ಫೆ.8 : ಪುತ್ತೂರಿನಲ್ಲಿ ಭಜನಾ ಸತ್ಸಂಗ ಸಮಾವೇಶ – 2020 ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಪಠಣ, ಭಜನಾ ಸಂಕೀರ್ತನಾ ಮೆರವಣಿಗೆ
ಫೆ.8 : ಪುತ್ತೂರಿನಲ್ಲಿ ಭಜನಾ ಸತ್ಸಂಗ ಸಮಾವೇಶ – 2020 ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಪಠಣ, ಭಜನಾ ಸಂಕೀರ್ತನಾ ಮೆರವಣಿಗೆ
ಮಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್, ಭಜನಾ ಸತ್ಸಂಗ ಸಮಿತಿ ಪುತ್ತೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪುತ್ತೂರು ಇದರ ವತಿಯಿಂದ ಭಜನಾ ಸತ್ಸಂಗ ಸಮಾವೇಶ – 2020, ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಪಠಣ, ಭಜನಾ ಸಂಕೀರ್ತನಾ ಮೆರವಣಿಗೆಯು ಫೆ. 8 ರಂದು ಪುತ್ತೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ನಡೆಯಲಿದೆ ಎಂದು ಭಜನಾಸತ್ಸಂಗ ಸಮಾವೇಶ ಸಮಿತಿ ಅಧ್ಯಕ್ಷ ಬಿಳಿಯೂರುಗುತ್ತು ಧನ್ಯಕುಮಾರ್ ರೈ ಹೇಳಿದರು.
ಅವರು ಮಂಗಳೂರು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೆಳಿಗ್ಗೆ 8.3೦ರಿಂದ 9.3೦ರ ತನಕ ನೋಂದಾವಣೆ ನಡೆಯಲಿದ್ದು, 9.3೦ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿರುವುದು. ಮಾಣಿಲ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜರೇಖರಾನಂದ ಸ್ವಾಮೀಜಿ, ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಬೆಳಿಗ್ಗೆ 1೦ರಿಂದ ಸಾಮೂಹಿಕ ಭಜನೆ, ಕುಣಿತ ಭಜನೆ ಪ್ರಾತ್ಯಕ್ಷಿತೆ ನಡೆಯಲಿರುವುದು. ಬೆಳಿಗ್ಗೆ 11 ಗಂಟೆಯಿಂದ ಕೇಂದ್ರ ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ ಗ್ರಾಮ ವಿಕಾಸ ಕಾರ್ಯಕ್ರಮ ನಡೆಯಲಿರುವುದು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಲಿರುವರು. ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ಪುತ್ತೂರು ಶಾಸಕ ಸಂಜೀವ ಮಠಂದೂರು ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರ ಮಾಡಲಿರುವರು. ಶ್ರೀ ಕ್ಷೇ.ಧ.ಗ್ರಾ.ಯೋ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್.ಎಚ್. ಮಂಜುನಾಥ್ ಶುಭಾಶಂಸನೆಗೈಯಲಿರುವರು. ಸಂಜೆ ಗಂಟೆ 4 ರಿಂದ ಸಾಮೂಹಿಕ ಕೋಟಿ ಶಿವಪಂಚಾಕ್ಷರಿ ಜಪಯಜ್ಞ, ಸಂಜೆ 4.3೦ರಿಂದ ಭಜನೋತ್ಸವ, 5.3೦ರಿಂದ ಭಜನಾ ಸತ್ಸಂಗ ಸಮಾವೇಶ ನಡೆಯಲಿರುವುದು.
ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಲಿದ್ದು, ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಧರ್ಮಸ್ಥಳ ಕ್ಷೇತ್ರದ ಹೇಮಾವತಿ ವಿ. ಹೆಗ್ಗಡೆ, ಸಂಸದ ನಳಿನ್ಕುಮಾರ್ ಕಟೀಲ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಪುತ್ತೂರು ಕಾರ್ಯನಿರ್ವಹಣಾಧಿಕಾರಿ ನವೀನ್ಕುಮಾರ್ ಭಂಡಾರಿ ಎಸ್. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಸಂಜೆ 6.3೦ರಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ವಿದ್ಯಾರ್ಥಿಗಳಿಂದ ಎಸ್ಡಿಎಂ ಕಲಾ ವೈಭವ ಕಾರ್ಯಕ್ರಮ ನಡೆಯಲಿರುವುದು ಎಂದು ಮಾಹಿತಿ ನೀಡಿದರು.
ಸಮಾವೇಶ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ,ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಪದ್ಮನಾಭ ಶೆಟ್ಟಿ, ಸಂತೋಷ್ ಉಪಸ್ಥಿತರಿದ್ದರು.