ಲಕ್ನೋ : ಉತ್ತರ ಪ್ರದೇಶ ರಾಜಧಾನಿ ಲಖನೌ ನ ಹಜರತ್ಗಂಜ್ನಲ್ಲಿ ಭಾನುವಾರ ಬೆಳ್ಳಂಬೆಳಗ್ಗೆದುಷ್ಕರ್ಮಿಗಳು ಗುಂಡು ಹಾರಿಸಿ ವಿಶ್ವ ಹಿಂದು ಮಹಾಸಭಾದ ರಾಜ್ಯಾಧ್ಯಕ್ಷ ರಂಜಿತ್ ಬಚ್ಚನ್ ಅವರನ್ನು ಹತ್ಯೆಮಾಡಿದ್ದಾರೆ.
ಇಂದು ಬೆಳಗ್ಗೆ ವಾಯುವಿಹಾರಕ್ಕೆಂದು ತೆರಳಿದ್ದಾಗ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ತಂಡ ರಂಜಿತ್ ಬಚ್ಚನ್ ಮೇಲೆ ಫೈರಿಂಗ್ ಮಾಡಿದೆ. ತಲೆಗೆ ಗುರಿಯಾಗಿರಿಸಿಕೊಂಡು ಅನೇಕ ಬಾರಿ ಶೂಟ್ ಮಾಡಿದ್ದು, ಪರಿಣಾಮ ರಂಜಿತ್ ಬಚ್ಚನ್ ಅವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಗುಂಡಿನ ದಾಳಿಯಲ್ಲಿ ಬಚ್ಚನ್ ಅವರ ಸಹೋದರನಿಗೂ ಗುಂಡು ತಾಗಿದ್ದು, ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಖನೌದ ಹಜರತ್ಗಂಜ್ನಲ್ಲಿರುವ ಸಿಡಿಆರ್ಐ ಕಟ್ಟಡ ಸಮೀಪದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಘಟನೆಯ ಸುದ್ದಿ ತಿಳಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೆಂಡಾಮಂಡಲರಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಲಖನೌ ಕೇಂದ್ರ ಡಿಸಿಪಿ ದಿನೇಶ್ ಸಿಂಗ್ ಅವರು ಮಾತನಾಡಿ ಪೊಲೀಸ್ ತಂಡವೊಂದನ್ನು ರಚನೆ ಮಾಡಲಾಗಿದ್ದು, ಅಪರಾಧಿಗಳ ಶೀಘ್ರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದಿದ್ದಾರೆ.