ಮಲಗಿದ್ದ ವ್ಯಕ್ತಿ ಮೇಲೆ ಲಾರಿ ಹರಿದು ಸಾವು

ಮಂಗಳೂರು : ನಗರದ ಜೆಪ್ಪು ಕುಡುಪಾಡಿ ಕಟ್ಟಿಗೆ ಡಿಪೋವೊಂದರ ಎದುರು ಮಲಗಿದ್ದ ವ್ಯಕ್ತಿಯೊಬ್ಬರ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ.

 

ಮೃತ ವ್ಯಕ್ತಿಯನ್ನು ಹುಬ್ಬಳ್ಳಿ ಮೂಲದ ಸುಧಾಕರ (55) ಎಂದು ಗುರುತಿಸಲಾಗಿದೆ. ಮಂಗಳೂರು ಕಡೆಯಿಂದ ನೀರುಮಾರ್ಗಕ್ಕೆ ಹೋಗಬೇಕಾಗಿದ್ದ ಲಾರಿ ಚಾಲಕ ದಾರಿ ತಪ್ಪಿ ಕುಡುಪಾಡಿ ಕಡೆಗೆ ಲಾರಿ ಚಲಾಯಿಸಿಕೊಂಡು ಬಂದಿದ್ದ. ಕುಡುಪಾಡಿ ಬಳಿ ಒಳ ಚರಂಡಿ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿದ್ದು ಲಾರಿ ಚಾಲಕ ಲಾರಿಯನ್ನು ಕಟ್ಟಿಗೆ ಡಿಪೋ ಎದುರಿದ್ದ ಖಾಲಿ ಜಾಗದಲ್ಲಿ ಚಲಾಯಿಸಿದ್ದಾನೆ. ಈ ಸಂದರ್ಭದಲ್ಲಿ ಸುಧಾಕರ್‌ ಅಲ್ಲಿ ಮಲಗಿರುವುದು ಲಾರಿ ಚಾಲಕನ ಗಮನಕ್ಕೆ ಬರಲಿಲ್ಲ ಎಂದು ಹೇಳಲಾಗಿದೆ.

ಘಟನೆ ನಡೆಯುತ್ತಿದ್ದಂತೆ ಲಾರಿ ಚಾಲಕ ಲಾರಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದು ಬಳಿಕ ಅಕ್ಕಪಕ್ಕದ ಜನರು ಸೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಲಾರಿ ಶಿವಮೊಗ್ಗಕ್ಕೆ ಸೇರಿದ್ದು ಎಂದು ತಿಳಿದು ಬಂದಿದೆ.

ಲಾರಿ ಮಾಲಕನನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಈ ಲಾರಿ ನಗರದ ಮಾರ್ಕೆಟ್‌ಗೆ ತರಕಾರಿ ಹೊತ್ತು ತಂದಿ‌ದ್ದು ಅನ್‌ಲೋಡ್‌ ಆದ ಬಳಿಕ ನೀರುಮಾರ್ಗ ದಾರಿಯಲ್ಲಿ ಮಲ್ಲೂರು ಕಡೆಗೆ ಹೋಗಬೇಕಾಗಿತ್ತು ಎಂಬ ಮಾಹಿತಿ ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಟ್ರಾಫಿಕ್‌ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.