ಕೋಳಿ ಕಳ್ಳರಲ್ಲ, ಕೋಳಿಫಾರ್ಮ್ ಕಳ್ಳರು । ಪುತ್ತೂರಿನ ಕೆಮ್ಮಿಂಜೆಯ ಚಾರ್ಲ್ಸ್ ಲೂಯಿಸ್‌ಗೆ ಸಕತ್ ಧೋಕಾ !

ಕೋಳಿಫಾರ್ಮ್ ಹಾಕಿ ದುಡ್ಡು ಮಾಡಲು ಹೊರಟ ಪುತ್ತೂರಿನ ವೃದ್ಧರೊಬ್ಬರು ಲಕ್ಷಾಂತರ ರೂಪಾಯಿ ಮೋಸ ಹೋಗಿದ್ದಾರೆ.

ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಮ್ಮಿಂಜೆ ನಿವಾಸಿ ಚಾರ್ಲ್ಸ್ ಲೂಯಿಸ್‌ (70) ಎಂಬವರು ದಿನಾಂಕ 01.08.2018 ರಂದು ಪ್ರಕಟಣೆಗೊಂಡಿದ್ದ ಜಾಹೀರಾತನ್ನು ನೋಡಿ ಮೈಸೂರಿಗೆ ತೆರಳಿ ಆರೋಪಿಗಳಾದ ತಿರುವನಂತಪುರಂ ನೆಯ್ಯಟ್ಟಿನಕರದ ಒಮೇಗಾ 3-6 ಪೌಲ್ಟ್ರೀ ಇಂಜಿನಿಯರಿಂಗ್ & ಟೆಕ್ನಾಲಜೀಸ್ ನ ಜತೆ ಕೋಳಿ ಫಾರ್ಮ್ ಹಾಕುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದರು.

ಎಲ್‌.ಎಸ್‌ .ಪ್ರಮೋದ್‌, ಸಂಪತ್‌ ಶೆರ್ಲಿ, ಪರಾಮ್ದ್‌ ಲಜಾರ್‌ ಸುಶೀಲ ಎಂಬವರೊಂದಿಗೆ ಮಾಡಿಕೊಂಡ ಒಪ್ಪಂದದಂತೆ, ಈಗ ದೂರುದಾರರಾದ ಚಾರ್ಲ್ಸ್ ಲೂಯಿಸ್‌ ಸ್ಥಳದಲ್ಲಿ, ಚಾರ್ಲ್ಸ್ ಲೂಯಿಸ್‌ ಅವರದೇ ಖರ್ಚಿನಲ್ಲಿ ಕೋಳಿ ಫಾರಂನ್ನು ಮಾಡಿದಲ್ಲಿ, ಕೋಳಿಗಳನ್ನು ತಾವೇ ನೀಡುತ್ತೇವೆ ಹಾಗೂ ಇದರಿಂದ ಬರುವ ಮೊಟ್ಟೆಯನ್ನು ತಾವೇ ಖರೀದಿಸುತ್ತೇವೆ ಎಂದು ಮಾತುಕತೆಯಾಗಿತ್ತು.

ಅದರಂತೆ ಚಾರ್ಲ್ಸ್ ಲೂಯಿಸ್‌ ರು 5 ಲಕ್ಷಕ್ಕೂ ಮಿಕ್ಕಿ ಖರ್ಚು ಮಾಡಿ ಶೆಡ್ ನಿರ್ಮಿಸಿ, ಆರೋಪಿಗಳು ತಿಳಿಸಿದ ಬ್ಯಾಂಕ್ ಖಾತೆಗೆ ಒಟ್ಟು ರೂ 5,00,000/- ಹಣವನ್ನು ಬ್ಯಾಂಕ್ ಮೂಲಕ ನೀಡಿ ಒಟ್ಟು 2 ಬಾರಿ ಆರೋಪಿಗಳ ಜೊತೆಯಲ್ಲಿ ಕರಾರು ಪತ್ರವೊಂದನ್ನು ತಯಾರಿಸಿಕೊಂಡಿದ್ದು, ಸದ್ರಿ ಕರಾರಿನಂತೆಯೂ ಆರೋಪಿಗಳು ನಡೆದುಕೊಳ್ಳದೆ ಫಿರ್ಯಾದುದಾರರಿಗೆ ನಷ್ಟವನ್ನುಂಟು ಮಾಡಿರುತ್ತಾರೆ.

ನಂತರ ಆರೋಪಿಗಳಿಗೆ ಹಲವಾರು ಬಾರಿ ದೂರವಾಣಿ ಕರೆ ಮಾಡಿದಾಗಲೂ ಸ್ವೀಕರಿಸದೇ ಇದ್ದುದರಿಂದ ಗಾಬರಿಗೊಂಡ ಚಾರ್ಲ್ಸ್ ಲೂಯಿಸ್‌ ರು ದಿನಾಂಕ : 13.12.2019 ರಂದು ಆರೋಪಿಗಳ ಕಚೇರಿಯಾದ ಮೈಸೂರು ನಗರದ ನಂಜನಗೂಡಿಗೆ ಹೋಗಿ ನೋಡಿದಾಗ ಆರೋಪಿಗಳು ತಮ್ಮ ಸಂಸ್ಥೆಯನ್ನು ಖಾಲಿ ಮಾಡಿ ಹೋಗಿದ್ದರು.

ಈ ಬಗ್ಗೆ ಚಾರ್ಲ್ಸ್ ಲೂಯಿಸ್‌ ರವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವಂಚನೆಯ ಹಲವು ಪ್ರಕರಣಗಳು ದಾಖಲಾಗಿರುತ್ತದೆ.

ಫ್ರ್ಯಾಂಚೈಸೀ ಕೊಡುತ್ತೇವೆ, ಕೋಳಿಫಾರಂ- ಆಡಿನ ಫಾರ್ಮ್ ನಾವೇ ಬಂದು ಪೂರ್ತಿ ಕಟ್ಟಿ ಕೊಡುತ್ತೇವೆ. ಎಲ್ಲವೂ ನಮ್ಮದೇ. ಎಲ್ಲ ರಾ ಮೆಟೀರಿಯಲ್ಲನ್ನೂ ನಾವೇ ಕೊಡುತ್ತೇವೆ. ನೀವು ಮ್ಯಾನೇಜ್ ಮಾಡುತ್ತಾ ಹೋದರೆ ಸಾಕು- ಹೀಗೆಂದು ಜಾಹೀರಾತು ನೀಡುವ ಹಲವು ಕಂಪನಿಗಳು ಉದ್ಯಮಿಗಳನ್ನು ಆಕರ್ಷಿತ್ತವೆ. ಕೆಲವು ಸಾಚಾ ಕಂಪೆನಿಗಳಿದ್ದರೂ, ಹಲವು ಇಂತಹ ಮೋಸ ಮಾಡುವ ಕಾರಣಕ್ಕೇ ಹುಟ್ಟಿಕೊಂಡಂತಹ ಕಂಪನಿಗಳು.

ಎಚ್ಚರ ಗ್ರಾಹಕ ಎಚ್ಚರ !!

Leave A Reply

Your email address will not be published.