ಕುಟ್ರುಪ್ಪಾಡಿ ಪಿ.ಡಿ.ಓ ಮೇಲೆ ಹಲ್ಲೆಗೆ ಯತ್ನ,ನಿಂದನೆ,ಜೀವ ಬೆದರಿಕೆ : ನಾಲ್ವರ ವಿರುದ್ಧ ಕಡಬ ಠಾಣೆಯಲ್ಲಿ ದೂರು ದಾಖಲು

Share the Article

ಕಡಬ : ಕುಟ್ರುಪಾಡಿ ಗ್ರಾಮದ “ಎಲ್ಯ-ಪಾನಗ” ಎಂಬಲ್ಲಿನ ಪಂಚಾಯತ್ ರಸ್ತೆಯ ದುರಸ್ತಿಯ ವೇಳೆ ರಸ್ತೆ ಚರಂಡಿ ದುರಸ್ತಿಗೆ ಅಡ್ಡಿಪಡಿಸಿ ಕುಟ್ರುಪಾಡಿ ಗ್ರಾ.ಪಂ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಹಲ್ಲೆಗೆ ಯತ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿದ ಆರೋಪದ ಮೇಲೆ ನಾಲ್ವರ ವಿರುದ್ದ ಕಡಬ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಟ್ರುಪ್ಪಾಡಿ ಗ್ರಾಮ ಪಂಚಾಯತ್‌ಗೆ ಸಂಬಂಧಿಸಿದ ಎಲ್ಯ-ಪಾನಗ ರಸ್ತೆಯ ದುರಸ್ತಿಗೆ ಕಳೆದ ಸಾಲಿನ ಕ್ರಿಯಾ ಯೋಜನೆಯಲ್ಲಿ ಹಣ ಇಟ್ಟಿದ್ದು ಈ ಹಿನ್ನೆಲೆಯಲ್ಲಿ ರಸ್ತೆಯ ಚರಂಡಿ ದುರಸ್ತಿಗೆ ಪಂಚಾಯತ್ ಮುಂದಾಗಿತ್ತು. ಈ ಸಮಯದಲ್ಲಿ ಸ್ಥಳದಲ್ಲಿದ್ದ ಪಂಚಾಯತ್ ಅಭಿವೃದ್ದಿ ಅಧಿಕಾರಿ ವಿಲ್ಪೈಡ್ ಲಾರೆನ್ಸ್ ರೋಡ್ರಿಗಸ್ ಹಾಗೂ ಸಿಬಂದಿಗಳಿಗೆ ಪುತ್ತೂರು ನಿವಾಸಿಗಳಾದ ಪ್ರಸನ್ನ ಶೆಣೈ, ಅವರ ಪತ್ನಿ ಸುಮಂಗಲ ಮತ್ತು ಪಾನಗ ನಿವಾಸಿಗಳಾದ ಸತ್ಯಪಾಲ, ಪೊಡಿಯನ್ ಅವರುಗಳು ರಸ್ತೆ ದುರಸ್ತಿ ಹಾಗೂ ಚರಂಡಿ ದುರಸ್ತಿಪಡಿಸದಂತೆ ಅಡ್ಡಿಪಡಿಸಿ ಪಿಡಿಒರವರ ಮೇಲೆ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಒಡ್ಡಿದ್ದರು.

ಈ ಬಗ್ಗೆ ಪೋಲಿಸ್ ಹಾಗೂ ಮೇಲಾಧಿಕಾರಿಗಳಿಗೆ ಪಿಡಿಒ ವಿಲ್ಫ್ರೆಡ್ ರೋಡ್ರಿಗಸ್ ದೂರು ನೀಡಿದ್ದರು. ಈ ಬಗ್ಗೆ ಐಪಿಸಿ ಸೆಕ್ಷನ್ ೩೪೧.೫೦೪.೩೫೩. ೫೦೬. ಆರ್/ಡಬ್ಲ್ಯೂ ೩೪ ಐಪಿಸಿ ಪ್ರಕಾರ ಈ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ರಸ್ತೆ ಚರಂಡಿ ದುರಸ್ತಿಗೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಪುತ್ತೂರು ತಾ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಕಡಬ ಎಸ್. ಐ ರುಕ್ಮ ನಾಯ್ಕ್, ಗ್ರಾಮಕರಣಿಕ ರಂಜನ್, ಅಭಿವೃದ್ದಿ ಅಧಿಕಾರಿ ವಿಲ್ಪೈಡ್ ಲಾರೆನ್ಸ್ ರೋಡ್ರಿಗಸ್, ಪಂಚಾಯತ್ ಅಧ್ಯಕ್ಷೆ ವಿದ್ಯಾ.ಕೆ ಗೋಗಟೆ, ಉಪಾಧ್ಯಕ್ಷ ಆನಂದ ಪೂಜಾರಿ ಅಲಾರ್ಮೆ, ಸದಸ್ಯ ಲಿಂಗಪ್ಪ ಗೌಡ ಸೇರಿದಂತೆ ಅಧಿಕಾರಿಗಳ ಮತ್ತು ಸ್ಥಳೀಯ ಗ್ರಾಮಸ್ಥರ ಸಮ್ಮುಖದಲ್ಲಿ ರಸ್ತೆ ದುರಸ್ತಿ ಹಾಗೂ ಚರಂಡಿ ದುರಸ್ತಿ ಮಾಡಿಸಲಾಗಿದೆ.

Leave A Reply

Your email address will not be published.