ಪಾಕಿಸ್ತಾನ ಜಿಂದಾಬಾದ್ ಘೋಷಣೆ : ಮನುಷ್ಯತ್ವ ಮರೆತು ಹೋದಾಗ ಅವಳು ಅಮೂಲ್ಯ ಲಿಯೋನಾ ಆಗುತ್ತಾಳೆ – ಹೃದ್ರೋಗಿ ತಂದೆಯ ಆಕ್ರೋಶ !

ಬೆಂಗಳೂರು: ಹಿಂದೂ ಮುಸ್ಲಿಂ ಸಿಖ್ ಈಸಾಯಿ ಫೆಡರೇಷನ್ ಬೆಂಗಳೂರು ಸಂಘಟನೆ ಆಯೋಜಿಸಿದ್ದ ಸಿಎಎ ಮತ್ತು ಎನ್ಆರ್ ಸಿ ವಿರೋಧಿಸಿ ಸಮಾವೇಶದ ವೇದಿಕೆ ಮೇಲೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 124ಎ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. ಆಕೆಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಈ ವಿಚಾರಣೆ ಬಳಿಕ ಆಕೆಯನ್ನು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ. ಈ ಪ್ರಕರಣ ಗಂಭೀರವಾಗಿದ್ದು, ಪ್ರತಿಭಟನೆ ಆಯೋಜಿಸಿದವರೂ ಆತಂಕಿತರಾಗಿದ್ದಾರೆ. ಅವರಿಗೆ ಪ್ರತಿಭಟನೆಗೆ ಷರತ್ತುಬದ್ಧ ಅನುಮತಿ ಕೊಡಲಾಗಿತ್ತು. ಈ ವಿಚಾರವಾಗಿ, ಬೆಂಗಳೂರಿನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣ ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನವಾಗಿದೆ. ಇಂತಹ ಹೇಳಿಕೆಗಳಿಂದ ಮನಸ್ಸಿಗೆ ನೋವುಂಟಾಗುತ್ತದೆ. ಪ್ರಕರಣದ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ಇಂತಹವರ ವಿರುದ್ದ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಗಳ ವಿರುದ್ಧ ತಂದೆ ಕಿಡಿ

ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ ಲಿಯೋನ್ ವಿರುದ್ಧ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ ಆಕೆ ವಿರುದ್ಧ ಸ್ವತಃ ತಂದೆಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಎ ಹಾಗೂ ಎನ್‍ಸಿಆರ್ ವಿರೋಧಿಸಿ ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಂಸದ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದ ಪ್ರತಿಭಟನಾ ಕಾರ್ಯಕ್ರಮದ ವೇದಿಕೆಯಲ್ಲೇ ಅಮೂಲ್ಯ ಲಿಯೋನಾ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಳೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಅಮೂಲ್ಯಳ ವಿರುದ್ಧ ಕಠಿಣ ಕ್ರಮಕೖಗೊಳ್ಳುವಂತೆ ಆಗ್ರಹಗಳು ವ್ಯಕ್ತವಾಗಿದೆ.
ಖುದ್ದು ವೇದಿಕೆಯಲ್ಲಿದ್ದ ಕಾರ್ಯಕ್ರಮ ಆಯೋಜಕರೇ ಆಕೆಯ ಮೈಕ್ ಕಿತ್ತುಕೊಂಡಿದ್ದರು.ವೇದಿಕೆಯಲ್ಲಿಯೇ ಛೀಮಾರಿ ಹಾಕಿದ್ದರು. ಮತ್ತೊಂದೆಡೆ ಈ ಬಗ್ಗೆ ಅಮೂಲ್ಯಳ ತಂದೆ ವಾಜಿ ಪ್ರತಿಕ್ರಿಯಿಸಿದ್ದು, ಅವಳು ನಮ್ಮ ಮಗಳೇ ಅಲ್ಲ. ಮಗಳ ಕೃತ್ಯವನ್ನು ನಾನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಸಾಕಷ್ಟು ಬಾರಿ ಬುದ್ಧಿ ಹೇಳಿದ್ದೇವೆ. ಏನೇ ಹೇಳಿದ್ರೂ ಆಕೆ ಕೇಳಿರಲಿಲ್ಲ. ಅವಳಿಗೂ ನಮಗೂ ಸಂಬಂಧ ಇಲ್ಲ. ಆಕೆ ತಪ್ಪು ಮಾಡಿದ್ದಾಳೆ ಶಿಕ್ಷೆ ಆಗಬೇಕು ಎಂದು ವಾಜಿ ತಮ್ಮ ಪುತ್ರಿ ಅಮೂಲ್ಯ ಲಿಯೋನಾ ವಿರುದ್ಧ ಕಿಡಿಕಾರಿದರು.
ನಾನು ಎಷ್ಟೇ ಬುದ್ಧಿವಾದ ಹೇಳಿದರೂ ಮಗಳು ಕೇಳುತ್ತಿರಲಿಲ್ಲ. ಕೆಲವರ ಜೊತೆ ಸೇರಿ ಪ್ರಚೋದನಕಾರಿ ಮಾತುಗಳನ್ನು ಆಡುತ್ತಿದ್ದಳು. ಪೊಲೀಸರು ಆಕೆಯನ್ನು ಹೊರಗೆ ಬಿಡುವುದು ಬೇಡ. ನಾನು ಆಕೆಗೆ ಬೇಲ್ ಕೊಡಿಸುವುದಿಲ್ಲ, ಜೈಲಿನಲ್ಲೇ ಇರಲಿ. ಮಗಳ ಪರ ವಾದ ಮಾಡಲು ವಕೀಲರನ್ನು ನೇಮಕ ಮಾಡುವುದಿಲ್ಲ. ಸದ್ಯಕ್ಕೆ ಅವಳನ್ನು ಮನೆಗೂ ಸೇರಿಸುವುದಿಲ್ಲ. ಕಳೆದ ಐದು ದಿನದಿಂದ ಮಗಳು ನನ್ನ ಜೊತೆ ಯಾವುದೇ ಸಂಪರ್ಕದಲ್ಲಿ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಮಾನವೀಯತೆ ಇಲ್ಲದ ಅಮೂಲ್ಯ ಲಿಯೋನ

ನಾನು ಹೃದಯಾಘಾತ ಸಮಸ್ಯೆ ಎದುರಿಸುತ್ತಿರುವೆ, ಆಸ್ಪತ್ರೆಗೆ ಹೋಗಬೇಕು ಬೆಂಗಳೂರಿನಿಂದ ಬಾ ಅಂತ ಹೇಳಿದ್ದೆ. ಆದರೆ ಮಗಳು, ನನಗೆ ನಿನ್ನ ಜವಾಬ್ದಾರಿ ಇಲ್ಲ, ನಾನು ಬರುವುದಿಲ್ಲ. ನಿನ್ನ ಆರೋಗ್ಯ ಜವಾಬ್ದಾರಿ ನೀನೇ ನೋಡಿಕೋ ಎಂದಿದ್ದಳು. ಆಗ ನಾನು ಫೋನ್ ಕಟ್ ಮಾಡಿದೆ. ಆನಂತರ ನಾನು ಆಕೆಯನ್ನು ಸಂಪರ್ಕಿಸಿಲ್ಲ. ಮಗಳ ವಿರುದ್ಧ ಕಾನೂನು ರೀತಿಯ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಿ. ಈ ವಿಚಾರದಲ್ಲಿ ನನ್ನದು ಏನು ಅಭ್ಯಂತರವಿಲ್ಲ ಎಂದು ವಾಜಿ ಹೇಳಿದ್ದಾರೆ.