶವ ಭಂಡಾರಿ ಬೆಳ್ಳಿಪ್ಪಾಡಿ, ಕೈಪ,ಪ್ರಗತಿಪರ ಕೃಷಿಕ.
ಆದರ್ಶ್ ಶೆಟ್ಟಿ ಕಜೆಕ್ಕಾರ್, ಉಪ್ಪಿನಂಗಡಿ.