ದಕ್ಷಿಣ ಕಾಶಿ ಯಲ್ಲಿ ಶಿವರಾತ್ರಿ ಸಂಭ್ರಮ
ದೇಶದೆಲ್ಲೆಡೆ ಇಂದು ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲಾ ಶಿವ ದೇವಸ್ಥಾನಗಳಲ್ಲಿ ಇಂದು ಭಕ್ತರ ದಂಡು ಶಿವನ ಆರಾಧನೆಯಲ್ಲಿ ಮಗ್ನವಾಗಿದೆ. ಶಿವನಿಗೆ ವಿಶೇಷ ಅಭಿಷೇಕ ಸೇವೆಯ ಜೊತೆಗೆ ರಾತ್ರಿ ಪೂರ್ತಿ ಜಾಗರಣೆಯನ್ನೂ ನಡೆಸುತ್ತಾರೆ. ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸಹಸ್ತ್ರಲಿಂಗೇಶ್ವರ ದೇವಸ್ಥಾನದಲ್ಲೂ ಶಿವರಾತ್ರಿಯ ವಿಶೇಷ ಮಖೆ ಜಾತ್ರೆ ಆರಂಭಗೊಂಡಿದೆ. ನೇತ್ರಾವತಿ ಹಾಗೂ ಕುಮಾರಧಾರ ನದಿಗಳ ಸಂಗಮ ಕ್ಷೇತ್ರದ ಉದ್ಭವಲಿಂಗಕ್ಕೆ ಭಕ್ತರೇ ಅಭಿಷೇಕ ಮಾಡುವುದು ಇಲ್ಲಿನ ವಿಶೇಷತೆ.
ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸಹಸ್ತ್ರಲಿಂಗೇಶ್ವರ ಕ್ಷೇತ್ರದಲ್ಲಿ ಇದೀಗ ಶಿವರಾತ್ರಿಯ ವಿಶೇಷ ಮಖೆ ಜಾತ್ರೆ ಆರಂಭಗೊಂಡಿದೆ. ಜಿಲ್ಲೆಯ ಪವಿತ್ರ ನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಸಂಗಮ ಭೂಮಿಯಲ್ಲಿ ನೆಲೆನಿಂತ ಈ ಕ್ಷೇತ್ರ ಸಾವಿರಾರು ಸಂಖ್ಯೆಯ ಭಕ್ತಾಧಿಗಳ ಪುಣ್ಯಭೂಮಿಯೂ ಆಗಿದೆ.
ಶಿವರಾತ್ರಿಯ ಈ ಸಂದರ್ಭದಲ್ಲಿ ಕ್ಷೇತ್ರದ ಉದ್ಭವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷತೆಗಳಲ್ಲಿ ಒಂದಾಗಿದೆ.
ನೇತ್ರಾವತಿ ನದಿ ಹಾಗೂ ಕುಮಾರಧಾರಾ ನದಿಗಳು ಸಂಗಮವಾಗುವ ಸ್ಥಳದಲ್ಲಿ ಈ ಉದ್ಭವಲಿಂಗವಿದ್ದು, ಶಿವರಾತ್ರಿಯ ಸಂದರ್ಭದಲ್ಲಿ ನದಿಯ ಮರಳನ್ನು ಸರಿಸಿ ಉದ್ಭವಲಿಂಗವನ್ನು ಭಕ್ತಾಧಿಗಳ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ನೇತ್ರಾವತಿ ನದಿ ನೀರು,ಹಾಲು ಹಾಗೂ ಸೀಯಾಳಾಭಿಷೇಕವನ್ನು ಈ ಶಿವಲಿಂಗಕ್ಕೆ ಮಾಡುವ ಮೂಲಕ ಭಕ್ತಾಧಿಗಳು ಮಹಾಶಿವನ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಇತರ ದೇವಸ್ಥಾನಗಳಂತೆ ದೇವರನ್ನು ದೂರದಿಂದಲೇ ನೋಡಬೇಕಾದ ಪದ್ಧತಿಯೂ ಈ ಕ್ಷೇತ್ರದಲ್ಲಿಲ್ಲ. ಉದ್ಭವಲಿಂಗಕ್ಕೆ ತಾವೇ ಅಭಿಷೇಕ ಮಾಡುವ ಮೂಲಕ ದೇವರನ್ನು ಹತ್ತಿರದಿಂದಲೇ ಬೇಡುವ ಭಕ್ತಾಧಿಗಳು ಇಲ್ಲಿ ಭಕ್ತಿಯಿಂದ ಪುಳಕಿತರಾಗುತ್ತಿದ್ದಾರೆ. ಊರ ಹಾಗೂ ಪರವೂರಿನಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಇಲ್ಲಿ ಆಗಮಿಸುತ್ತಿದ್ದು, ಶಿವರಾತ್ರಿಯಂದು ಕ್ಷೇತ್ರದಲ್ಲಿ ವಿಶೇಷ ಪೂಜೆಯೂ ನೆರವೇರುತ್ತದೆ.
ವರ್ಷಕ್ಕೆ ಮೂರು ಬಾರಿ ಸಹಸ್ತ್ರಲಿಂಗೇಶ್ವರ ದೇವಸ್ಥಾನದಲ್ಲಿ ಮಖೆ ಜಾತ್ರೆ ನಡೆಯುತ್ತದೆ. ಆದರೆ ಮಾಘ ಮಾಸದ ಶಿವರಾತ್ರಿಯಂದು ನಡೆಯುವ ಮಖೆ ಜಾತ್ರೆಗೆ ವಿಶೇಷ ಮಹತ್ವವೂ ಇಲ್ಲಿದೆ.