ಪೋಳ್ಯ : ಸಂಭ್ರಮದ ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಜಾತ್ರೋತ್ಸವ
ಪುತ್ತೂರು : ಕಬಕ ಸಮೀಪದ ಪೋಳ್ಯ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವರ ಅದ್ದೂರಿಯ ಜಾತ್ರೊತ್ಸವ ಫೆ.1ರಂದು ನಡೆಯಿತು. ಪೂರ್ವಾಹ್ನ ಶ್ರೀ ದೇವರಿಗೆ ಮಾಹಾ ಪೂಜೆ, ಬಳಿಕ ಉತ್ಸವ ಮೂರ್ತಿಯ ರಥಾವರೋಹಣ ಗೈದು ರಥಸಪ್ತಮಿ ಜರುಗಿತು. ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರಿ ಸುಧಾಕರ ಶೆಟ್ಟಿ ಹಾಗೂ ಪುತ್ತೂರು ವಿಧಾನ ಕ್ಷೇತ್ರದ ನಿಕಟಪೂರ್ವ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿಯವರು ಬಾಗವಹಿಸಿ ರಥ ಎಳೆದರು. ಆ ಬಳಿಕ ಬಟ್ಟಲು ಕಾಣಿಕೆ ನಡೆದು ಮಹಾ ಅನ್ನ ಸಂತರ್ಪಣೆ ಜರುಗಿತು. ಸಂಜೆ ಗಂಟೆ 7ಕ್ಕೆ ಬಲಿ ಹೊರಟು ರಾತ್ರಿ 9.30 ಕ್ಕೆ ಮಹಾ ರಥೋತ್ಸವ, ಸುಡುಮದ್ದು ಪ್ರದರ್ಶನ ನಡೆಯಿತು. ರಾತ್ರಿ ಗಂಟೆ ಹತ್ತಕ್ಕೆ ಬಲಿ ಉತ್ಸವ, ದರ್ಶನ ಬಲಿ ಕಟ್ಟೆಪೂಜೆ, ಅಷ್ಟಾವಧಾನ , ಮಂಗಳ ಪ್ರದಕ್ಷಿಣೆ, ಮಹಾಮಂಗಳಾರತಿ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಾಯಂಕಾಲ ಭಜನೆ, ಉಂಡೆಮನೆ ಕೃಷ್ಣ ಭಟ್ ಬಳಗದವರಿಂದ ಯಕ್ಷಗಾನ ಭಕ್ತರಿಗೆ ಮನೋರಂಜನೆ ಒದಗಿಸಿತು. ಪುತ್ತೂರಿನ ಹಾಲಿ ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತ ಜನರ ಜತೆ ಉಭಯ ಕುಶಲೋಪರಿ ನಡೆಸಿದರು. ತನ್ನ ಶಾಸಕ ಕ್ಷೇತ್ರಾಭಿವೃದ್ದಿ ನಿಧಿಯಿಂದ ಅನುದಾನ ಕಲ್ಪಿಸಿದ ನೂತನ ಶೌಚಾಲಯವನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಬಿಜೆಪಿ ರೈತ ಮೊರ್ಚಾದ ಕಾರ್ಯದರ್ಶಿ ಶ್ರೀ ರಾಘವೆಂದ್ರ ಭಟ್ ಕೆದಿಲ ಹಾಗೂ ಕಾಮಗಾರಿ ಗುತ್ತಿಗೆದಾರ ಶ್ರೀ ನವಿನ್ ಗೌಡ ಪಡ್ನೂರು ಉಪಸ್ಥಿತರಿದ್ದರು. ದೇವಸ್ಥಾನದ ಆಡಳಿತ ಮಂಡಲಿ ಅಧ್ಯಕ್ಷರಾದ ಶ್ರೀ ಉಮಾಶಂಕರ ಎದುರ್ಕಳ ಹಾಗೂ ಆಡಳಿತ ಮಂಡಲಿ ಮತ್ತು ಉತ್ಸವ ಸಮಿತಿಯ ವಿವಿಧ ಪದಾಧಿಕಾರಿಗಳು ಶಾಸಕರಿಗೂ ಅತಿಥಿಗಳಿಗೂ ಗೌರವಾರ್ಪಣೆ ಸಲ್ಲಿಸದರು. 23,000 ಸಾವಿರ ರೂಪಾಯಿಗೆ ಹರಾಜಾದ ಮಹಾ ಲಡ್ಡು ಪ್ರಸಾದ. ಪ್ರತಿ ವರ್ಷ ಸಂಪ್ರದಾಯದಂತೆ ದೇವರಿಗೆ ಶಾಸ್ತ್ರೋಕ್ತವಾಗಿ ತಯಾರಿಸಿ ಸಮರ್ಪಿಸಲಾದ ಸುಮಾರು 3ಕಿಲೋ ತೂಕದ “ಮಹಾ ಲಡ್ಡು” ಪ್ರಸಾದವನ್ನು ಗರುಡೊತ್ಸವದ ಬಳಿಕ ಹರಾಜು ಮಾಡಲಾಗಿ ರೂಪಾಯಿ 23,000/-ಕ್ಕೆ ಕಾವೇರಿ ಎಂಟರ್ಪ್ರೈಸಸ್ ಮಾಲಕ ಶ್ರೀ ದಿನೇಶ್ ಗೌಡ ಪೋಳ್ಯ ಪಡೆದುಕೊಂಡು ನೆರೆದಿದ್ದ ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಿದರು.ಹಾರಾಜಿನಲ್ಲಿ ಒಟ್ಟು ಹತ್ತು ಜನ ಪಾಲ್ಗೊಂಡಿದ್ದು ಪೋಳ್ಯದ ಅರ್ಚಕ ಅಣ್ಣಪ್ಪ ಭಟ್ ರವರ ರೂ.22,700/-ಗೆ ಪ್ರತಿಯಾಗಿ 23,000/- ಅಂತಿಮ ಹಾರಾಜು ಮುಕ್ತಾಯಗೊಂಡಿತು. ಸರಳತೆ ಮೆರೆದ ಪೋಲೀಸ್ ಇನ್ಸ್ಪೆಕ್ಟರ್: ಜಾತ್ರೋತ್ಸವ ದಲ್ಲಿ ಪಾಲ್ಗೊಂಡ ಪುತ್ತೂರು ನಗರ ಆರಕ್ಷಕ ಠಾಣೆಯ ಆರಕ್ಷಕ ನಿರೀಕ್ಷಕರಾದ ಶ್ರೀ ತಿಮ್ಮಪ್ಪ ನಾಯ್ಕ್ ರವರು ತಮ್ಮ ಧರ್ಮಪತ್ನಿ ಹಾಗೂ ಕುಟುಂಬ ದವರೊಂದಿಗೆ ಆಗಮಿಸಿ ದೇವರ ದರ್ಶನ ಪಡೆದು ಗರುಡೋತ್ಸವದಲ್ಲಿ ಪಾಲ್ಗೊಂಡು ನೆರೆದ ಭಕ್ತರೊಂದಿಗೆ ಒಂದಷ್ಟು ವಿಚಾರ ವಿನಿಮಯ ನಡೆಸಿದರು. ಬಳಿಕ ಸಹಪಂಕ್ತಿ ಭೋಜನ ಸ್ವೀಕರಿಸಿ ಸರಳತೆ ಮೆರೆದು ಎಲ್ಲರ ಪ್ರಸಂಸೆಗೆ ಪಾತ್ರರಾದರು.