Voter ID – Adhar ಲಿಂಕ್ ಶೀಘ್ರ: ಕೂತಲಿಂದಲೇ ಚುನಾವಣೆಲೀ ಮತ ಚಲಾಯಿಸಬಹುದು!
ನವದೆಹಲಿ: ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಜೋಡಣೆ ಆಗಬೇಕು. ಅಕ್ರಮ ಮತದಾನ, ಡುಪ್ಲಿಕೇಟ್ ಎಂಟ್ರಿ ಮಾಡಿಸಿಕೊಂಡು ಮತದಾನ ಮಾಡುವವರ ಆಟ ಮುಂದೆ ನಡೆಯಲ್ಲ ಎಂಬಿತ್ಯಾದಿ ವಿಷಯಗಳು ಜನರ ನಡುವೆ ಮಾತುಕತೆಯಲ್ಲಿತ್ತು. ಇದು ಜನರ ಮಾತುಕತೆಗೆ ಸೀಮಿತವಾಗದೇ ಅನುಷ್ಠಾನಗೊಳ್ಳುವ ದಿನ ದೂರವಿಲ್ಲ. ಅಕ್ರಮ ಮತದಾನ ತಡೆಗಟ್ಟು ಸಲುವಾಗಿ ಭಾರತದ ಚುನಾವಣಾ ಆಯೋಗ ನೀಡಿದ ಶಿಫಾರಸಿಗೆ ಅನುಗುಣವಾಗಿ ಕೇಂದ್ರ ಸರ್ಕಾರವೂ ಕಾನೂನು ತಿದ್ದುಪಡಿಗೆ ಚಿಂತನೆ ನಡೆಸಿದೆ.
ಈ ಸಂಬಂಧ ಮಂಗಳವಾರ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳ ಜತೆ ಕಾನೂನು ಸಚಿವಾಲಯ ಮಾತುಕತೆಯನ್ನೂ ನಡೆಸಿತ್ತು. ಸಚಿವಾಲಯ ಸ್ತರದ ಸಭೆಯಲ್ಲಿ, ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, ಆಯುಕ್ತರಾದ ಸುಶೀಲ್ ಚಂದ್ರ, ಅಶೋಕ್ ಲಾವಾಸ ಅವರು ಭಾಗಿಯಾಗಿದ್ದರು. 2004-05 ಕಾಲದಲ್ಲಿ ಮಂಡಿಸಲಾಗಿದ್ದ ಕೆಲವು ಪ್ರಸ್ತಾವನೆಗಳೂ ಸೇರಿ 40 ಪ್ರಸ್ತಾವನೆಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕು.
ಇದು ಚುನಾವಣಾ ವ್ಯವಸ್ಥೆ ಸುಧಾರಣೆಗೆ ಅಗತ್ಯವಾದ ಅಂಶಗಳು ಎಂದು ಸುನಿಲ್ ಅರೋರಾ ಸಭೆಯಲ್ಲಿ ಪ್ರತಿಪಾದಿಸಿದ್ದಾರೆ. ಪ್ರಮುಖವಾಗಿ, ಮತದಾರರ ಪಟ್ಟಿಯನ್ನು ಬಯೋಮೆಟ್ರಿಕ್ ಆಧಾರ್ ಸಂಖ್ಯೆ ಜತೆ ಜೋಡಿಸುವ ಪ್ರಸ್ತಾವನೆಯೂ ಅದರಲ್ಲಿ ಇದೆ. ಕಾನೂನು ಸಚಿವಾಲಯ ಈ ಪ್ರಸ್ತಾವನೆಗೆ ಒಲವು ತೋರಿದ್ದು, ದ ರೆಪ್ರಸೆಂಟೇಷನ್ ಆಫ್ ಪೀಪಲ್ಸ್ ಆ್ಯಕ್ಟ್ ಮತ್ತು ಆಧಾರ್ ಕಾಯ್ದೆಗಳ ತಿದ್ದುಪಡಿಗೆ ಸಚಿವ ಸಂಪುಟದ ಟಿಪ್ಪಣಿ ಶೀಘ್ರವೇ ಸಿದ್ಧವಾಗಲಿದೆ ಎಂಬ ಭರವಸೆಯನ್ನು ಆಯೋಗಕ್ಕೆ ನೀಡಿದೆ.
ಆದರೆ, ಇದಕ್ಕೆ ಯಾವುದೇ ಸಮಯದ ಚೌಕಟ್ಟು ಹಾಕಿಲ್ಲ ಎಂದು ಮೂಲಗಳು ತಿಳಿಸಿವೆ. ಒಮ್ಮೆ ಕಾನೂನು ಪ್ರಕ್ರಿಯೆ ಪೂರ್ಣಗೊಂಡರೆ, ಬಳಿಕ ಜನರಿಗೆ ತಾವಿದ್ದ ಸ್ಥಳದಿಂದಲೇ ತಮ್ಮ ಕ್ಷೇತ್ರದ ಚುನಾವಣೆಗೆ ಮತ ಚಲಾಯಿಸುವುದಕ್ಕೆ ಅವಕಾಶ ನೀಡುವ ಟೆಕ್ನಾಲಜಿ ಕುರಿತು ಅನ್ವೇಷಿಸುತ್ತೇವೆ. ಇದು ಚಾಲ್ತಿಗೆ ಬಂದರೆ ಕೆಲಸಕ್ಕಾಗಿ ವಲಸೆ ಬಂದವರಿಗೆ ಅನುಕೂಲವಾಗಲಿದೆ ಎಂದು ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಲ್ಲದೆ, ಪೇಯ್ಡ್ ನ್ಯೂಸ್, ಸುಳ್ಳು ಅಫಿಡವಿಟ್ ಸಲ್ಲಿಕೆಗಳನ್ನು ಅಪರಾಧವೆಂದು ಪರಿಗಣಿಸುವುದು, ಚುನಾವಣಾ ಕಾನೂನುಗಳನ್ನು ಲಿಂಗ ತಾರತಮ್ಯವಿಲ್ಲದ ತಟಸ್ಥ ನಿಯಮಗಳನ್ನಾಗಿ ಮಾಡುವುದು ಇತ್ಯಾದಿ ಸುಧಾರಣಾ ಕ್ರಮಗಳು ಶಿಫಾರಸಿನಲ್ಲಿ ಇವೆ ಎಂದು ಆಯೋಗದ ಮೂಲಗಳು ತಿಳಿಸಿವೆ.
Source (ಏಜೆನ್ಸೀಸ್)